ಭಾನುವಾರ, ಏಪ್ರಿಲ್ 11, 2021
22 °C
ಎಸ್‌ಟಿ ಮೀಸಲಾತಿಗಾಗಿ ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ

ದಾವಣಗೆರೆ: ಕುರುಬರ ಪಾದಯಾತ್ರೆ ಅದ್ದೂರಿ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎಸ್‌ಟಿ ಮೀಸಲಾತಿ ನೀಡಬೇಕು ಎಂದು ಸರ್ಕಾರವನ್ನು ಎಚ್ಚರಿಸಲು ಕುರುಬ ಸಮುದಾಯವನ್ನು ಜಾಗೃತಿಗೊಳಿಸಲು ನಿರಂಜನಾನಂದ ಪುರಿ ಸ್ವಾಮೀಜಿ ಮತ್ತು ಈಶ್ವರಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿಗೆ ಹೊರಟಿರುವ ಪಾದಯಾತ್ರೆ ಮಂಗಳವಾರ ದಾವಣಗೆರೆಗೆ ಅದ್ದೂರಿಯಾಗಿ ಪ್ರವೇಶಿಸಿತು.

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ದೊಡ್ಡಬಾತಿ ಕೆರೆ ಬಳಿ ಶ್ರೀಗಳನ್ನು ಎದುರುಗೊಂಡು ಸ್ವಾಗತಿಸಿದರಲ್ಲದೇ ಕಾರ್ಯಕ್ರಮ ನಡೆಯುವ ಸ್ಥಳದವರೆವಿಗೂ ಅವರು ಸಹ ಪಾದಯಾತ್ರೆಯೊಂದಿಗೆ ಹೆಜ್ಜೆ ಹಾಕಿದರು. ಅವರೊಂದಿಗೆ ರಾಜ್ಯ ಕುರುಬರ ಎಸ್ಟಿ ಹೋರಾಟ ಸಮಿತಿ ಖಜಾಂಚಿ ಕೆ.ಇ. ಕಾಂತೇಶ್ ಪಾಲ್ಗೊಂಡಿದ್ದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಿರಂಜನಾನಂದ ಪುರಿ ಸ್ವಾಮೀಜಿ ನೇತೃತ್ವದ ಪಾದಯಾತ್ರಿಗಳನ್ನು ಸಮಾಜದ ಜನರು ಸ್ವಾಗತಿಸಿದರು. ಆನೆಯೂ ಸ್ವಾಗತ
ಕೋರಿತು. ಭಕ್ತರು ಪುಷ್ಪವೃಷ್ಟಿ ಸುರಿಸಿದರು. ಕುರುಬರು ಬಡುಕಟ್ಟು ಜನಾಂಗದವರು, ಎಸ್ಟಿ ಮೀಸಲಾತಿ ನಮ್ಮ ಹಕ್ಕು ಎಂಬ ಘೋಷಣೆ ಹಾಕುತ್ತ ಪಾದಯಾತ್ರಿಗಳು ಸಾಗಿದರು.

ಜಿಎಂಐಟಿ ಬಳಿ ಅಹಿಂದ ಜನಶಕ್ತಿ ವೇದಿಕೆ ಕಾರ್ಯಕರ್ತರು ಪಾದಯಾತ್ರಿಗಳಿಗೆ ಮಜ್ಜಿಗೆ ಮತ್ತು ನೀರು ವಿತರಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ ಅವರು ಜಿಎಂಐಟಿ ಬಳಿ ಶ್ರೀಗಳನ್ನು ಸ್ವಾಗತಿಸಿದರು. ಪಾಲಿಕೆ ಉಪಮೇಯರ್ ಸೌಮ್ಯಾ ನರೇಂದ್ರ ಕುಮಾರ್, ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಪ್ರಸನ್ನ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಇದ್ದರು. ಅಲ್ಲಿಂದ ಮುಂದೆ ಸಾಗಿದಾಗ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸ್ವಾಗತಿಸಿದರು.

ಪಾದಯಾತ್ರೆಯಲ್ಲಿ ಬೆಳ್ಳಿರಥ ಸಾರೋಟ ಮುಂದಿದ್ದು, ಹಿಂದೆ ಶ್ರೀಗಳು ಪಾದಯಾತ್ರಿಗಳಿದ್ದರು. ಡೊಳ್ಳು ಕುಣಿತ, ಗೋರಪ್ಪಗಳ ಗುಂಪು ಕಂಡು ಬಂದಿತು. ಪಾದಯಾತ್ರಿಗಳು ಹಳದಿ ಬಣ್ಣದ ಪೇಟೆ, ಕಂಬಳಿ ಹೆಗಲ ಮೇಲೆ ಹೊತ್ತು ಸಾಗಿದರು. ಮಹಿಳೆಯರು ಕಳಸದೊಂದಿಗೆ ಅರತಿ ಬೆಳಗಿ ಶ್ರೀಗಳು, ಪಾದಯಾತ್ರಿಗಳನ್ನು ಸ್ವಾಗತಿಸಿದರು.  ಸಿಡಿಮದ್ದು ಸಿಡಿಸಿ ಸಂಭ್ರಮಿಸಲಾಯಿತು. ಪಾದಯಾತ್ರೆ ಸಾಗುವ ದಾರಿಯೂದಕ್ಕೂ ರಸ್ತೆಯಲ್ಲಿ ನೀರು ಹಾಕಲಾಗಿತ್ತು.

ಎಸ್‌ಟಿ ಸಿಗುತ್ತದೆ ಎಂಬ ವಿಶ್ವಾಸ ಮೂಡಿದೆ: ಈಶ್ವರಪ್ಪ

ಪಾದಯಾತ್ರೆಗೆ ಎಲ್ಲ ಜಿ.ಎಂ. ಸಿದ್ದೇಶ್ವರ, ಎಸ್‌.ಎಸ್. ಮಲ್ಲಿಕಾರ್ಜುನ ಸಹಿತ ವಿವಿಧ ಸಮುದಾಯದವರು, ವಿವಿಧ ಪಕ್ಷಗಳ ನಾಯಕರು ಸ್ವಾಗತಿಸುತ್ತಿರುವುದನ್ನು ಕಂಡಾಗ, ಸ್ವಾಮೀಜಿ ಹಿಂಭಾಗದಲ್ಲಿ ಘೋಷಣೆ ಕೂಗುತ್ತಾ ಬರುತ್ತಿರುವ ಯುವಕರ ಗುಂಪು ನೋಡಿದಾಗ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ಮೂಡಿದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಪಾದಯಾತ್ರೆಯ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯರ ಮನೆಗೆ ಇಬ್ಬರು ಸ್ವಾಮೀಜಿಗಳು ಹೋಗಿ ಆಹ್ವಾನಿಸಿದರು. ನಾನು ಫೋನ್‌ ಕರೆ ಮಾಡಿ ಕರೆದೆ. ನೀವು ಹೋರಾಟ ಮಾಡಿ. ನನ್ನ ಬೆಂಬಲ ಇದೆ ಎಂದು ಸಿದ್ದರಾಮಯ್ಯ ಆಗ ಹೇಳಿದ್ದರು. ಆದರೆ ಒಂದೊಂದು ಸಮಾವೇಶದಲ್ಲಿ 50 ಸಾವಿರ, 60 ಸಾವಿರ ಜನ ಸೇರುತ್ತಿರುವುದನ್ನು ನೋಡುತ್ತಿದ್ದಂತೆ ನನ್ನನ್ನು ಕರೆದಿಲ್ಲ ಎಂದು ಸಿದ್ದರಾಮಯ್ಯ ಮೊದಲ ಸುಳ್ಳು ಹೇಳಿದರು. ಈ ಹೋರಾಟದ ಹಿಂದೆ ಆರ್‌ಎಸ್‌ಎಸ್‌ ಇದೆ ಎಂದು ಎರಡನೇ ಸುಳ್ಳು ಹೇಳಿದರು. ಇನ್ನಾದರೂ ಬರುವುದಾದರೆ ಬನ್ನಿ. ಇಲ್ಲದೇ ಇದ್ದರೆ ಸುಮ್ಮನೆ ಇರಿ’ ಎಂದು ಸಲಹೆ ನೀಡಿದರು.

ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಈಶ್ವರಾನಂದಪುರಿ ಸ್ವಾಮೀಜಿ, ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಸೋಮಲಿಂಗೇಶ್ವರ ಸ್ವಾಮೀಜಿ, ಮುಕ್ತೇಶ್ವರ ಸ್ವಾಮೀಜಿ, ಮಾದಯ್ಯ ಸ್ವಾಮೀಜಿ, ಶರಭಯ್ಯ ಸ್ವಾಮೀಜಿ, ಸಂಗಯ್ಯ ಗುರು, ಶಿವಯ್ಯ ಒಡೆಯರು, ಮೈಲಾರಲಿಂಗೇಶ್ವರ ಗಿರವ ರಾಮಪ್ಪ, ಸಮಾಜದ ಮುಖಂಡರು ಇದ್ದರು.

ಜೇನುಗೂಡಿಗೆ ಕಲ್ಲು: ಸ್ವಾಮೀಜಿ ಬೇಸರ

ದಾವಣಗೆರೆ: ಕೆಲವರು ಹಾಲುಮತ ಎಂಬ ಜೇನುಗೂಡಿಗೆ ಕಲ್ಲು ಹಾಕಿದ್ದಾರೆ. ಹಾಗಾಗಿ ಜೇನುನೊಣಗಳು ಹಾರಿ ಹೋಗಿವೆ. ಅವು ಮತ್ತೆ ಬರುತ್ತವೆ. ಎಸ್‌ಟಿ ಮೀಸಲಾತಿ ಯಶಸ್ವಿಯಾದಾಗ ಎಲ್ಲ ಜೇನುನೊಣಗಳು ಜೊತೆಗೆ ಇರುತ್ತವೆ. ಆಗ ಎಲ್ಲರೂ ಸೇರಿ ಎಸ್‌ಟಿ ಎಂಬ ಜೇನು ಸವಿಯೋಣ ಎಂದು ಕಾಗಿನೆಲೆ ನಿರಂಜನಾನಂದ ಸ್ವಾಮೀಜಿ ರೂಪಕ ಬಳಸಿ ಮಾತನಾಡಿದರು.

ಇದು ಯಾವುದೇ ವ್ಯಕ್ತಿಗಳ ವಿರುದ್ಧ ಅಥವಾ ಪರ ಹೋರಾಟವಲ್ಲ. ಕುರುಬ ಸಮುದಾಯದವರ ಹಕ್ಕಿಗಾಗಿ ಹೋರಾಟ. ಫೆಬ್ರುವರಿ 7 ರಂದು ಬೆಂಗಳೂರಿನಲ್ಲಿ ಹುಡ್ಡಿ ಹೊಡೆದರೆ ಸಂಸತ್ತಿನ ಫಿಲ್ಲರ್ ನಡುಗಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮೀಸಲಾತಿ ನೀಡಲು ಮೀನಮೇಷ ಎಣಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

‘ಕಾಗಿನೆಲೆ ಕನಕ ಗುರುಪೀಠದ ಕಿಂಗ್ ಮೇಕರ್ ಆಗುತ್ತದೆಯೇ ಹೊರತು ಕಿಂಗ್ ಆಗಲ್ಲ. ನನಗೆ ಮಂತ್ರಿ ಮುಖ್ಯಮಂತ್ರಿ ಆಗುವ ಆಸೆಯಿಲ್ಲ. ನನಗೆ ಕೇಂದ್ರದಿಂದ ಯಾವುದೇ ಪೋನ್ ಬಂದಿಲ್ಲ. ಈ ಪಾದಯಾತ್ರೆಗೆ ದೊಡ್ಡವರು ಯಾರೂ ಹಣ ಕೊಟ್ಟಿಲ್ಲ. ಕುರಿ ಕಾಯುವ ಕುರುಬ ಮಾತ್ರ ಹಣ ಕೊಡುತ್ತಿದ್ದಾರೆ. ಪಾದಯಾತ್ರೆ ಮುಗಿದ ಬಳಿಕ ಲೆಕ್ಕ ಕೊಡುತ್ತೇನೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು