ಭಾನುವಾರ, ಆಗಸ್ಟ್ 14, 2022
20 °C
ಮೂಲಸೌಕರ್ಯಗಳನ್ನು ಪಾಲಿಕೆ ಕಲ್ಪಿಸುತ್ತಿಲ್ಲ: ಉದ್ಯಮಿಗಳ ಅಳಲು

ದಾವಣಗೆರೆ: ಒಳಚರಂಡಿಗಾಗಿ ಕಾಯುತ್ತಿದೆ ಇಂಡಸ್ಟ್ರೀಯಲ್‌ ಎಸ್ಟೇಟ್‌

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬೈಪಾಸ್‌ ಬಳಿಯ ಲೋಕಿಕೆರೆ ರಸ್ತೆಯಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕಾ ವಸಾಹತಿನಲ್ಲಿ ಒಳಚರಂಡಿ ವ್ಯವಸ್ಥೆ ಸರಿ ಇಲ್ಲ. 40 ವರ್ಷಗಳ ಹಿಂದೆ ಕಲ್ಪಿಸಿದ್ದ ಒಳಚರಂಡಿ ವ್ಯವಸ್ಥೆ ಈಗ ಪೂರ್ತಿ ಕೆಟ್ಟು ಹೋಗಿದೆ. ಈಗಿನ ಸಣ್ಣ ಕೈಗಾರಿಕೆಗಳ ಪ್ರಮಾಣಕ್ಕೆ ಅನುಗುಣವಾಗಿ ಒಳಚರಂಡಿ ಆಗಿಬೇಕಿದೆ. ಆದರೆ, ಮಹಾನಗರ ಪಾಲಿಕೆಯಿಂದ ಯಾವುದೇ ರೀತಿಯ ಸ್ಪಂದನೆ ದೊರೆಯುತ್ತಿಲ್ಲ ಎಂಬುದು ಕೈಗಾರಿಕೋದ್ಯಮಿಗಳ ಅಳಲಾಗಿದೆ.

ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು 1980ರಲ್ಲಿ ನೂರಾರು ಎಕರೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಡಿಯಲ್ಲಿ ಈ ಕೈಗಾರಿಕಾ ಪ್ರದೇಶ ಜನ್ಮತಾಳಿತು. ಅದರಲ್ಲಿ 19 ಎಕರೆಯನ್ನು ಇಂಡಸ್ಟ್ರಿಯಲ್ ಎಸ್ಟೇಟ್ ಎಂದು ಗುರುತು ಮಾಡಿ ಅದನ್ನು ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (ಕೆಎಸ್‍ಎಸ್‍ಐಡಿಸಿ) ಅಡಿ ಅಭಿವೃದ್ಧಿ ಪಡಿಸಲಾಗಿತ್ತು. 2003ರಲ್ಲಿ ಆಗಿನ ದಾವಣಗೆರೆ ನಗರಸಭೆಗೆ ಹಸ್ತಾಂತರಿಸಲಾಗಿತ್ತು. ನಗರಸಭೆಯು ನಂತರದ ದಿನಗಳಲ್ಲಿ ಮಹಾನಗರ ಪಾಲಿಕೆಯಾಗಿ ಉನ್ನತೀಕರಣಗೊಂಡರೂ  ಸಮಸ್ಯೆ ಮಾತ್ರ ಮುಂದುವರಿದಿದೆ.

ಕೆಎಸ್‌ಎಸ್‌ಐಡಿಸಿ ವ್ಯಾಪ್ತಿಯಲ್ಲಿದ್ದಾಗ ರಸ್ತೆ, ಚರಂಡಿ, ಒಳಚರಂಡಿ, ಬೀದಿದೀಪ ಸಹಿತ ಎಲ್ಲ ಮೂಲಸೌಕರ್ಯಗಳನ್ನು ಆಗಿನ ಕಾಲಕ್ಕೆ ಅನುಗುಣವಾಗಿ ಒದಗಿಸಲಾಗಿತ್ತು. ನಗರಸಭೆಗೆ ಹಸ್ತಾಂತರಿಸಿದ ಬಳಿಕ ಈ ಎಸ್ಟೇಟ್‌ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬಸವನಾಳ್‌ ಇಂಡಸ್ಟ್ರೀಸ್‌ ಮಾಲೀಕರೂ ಆಗಿರುವ ಜಿಲ್ಲಾ ಕೈಗಾರಿಕೋದ್ಯಮಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ.

ಲೋಕಿಕೆರೆ ರಸ್ತೆಯಿಂದ ಕೈಗಾರಿಕಾ ಎಸ್ಟೇಟ್‌ಗೆ ಪ್ರವೇಶಿಸುವಲ್ಲಿ 50 ಅಡಿಯಷ್ಟು ರಸ್ತೆಯ ನವೀಕರಣ ಆಗ
ಬೇಕಿದೆ. ಒಳಚರಂಡಿ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಬೇಕು. ಚರಂಡಿ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ
ಮತ್ತು ಕಸ ವಿಲೇವಾರಿ ಆಗಬೇಕು. ಚುನಾವಣೆ ಸಂದರ್ಭಕ್ಕೆ ಬಳಕೆಯಾಗುವ ಒಂದಿಷ್ಟು ಮತಗಳು ಇಲ್ಲಿಯೂ ಇದ್ದಿದ್ದರೆ ಸಹಜವಾಗಿ ಅಭಿವೃದ್ಧಿಯಾಗುತ್ತಿತ್ತು. ಮತದಾರರಿಲ್ಲದಕಾರಣ ಜನಪ್ರತಿನಿಧಿಗಳೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಜನಪ್ರತಿನಿಧಿಗಳ ಬೆಂಬಲ ಸಿಕ್ಕಿದ್ದರೆ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಲು ಸುಲಭವಾಗುತ್ತಿತ್ತು ಎಂಬುದು ಅವರ ಅಭಿಪ್ರಾಯ.

ಉಪ್ಪಿನಕಾಯಿಯಿಂದ ಹಿಡಿದು ಪೀಠೋಪಕರಣಗಳವರೆಗೆ, ಪೈಪ್‌ಗಳಿಂದ ಹಿಡಿದು, ಎಲೆಕ್ಟ್ರಿಕಲ್‌ ವರ್ಕ್ಸ್‌ ವರೆಗೆ ವಿವಿಧ ಉಪಕರಣ ತಯಾರಿಸುವ 58 ಸಣ್ಣ ಕೈಗಾರಿಕೆಗಳು ಇಲ್ಲಿವೆ. 2500ಕ್ಕೂ ಅಧಿಕ ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಸ್ವಚ್ಛತೆ ಇಲ್ಲ.
ಹಳೇ ಒಳಚರಂಡಿ ಎಲ್ಲೆಂದರಲ್ಲಿ ಕುಸಿದು ಮಣ್ಣು ತುಂಬಿಕೊಂಡಿದೆ. ಒಳಚರಂಡಿಯ ನೀರು ಕೈಗಾರಿಕೆಗಳ ಒಳಗೆ ನುಗ್ಗುತ್ತಿದೆ ಎಂದು ಸಂಘದ ಉಪಾಧ್ಯಕ್ಷ ಎಂ.ಆನಂದ ಆರೋಪಿಸಿದರು.

‘ಕನಿಷ್ಠ ₹ 1 ಕೋಟಿ ಬೇಕು’

ಕೈಗಾರಿಕಾ ವಸಾಹತಿನಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆ ಇದೆ. ಕನಿಷ್ಠ ₹ 1 ಕೋಟಿಯಾದರೂ ಬೇಕು. ಅನುದಾನ ಬಂದಾಗ ಆದ್ಯತೆಯ ಮೇರೆಗೆ ಒಳಚರಂಡಿ ನಿರ್ಮಿಸಿ ಕೊಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್‌ ಪಿ. ಮುದಜ್ಜಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೈಗಾರಿಕೆಗಳ ತ್ಯಾಜ್ಯವನ್ನು ಹೊರಗೆ ಎಸೆಯುವುದರಿಂದ ಅವು ಒಳಚರಂಡಿಯಲ್ಲಿ ತುಂಬಿ ಬ್ಲಾಕ್‌ ಆಗಿದೆ. ಈ ರೀತಿ ತ್ಯಾಜ್ಯ ಬಿಸಾಡದಂತೆ ಕೈಗಾರಿಕೆಗಳು ಎಚ್ಚರಿಕೆ ವಹಿಸಿ, ಸ್ವಚ್ಛತೆಯನ್ನು ಕಾಪಾಡಬೇಕು. ಸುಮಾರು ₹ 30 ಲಕ್ಷ ಕಂದಾಯವನ್ನೇ ಕಟ್ಟಿಲ್ಲ. ಇದಲ್ಲದೇ ನೀರಿನ ಕಂದಾಯವೂ ಬಾಕಿ ಇದೆ. ತೆರಿಗೆಯನ್ನು ಕಟ್ಟಬೇಕು. ಆಗ ಮೂಲಸೌಲಭ್ಯ ಒದಗಿಸಲು ಸುಲಭವಾಗುತ್ತದೆ ಎಂದು ತಿಳಿಸಿದರು.

* ದಾವಣಗೆರೆ ಮಹಾನಗರ ಪಾಲಿಕೆಯು ಕೈಗಾರಿಕಾ ವಸಾಹತಿಗೆ ಒಳಚರಂಡಿ ಸೇರಿ ಮೂಲಸೌಲಭ್ಯ ಕಲ್ಪಿಸಬೇಕು. ಇಲ್ಲವೇ ಕೆಎಸ್‌ಎಸ್‌ಡಿಎಲ್‌ಗೆ ಮತ್ತೆ ಹಸ್ತಾಂತರಿಸಬೇಕು.

–ಶಂಭುಲಿಂಗಪ್ಪ, ದಾವಣಗೆರೆ ಜಿಲ್ಲಾ ಕೈಗಾರಿಕೋದ್ಯಮಗಳ ಸಂಘದ ಅಧ್ಯಕ್ಷ

* ಇಲ್ಲಿಂದ ವರ್ಷಕ್ಕೆ ಕನಿಷ್ಠ ₹ 4.5 ಕೋಟಿ ಜಿಎಸ್‌ಟಿ ಸರ್ಕಾರಕ್ಕೆ ಹೋಗುತ್ತದೆ. ಇಷ್ಟೊಂದು ತೆರಿಗೆ ನೀಡುತ್ತಿದ್ದರೂ ಕೈಗಾರಿಕಾ ಎಸ್ಟೇಟ್‌ ಅನ್ನು ನಿರ್ಲಕ್ಷಿಸಲಾಗುತ್ತಿದೆ.

–ಎಂ.ಆನಂದ, ದಾವಣಗೆರೆ ಜಿಲ್ಲಾ ಕೈಗಾರಿಕೋದ್ಯಮಗಳ ಸಂಘದ ಉಪಾಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು