ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಮೀಟರ್ ಅಳವಡಿಕೆಗೆ ಹೊರೆಯಾದ ‘ವಿಮೆ’

ಗಡುವು ನೀಡಿದರೂ ಮೀಟರ್ ಅಳವಡಿಕೆಗೆ ಮುಂದಾಗದ ಆಟೊ ಚಾಲಕರು
Last Updated 5 ಅಕ್ಟೋಬರ್ 2021, 6:28 IST
ಅಕ್ಷರ ಗಾತ್ರ

ದಾವಣಗೆರೆ: ಆಟೊಗಳಿಗೆ ಕಡ್ಡಾಯವಾಗಿ ಮೀಟರ್‌ ಅಳವಡಿಕೆಗೆ ನೀಡಿರುವ ಗಡುವು ಮುಗಿದರೂ ಹೆಚ್ಚಿನ ಆಟೊ ಚಾಲಕರು ಮೀಟರ್ ಅಳವಡಿಸಿಕೊಳ್ಳಲು ಮುಂದಾಗಿಲ್ಲ. ಹೊಸ ಮೀಟರ್ ಅಳವಡಿಸಿಕೊಂಡವರು ಮೀಟರ್ ರಿಕ್ಯಾಲಿಬರೇಷನ್ ಮಾಡಿಸಿಕೊಂಡಿಲ್ಲ.

ಹೊಸ ಮೀಟರ್ ಅಳವಡಿಕೆಗೆ ಮುಖ್ಯವಾಗಿ ತೊಡಕಾಗಿರುವುದು ವಿಮೆ, ಫಿಟ್‌ನೆಸ್ ಸರ್ಟಿಫಿಕೇಟ್‌ ಹಾಗೂ ವಾಯುಮಾಲಿನ್ಯ ತಪಾಸಣಾ ಪ್ರಮಾಣ ಪತ್ರಗಳು. ಜಿಲ್ಲೆಯಲ್ಲಿ ಶೇ 80ರಷ್ಟು ಆಟೊಗಳು ಹಾಗೆಯೇ ಓಡುತ್ತಿವೆ. ಹೊಸ ಮೀಟರ್ ಅಳವಡಿಕೆಗೂ ಮೊದಲು ಬಾಕಿ ಇರುವ ವಿಮೆಯ ಮೊತ್ತವನ್ನು ತುಂಬಿ ಪ್ರಮಾಣಪತ್ರಗಳನ್ನು ಸಲ್ಲಿಸುವುದು ಕಡ್ಡಾಯ.

ಈ ಪ್ರಮಾಣ ಪತ್ರಗಳನ್ನು ಮಾಡಿಸಿಕೊಳ್ಳಲು ಕನಿಷ್ಠ ಒಂದು ಆಟೊಗೆ ₹ 15ಸಾವಿರದಿಂದ ₹ 20 ಸಾವಿರ ಬೇಕು. ಕೊರೊನಾ ಕಾರಣದಿಂದ ಸಂಕಷ್ಟಕ್ಕೆ ಈಡಾಗಿರುವ ಆಟೊ ಚಾಲಕರ ಬಳಿ ಅಷ್ಟು ಹಣವಿಲ್ಲ. ಜೊತೆಗೆ ಒಂದು ಮೀಟರ್‌ಗೆ ₹ 4,500ದಿಂದ ₹ 5 ಸಾವಿರದವರೆಗೂ ಇದೆ ಇಷ್ಟು ಹಣವನ್ನು ಹೊಂದಿಸುವುದು ಕಷ್ಟವಾಗಿದೆ.

ಆಟೊಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಲು ಈ ಹಿಂದೆ ಸೆಪ್ಟೆಂಬರ್ 1ರ ಗಡುವು ನೀಡಿತ್ತು. ರಿಕ್ಯಾಬರೇಷನ್‌ ಮಾಡಿಸಲು ಹಾಗೂ ದರಪಟ್ಟಿಯನ್ನು ಪರಿಷ್ಕರಿಸುವ ಬಗ್ಗೆ ಎಲ್ಲಾ ಆಟೊ ಮಾಲೀಕರು ಮತ್ತು ಚಾಲಕರು ಸ್ವಲ್ಪ ಕಾಲಾವಕಾಶ ಕೋರಿದ್ದರಿಂದ ಅ.5ರವರೆಗೂ ಗಡುವು ವಿಸ್ತರಿಸಿತು. ಎರಡನೇ ಬಾರಿ ಕೊಟ್ಟಿರುವ ಗಡುವು ಮುಗಿದರೂ ಹೊಸ ಮೀಟರ್ ಅಳವಡಿಕೆ ಕಾರ್ಯ ಸಾಧ್ಯವಾಗಿಲ್ಲ. ಈವರೆಗೆ ಬೆರಳೆಣಿಕೆಯಷ್ಟು ಚಾಲಕರು ಮಾತ್ರ ರಿಕ್ಯಾಲಿಬರೇಷನ್‌ ಮಾಡಿಸಿಕೊಂಡಿದ್ದಾರೆ.

‘ಆಟೊ ಚಾಲಕರು ಕೊರೊನಾ ಕಾಲದಲ್ಲಿ ಸಂಕಷ್ಟದಲ್ಲಿದ್ದು, ಸಾಲ ತೆಗೆದುಕೊಂಡಿರುವ ಆಟೊಗಳ ಕಂತುಗಳನ್ನು ಪಾವತಿಸಲು ಆಗಿಲ್ಲ. ಈಗ ಮೀಟರ್ ಅಳವಡಿಸಿಕೊಂಡರೆ ಹೆಚ್ಚಿನ ಪ್ರಯಾಣಿಕರು ಆಟೊಗಳಿಗೆ ಬರುವುದಿಲ್ಲ. ಜೊತೆಗೆ ಆಟೊಗಳ ಸಿಲಿಂಡರ್ ಬೆಲೆಯೂ ಹೆಚ್ಚುತ್ತಿರುವುದರಿಂದ ನಮ್ಮ ಜೀವನ ಕಷ್ಟವಾಗಿದೆ. ಮೀಟರ್ ಅಳವಡಿಸಿಕೊಳ್ಳಲು ಹಣದ ಸಮಸ್ಯೆ ಇದೆ’ ಎನ್ನುತ್ತಾರೆ ಆಟೊ ಚಾಲಕ ಜೀವನ್

‘ಜಿಲ್ಲೆಯಲ್ಲಿ 9 ಸಾವಿರಕ್ಕಿಂತಲೂ ಹೆಚ್ಚಿನ ಆಟೊಗಳು ಇದ್ದು, ಅವುಗಳಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿ ಹೊಸ ಮೀಟರ್ ಅಳವಡಿಸಿಕೊಂಡಿದ್ದಾರೆ. ರಿಕ್ಯಾಲಿಬರೇಷನ್‌ಗೆ ಅ.31ರವರೆಗೆ ಗಡುವು ನೀಡಿದ್ದಾರೆ. ಆದರೆ ರಿಕ್ಯಾಲಿಬರೇಷನ್‌ ಮಾಡುವವರೇ ಇಲ್ಲದಿರುವಾಗ ಇದು ಹೇಗೆ ಸಾಧ್ಯ’ ಎಂದು ಪ್ರಶ್ನಿಸುತ್ತಾರೆ ಫೆಡರೇಷನ್ ಆಫ್ ಕರ್ನಾಟಕ ಆಟೊ ರಿಕ್ಷಾದ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸಮೂರ್ತಿ.

‘ಮೊದಲಿನಿಂದಲೂ ಈ ರೀತಿ ಕಾಲಾವಕಾಶ ಕೊಡುತ್ತಾರೆ. ನಂತರ ಸುಮ್ಮನಾಗುತ್ತಾರೆ. ಇದರಿಂದಾಗಿ ಆಟೊದವರೂ ನಿರ್ಲಕ್ಷ್ಯ ಭಾವನೆ ಬಂದಿದೆ. ಹೊಸ ಆಟೊ ಖರೀದಿಸಿದವರಿಗೆ ಆಟೊ ಜೊತೆಯಲ್ಲೇ ಮೀಟರ್‌ಗಳು ಬಂದಿವೆ. ಇದರ ಜೊತೆಗೆ ಮೀಟರ್ ಅಳವಡಿಸಿಕೊಳ್ಳುವಂತೆ ನಾವು ಎಲ್ಲರಿಗೂ ಮನವಿ ಮಾಡುತ್ತಿದ್ದೇವೆ’ ಎನ್ನುತ್ತಾರೆ.

‘ಮೀಟರ್ ಅಳವಡಿಸಿಕೊಳ್ಳಲು ಆಟೊದವರಿಗೆ ಸಾಲ ನೀಡಬೇಕು ಎಂದು ಲೀಡ್ ಬ್ಯಾಂಕ್‌ನವರಿಗೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ. ಮೊದಲ ಸಾಲ ತೀರಿಸದೇ ಎರಡನೇ ಬಾರಿ ಸಾಲ ನೀಡುವುದಿಲ್ಲ’ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

***

ಮೀಟರ್ ಅಳವಡಿಕೆ ಹಾಗೂ ರಿಕ್ಯಾಲಿಬರೇಷನ್ ಮಾಡಿಸಿಕೊಳ್ಳಲು ಜನವರಿವರೆಗೆ ಕಾಲಾವಕಾಶ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಆರ್‌ಟಿಒಗೆ ಮನವಿ ನೀಡಲು ನಿರ್ಧರಿಸಿದ್ದೇವೆ. ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್. ಆನಂದರಾಜು ಅವರ ಜತೆ ಚರ್ಚಿಸಿ ಮನವಿ ಸಲ್ಲಿಸಲಾಗುವುದು.

-ಶ್ರೀನಿವಾಸಮೂರ್ತಿ, ಫೆಡರೇಷನ್ ಆಫ್ ಕರ್ನಾಟಕ ಆಟೊ ರಿಕ್ಷಾದ ಕಾರ್ಯದರ್ಶಿ

***

ಕೊರೊನಾದಿಂದಾಗಿ ಆಟೊ ಚಾಲಕರು ಸಂಕಷ್ಟದಲ್ಲಿದ್ದು, ಸಾಲದ ಕಂತುಗಳನ್ನು ತುಂಬಲು ಆಗದೇ ಎಷ್ಟೋ ಆಟೊಗಳು ಮನೆಯಲ್ಲೇ ನಿಂತಿವೆ. ಆದ್ದರಿಂದ ಜಿಲ್ಲಾಡಳಿತ ಉಚಿತವಾಗಿ ಮೀಟರ್‌ ನೀಡಬೇಕು.

-ಆವರಗೆರೆ ವಾಸು, ಜಿಲ್ಲಾ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ

***

10ರಿಂದ 15 ಮಂದಿಯಷ್ಟೇ ರಿಕ್ಯಾಲಿಬರೇಷನ್ ಮಾಡಿಸಿಕೊಂಡಿರಬಹುದು. ಪರಿಷ್ಕೃತ ದರಕ್ಕೆ ರಿಕ್ಯಾಲಿಬರೇಷನ್ ಮಾಡಿಸಬೇಕಾಗಿರುವುದರಿಂದ ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಆಟೊದವರು ಬಂದರೆ ಅರ್ಧ ಗಂಟೆಯಲ್ಲಿ ಕೆಲಸ ಮುಗಿಯುತ್ತದೆ.

-ಎನ್.ರಾಜು, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಸಿಸ್ಟೆಂಟ್ ಕಂಟ್ರೋಲರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT