ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕೊಂಡುಕುರಿ ವನ್ಯಧಾಮದಲ್ಲಿ ಮೈದುಂಬಿದ ಕೆರೆಕಟ್ಟೆಗಳು

ರಂಗಯ್ಯನದುರ್ಗ ಅರಣ್ಯದಲ್ಲಿ ಅಸಂಖ್ಯ ತೊರೆಗಳ ಜುಳುಜುಳು ನಾದ
Last Updated 2 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಜಗಳೂರು:ಸದಾ ಮಳೆ ಕೊರತೆಯಿಂದ ನಲುಗಿದ್ದ ತಾಲ್ಲೂಕಿನಲ್ಲಿ ಐದಾರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಕೆರೆ, ಗೋಕಟ್ಟೆ, ಚೆಕ್ ಡ್ಯಾಂಗಳು ಮೈದುಂಬಿದ್ದು, ಎಲ್ಲೆಲ್ಲೂ ದಟ್ಟ ಹಸಿರಿನಿಂದ ನಳನಳಿಸುತ್ತಿದೆ. ರಂಗಯ್ಯನದುರ್ಗ ಕೊಂಡುಕುರಿ ವನ್ಯಧಾಮ ಪ್ರದೇಶದಲ್ಲಿ ನೂರಾರು ಹಳ್ಳ, ತೊರೆಗಳ ಜುಳುಜುಳು ಸದ್ದು ಮಲೆನಾಡಿನ ಸುಂದರ ಚಿತ್ರಣವನ್ನು ನೆನಪಿಸುವಂತಿದೆ.

ಅಳಿವಿನ ಅಂಚಿನಲ್ಲಿರುವ ಕೊಂಡುಕುರಿ ಸೇರಿ ಅಪಾರ ಜೀವವೈವಿಧ್ಯದ ತಾಣವಾಗಿರುವ 80 ಚ.ಕಿಮೀ ವಿಸ್ತೀರ್ಣದ ವನ್ಯಧಾಮದಲ್ಲಿರುವ ಎಲ್ಲಾ ಕಟ್ಟೆಗಳು, ಹಳ್ಳಗಳು ವಾರದಿಂದ ಮೈದುಂಬಿ ಹರಿಯುತ್ತಿವೆ. ಕುಡಿಯುವ ನೀರಿನ ಸಮಸ್ಯೆಯಿಂದ ಪರದಾಡುತ್ತಿದ್ದ ವನ್ಯಜೀವಿಗಳಿಗೆ ನೆಮ್ಮದಿ ತಂದಿವೆ.

ರಂಗ್ಯಯನದುರ್ಗ ಅರಣ್ಯದ ಒಳಗಿರುವ ಧುಮುಕಲು ಗುಂಡಿ, ಗೋರೆಗುದ್ನಾಳ್ ಹಳ್ಳ, ಪುಟ್ಟಂಬಳ್ಳಿ, ಮಳಲು ಕಣಿವೆ, ಕಟ್ಗಾಲೇವು, ಕೆಂಪಯ್ಯನಕಟ್ಟೆ ಹಾಗೂ ಬೋಡಬಂಡೆ ಹಳ್ಳಗಳು ತುಂಬಿ ಹರಿಯುತ್ತಿವೆ. ಹೊನ್ನಜ್ಜನಕುಂಟೆ, ದಾಸಕಟ್ಟೆ, ಹೊರಕಟ್ಟೆ, ಹಾಲೋಬಯ್ಯನ ಗೋಕಟ್ಟೆಗಳು ಭರ್ತಿಯಾಗಿವೆ.

‘ಅರಣ್ಯಕ್ಕೆ ಹೊಂದಿಕೊಂಡಿರುವ ಮಲೆಮಾಚಿಕೆರೆ, ಮಡ್ರಳ್ಳಿ ಕೆರೆ, ಕೆಳಗೋಟೆ ಕೆರೆ ಹಾಗೂ ತಾರೇಹಳ್ಳಿಯ ದೊಡ್ಡ ಕೆರೆಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಎಲ್ಲೆಡೆ ಹಸಿರು ಉಕ್ಕುತ್ತಿದ್ದು, ವರ್ಷಪೂರ್ತಿ ಕವಳೆ, ಕಾಡುಬಿಕ್ಕೆ, ಕಾರೇ , ಬೆಟ್ಟದ ನೆಲ್ಲಿ, ನಗರಿ, ಬೆಳ್ಳೆ ಹಣ್ಣು ಹಣ್ಣುಗಳಿಗೆ ಬರ ಇಲ್ಲದಂತಾಗಿದೆ’ ಎಂದು ಅರಣ್ಯ ಸಿಬ್ಬಂದಿ ಕೆ.ವಿ. ಬಸವರಾಜ್ ಹೇಳುತ್ತಾರೆ.

ಮೂರು ವರ್ಷಗಳಲ್ಲಿ ಮಳೆ ಕೊರತೆಯ ಕಾರಣ ಅರಣ್ಯದಲ್ಲಿರುವ ಎಲ್ಲಾ ಜಲಮೂಲಗಳು ಬತ್ತಿಹೋಗಿ, ಕಾಡು ಪ್ರಾಣಿಗಳ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗಿತ್ತು. ಅರಣ್ಯ ಇಲಾಖೆಯಿಂದ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರಿನ ತೊಟ್ಟಿಗಳಿಗೆ ನೀರು ಹರಿಸಿ ಪ್ರಾಣಿಗಳ ನೀರಿನ ದಾಹ ಇಂಗಿಸುವ ಪ್ರಯತ್ನ ಮಾಡಲಾಗಿತ್ತು.

‘ಸಮೃದ್ಧ ಮಳೆಯಿಂದ ಕಾಡಿನ ಪ್ರಾಣಿಗಳಿಗೂ ನೀರಿನ ಸಮಸ್ಯೆ ಪರಿಹಾರ ಆಗಿದ್ದು, ಸಂತಸ ತಂದಿದೆ’ ಎಂದು ಶಾಸಕ ಎಸ್.ವಿ.ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷ ಕಾಳ್ಗಿಚ್ಚಿನಿಂದ ಅಮೂಲ್ಯ ಅರಣ್ಯನಾಶವಾಗುವುದು ತಪ್ಪಿದೆ. ಕಾಡಿನ ಒಳಗೆ ನಿರ್ಮಿಸಲಾಗಿದ್ದ ಚೆಕ್ ಡ್ಯಾಂ, ಕಟ್ಟೆಗಳಿಗೆ ನೀರು ತುಂಬಿದ್ದು, ಅಂತರ್ಜಲ ಸುಧಾರಣೆಯಾಗಿದೆ. ಕರಡಿ, ಕೊಂಡುಕುರಿ, ಕೃಷ್ಣಮೃಗ ಹಾಗೂ ಚಿಂಕಾರ ಪ್ರಾಣಿಗಳಿಗೆ ಆಹಾರವಾಗಿರುವ ಹತ್ತಿ, ಗೋಣಿ, ಆಲ ಹಾಗೂ ಅರಳಿ ಸಸ್ಯಗಳ ನೆಡುತೋಪು ನಿರ್ಮಿಸುವ ಉದ್ದೇಶವಿದೆ. ಉತ್ತಮ ಮಳೆಯಿಂದ ಸಸ್ಯ ಹಾಗೂ ವನ್ಯಜೀವಿ ಸಂಕುಲಕ್ಕೆ ಅನುಕೂಲ ಆಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT