‘ಬೆಳೆ ಪದ್ಧತಿ ಬದಲಾದರೂ ವೇಳಾಪಟ್ಟಿ ಹಳೆಯದು’
‘ಕೂಡಲೇ ಕಾಲುವೆಗಳಿಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗಲಿದೆ. ಹಂತಹಂತವಾಗಿ ನೀರು ಬಿಡುವ ಕಾರಣ ನೀರು ಜಮೀನುಗಳಿಗೆ ಬರಲು ಕನಿಷ್ಠ 4 ದಿನ ಬೇಕು. ಈಗ ನೀರು ಉಳಿಸಿಕೊಂಡು ಮುಂದೆ ಬಿಡುತ್ತೇವೆ ಎಂದರೆ ಸರಿಯಲ್ಲ. ಅಗತ್ಯಕ್ಕೆ ಅನುಗುಣವಾಗಿ ನೀರು ಬಿಡಬೇಕು’ ಎಂದು ಭದ್ರಾ ಕಾಡಾ ನೀರಾವರಿ ಸಲಹಾ ಸಮಿತಿ ಸದಸ್ಯ ತೇಜಸ್ವಿ ಪಟೇಲ್ ಒತ್ತಾಯಿಸಿದರು. ‘ಭದ್ರಾ ಜಲಾಶಯ ನಿರ್ಮಾಣವಾದ ಸಂದರ್ಭದಲ್ಲಿನ ಬೆಳೆ ಪದ್ಧತಿ ಅನುಸಾರವೇ ಈಗಲೂ ನೀರು ಬಿಡಲಾಗುತ್ತಿದೆ. ಕೆಲ ದಶಕದಿಂದ ಈಚೆಗೆ ಬೆಳೆ ಪದ್ಧತಿ ಬದಲಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ವ್ಯಾಪ್ತಿ ಕಡಿಮೆಯಾಗಿದೆ. ಅಡಿಕೆ ಹಾಗೂ ಅರೆ ನೀರಾವರಿ ಬೆಳೆ ಹೆಚ್ಚು ಆಗಿದೆ. ಇದನ್ನು ಆಧರಿಸಿ ನೀರು ಬಿಡುಗಡೆ ವೇಳಾಪಟ್ಟಿ ಬದಲಾಯಿಸಬೇಕು’ ಎಂದು ಅವರು ಒತ್ತಾಯಿಸಿದರು. ‘ಕಾಲುವೆಗಳ ನಿರ್ವಹಣೆಯೂ ಮುಖ್ಯ. ಬೆಳೆ ಪದ್ಧತಿ ಕುರಿತು ಐಸಿಸಿ ಸಭೆಯಲ್ಲಿ ಚರ್ಚೆ ನಡೆಸುತ್ತೇನೆ’ ಎಂದು ಅವರು ಹೇಳಿದರು. ‘ತಕ್ಷಣದಿಂದ ಕಾಲುವೆಗಳಿಗೆ ನೀರು ಹರಿಸಿ’ ‘ತಕ್ಷಣದಿಂದ ಕಾಲುವೆಗಳಿಗೆ ನೀರು ಹರಿಸಬೇಕಿದೆ. ಚೆಲ್ಲು ಭತ್ತದ ಪದ್ಧತಿಗೂ ನೀರು ಅಗತ್ಯ ಹೆಚ್ಚಿದೆ. ನೀರಿನ ಲಭ್ಯತೆ ಇದ್ದ ಶೇ 50ರಷ್ಟು ರೈತರು ಭತ್ತದ ಬೀಜ ಹಾಕಿ 10–12 ದಿನ ಆಗಿದೆ. ಇನ್ನು ಕೆಲ ರೈತರು ಬೀಜ ಹಾಕಲು ನೀರು ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ತಡವಾಗಿ ಬಿತ್ತನೆ ಬೀಜ ಹಾಕಿದವರು ನೀರನ್ನು ಒಂದು ತಿಂಗಳು ಹೆಚ್ಚು ಕೊಡಬೇಕು ಎಂದು ಬೇಡಿಕೆ ಇಡಬಹುದು’ ಎಂದು ರೈತ ಮುಖಂಡ ಕೋಳೆನಹಳ್ಳಿ ಬಿ.ಎಂ. ಸತೀಶ್ ವಿವರಿಸಿದರು. ‘ಕಾಲುವೆ ನೀರು ಅಧರಿಸಿ ತೋಟ ಮಾಡದ ರೈತರು ಕಳೆದ ಬೇಸಿಗೆಯಲ್ಲಿ ನಷ್ಟ ಅನುಭವಿಸಿದ್ದರು. ಕೆಲ ತೋಟಗಳು ಹಾಳಾಗಿದ್ದವು. ಟ್ಯಾಂಕರ್ ನೀರು ಹಾಯಿಸಿ ಕೆಲವರು ಉಳಿಸಿಕೊಂಡಿದ್ದಾರೆ. ಅಂತಹ ರೈತರಿಗೆ ನೀರಿನ ಅಗತ್ಯ ಹೆಚ್ಚಿದೆ. ಜ. 5ರಿಂದಲೇ ನೀರು ಹರಿಸಬೇಕು’ ಎಂದು ಅವರು ಒತ್ತಾಯಿಸಿದರು.