ಗುರುವಾರ , ಮೇ 6, 2021
23 °C

ಔಷಧದಷ್ಟೇ ಮನೋಸ್ಥೈರ್ಯ ತುಂಬೋದು ಮುಖ್ಯ

ಬಾಲಕೃಷ್ಣ ಪಿ.ಎಚ್. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ವಾರ್ಡ್‌ನಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ತಾಳ್ಮೆ, ಸಂಯಮ, ಧೈರ್ಯ ಬೇಕು. ಮಾನಸಿಕವಾಗಿ ತಯಾರಾಗಿರಬೇಕು. ಸೋಂಕಿತರಿಗೆ ಔಷಧ ನೀಡುವಷ್ಟೇ ಪ್ರಮುಖವಾಗಿ ಅವರಿಗೆ ಮನೋಧೈರ್ಯ ತುಂಬಬೇಕು.

ಕೊರೊನಾ ವಾರ್ಡ್‌ನಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್‌ ತ್ರಿವೇಣಿ ಎಚ್‌.ಎಂ. ಅವರ ಅನುಭವದ ಮಾತುಗಳು ಇವು.

ತ್ರಿವೇಣಿ ಅವರು 2003ರಿಂದ ಶುಶ್ರೂಷಕಿಯಾಗಿ ಬಾಪೂಜಿ, ಎಸ್‌ಎಸ್‌ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದರು. 2008ರಲ್ಲಿ ಸರ್ಕಾರಿ ನೇಮಕಾತಿ ಆದ ಮೇಲೆ ಬಾಷಾನಗರ ನಗರ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡಿ 2017 ರಿಂದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ದುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ಕೊರೊನಾ ವಾರ್ಡ್‌ ಮಾಡಿದಾಗಿನಿಂದ ಈ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಕೊರೊನಾ ಸೋಂಕಿತರು ಬರೀ ಸೋಂಕಿನಿಂದ ಬಳಲುತ್ತಾ ಬರುವುದಿಲ್ಲ. ಅವರನ್ನು ಸಮಾಜ ನೋಡುವ ದೃಷ್ಟಿಯಿಂದ ಕೀಳರಿಮೆ ಉಂಟಾಗಿರುತ್ತದೆ. ಮನೆಯಲ್ಲಿಯೂ ದೂರ ಇಡುವ ಬಗ್ಗೆಯೂ ಅವರಿಗೆ ನೋವು ಕಾಡುತ್ತಿರುತ್ತದೆ. ಅವೆಲ್ಲವನ್ನು ನಾನು ಸರಿ ಮಾಡಬೇಕಾಗುತ್ತದೆ. ಕೆಲವು ಸೋಂಕಿತರು ವಿಪರೀತ ಮಾತನಾಡಿದರೆ, ಕೆಲವರು ಬಾಯಿಯೇ ಬಿಡುವುದಿಲ್ಲ. ಎಲ್ಲರನ್ನು ಸಂಭಾಳಿಸಿಕೊಂಡು ಹೋಗ ಬೇಕಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಂಕು ಬಂದರೂ ಲಕ್ಷಣಗಳು ಗಂಭೀರವಾಗಿ ಇಲ್ಲದವರಿಗೆ ಔಷಧ ಮತ್ತು ಮಾತು ಸಾಕಾಗುತ್ತದೆ. ಗಂಭೀರವಾಗಿ ಇರುವವರಿಗೆ ಪ್ರತಿ ಗಂಟೆಗೊಮ್ಮೆ ಉಸಿರಾಟ, ರಕ್ತದೊತ್ತಡ ಇನ್ನಿತರ ಪರೀಕ್ಷೆಗಳನ್ನು ಮಾಡುತ್ತ, ಆಕ್ಸಿಜನ್‌ ನೀಡುತ್ತಾ ನಿಗಾ ಇಡುತ್ತಲೇ ಅವರಿಗೆ ಏನಾಗುವುದಿಲ್ಲ ಎಂದು ಧೈರ್ಯ ತುಂಬಬೇಕಾಗುತ್ತದೆ. ತುಂಬಾ ಗಂಭೀರ ಪರಿಸ್ಥಿತಿಯಲ್ಲಿ ಅಂದರೆ ಅರೆಪ್ರಜ್ಞೆ ಸ್ಥಿತಿಗೆ ಬಂದವರಿಗೆ ಡೈಪರ್‌ ಬದಲಾಯಿಸುವುದರಿಂದ ಹಿಡಿದು ಎಲ್ಲ ಕಾಳಜಿ ವಹಿಸಬೇಕಾಗುತ್ತದೆ. ನಾನು ಇದನ್ನು ಜನರ ಸೇವೆ, ದೇಶ ಸೇವೆ ಎಂದೇ ಪರಿಗಣಿಸಿ ಮಾಡುತ್ತಿದ್ದೇನೆ’ ಎಂದು ವಿವರಿಸಿದರು.

‘ಓಪನ್ ಹಾರ್ಟ್ ಸರ್ಜರಿ ಆಗಿರುವ ತಾಯಿ ಮನೆಯಲ್ಲಿದ್ದಾರೆ. ಬಾಪೂಜಿ ಆಸ್ಪತ್ರೆಯಲ್ಲಿ ಲ್ಯಾಬ್‌ಟೆಕ್ನಿಷಿಯನ್‌ ಆಗಿರುವ ಪತಿ, 10ನೇ ತರಗತಿಯಲ್ಲಿ ರುವ ಮಗ ಎಲ್ಲರಿಂದಲೂ ಅಂತರ ಕಾಪಾಡಿಕೊಂಡು ಮನೆ ನಿರ್ವಹಣೆ ಮಾಡಬೇಕು. ಆಸ್ಪತ್ರೆಯಿಂದ ಹೋದ ಕೂಡಲೇ ಬಟ್ಟೆಗಳನ್ನು ಒಗೆದು, ಸ್ನಾನ ಮಾಡಿಯೇ ಅಡುಗೆ ಮನೆಗೆ ಹೋಗುತ್ತಿದ್ದೇನೆ’ ಎಂದು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು