ಶನಿವಾರ, ಜೂನ್ 25, 2022
26 °C
ಆಮ್ಲಜನಕದ ಸಿಲಿಂಡರ್ ಸಿಗದೆ ಮೀನು ಮರಿಗಳ ಸಾಕಾಣಿಕೆಗೆ ಎದುರಾದ ಸಂಕಷ್ಟ

ಆಮ್ಲಜನಕದ ಕೊರತೆ: ಮೀನು ಕೃಷಿಗೆ ಕುತ್ತು

ವಿಶ್ವನಾಥ ಡಿ. Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಕೋವಿಡ್ ಸೋಂಕಿಗೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಡುವ ಮನುಷ್ಯನಿಗೆ ಆಮ್ಲಜನಕ ಅತ್ಯವಶ್ಯ. ಅದೇ ಆಮ್ಲಜನಕವನ್ನು ಅವಲಂಬಿಸಿರುವ ಮೀನು ಕೃಷಿಗೆ ಉಸಿರಾಟ ನಿಲ್ಲುವ ಆತಂಕ ಎದುರಾಗಿದೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆಲ್ಲವೂ ಆಮ್ಲಜನಕವನ್ನೇ ಆಶ್ರಯಿಸಿದ ಕಾರಣ ಸಿಲಿಂಡರ್‌ ಕೊರತೆಯಿಂದ ಮೀನು ಕೃಷಿಗೆ ಹೊಡೆತ ಬಿದ್ದಿದೆ.

ಮೀನು ಮರಿಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಲು ಆಮ್ಲಜನಕದ ಸಿಲಿಂಡರ್ ಸಿಗದೇ ಮೀನು ಕೃಷಿಕರು ಒದ್ದಾಡುವಂತಾಗಿದೆ. ಹೊಂಡಗಳಲ್ಲಿ ಮೀನು ಮರಿ ಬಿತ್ತನೆ ಮಾಡಿ, ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಿದಾಗ ಪ್ಯಾಕಿಂಗ್ ಮಾಡಲು ಆಮ್ಲಜನಕದ ಅವಶ್ಯಕತೆಯಿರುತ್ತದೆ. ಕೃಷಿಕರು ಮೀನು ಮರಿಗಳನ್ನು ಉತ್ಪಾದಿಸಿ ಲಕ್ಷಾಂತರ ಮರಿಗಳನ್ನು ಮಾರಾಟ ಮಾಡುತ್ತಾರೆ. ಇವುಗಳನ್ನು ಸಾಗಿಸುವಾಗ ಆಮ್ಲಜನಕಯುಕ್ತ ಪಾಕೆಟ್ ತಯಾರಿಸಬೇಕು. ಆದರೆ, ಈಗ ಸಿಲಿಂಡರ್‌ಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮೀನು ಕೃಷಿಗೆ ಆಮ್ಲಜನಕದ ಕೊರತೆ ಎದುರಾಗಿದೆ.

ಉತ್ಪಾದನೆ ಕೇಂದ್ರದವರು ಹೊರ ರಾಜ್ಯಗಳಿಂದ ಮೊಟ್ಟೆ ತಂದು ಸ್ಪಾನಲ್ಲಿಟ್ಟು ಸಾಕಾಣಿಕೆ ಮಾಡುತ್ತಾರೆ. ಅವುಗಳು ಮರಿಗಳಾಗಿ ಎರಡು ಸೆಂ.ಮೀ ಅಳತೆ ಬಂದ ಮೇಲೆ, ಕೆರೆ, ಹೊಂಡಗಳಲ್ಲಿ ಸಾಕಾಣಿಕೆ ಮಾಡುವ ಮೀನು ಕೃಷಿಕರಿಗೆ ಮಾರಾಟ ಮಾಡುತ್ತಾರೆ. ಮರಿಗಳು ಎರಡು ಇಂಚು ಉದ್ದವಾದರೆ ಅವುಗಳ ಮಾರಾಟದ ಬೆಲೆಯಲ್ಲಿ ವ್ಯತ್ಯಾಸ ಆಗುತ್ತದೆ. ಪ್ರತಿ ಮೀನು ಮರಿ ಉತ್ಪಾದಿಸುವ ಕೇಂದ್ರದಲ್ಲಿ ಸಾಮಾನ್ಯವಾಗಿ 10 ಲಕ್ಷದಿಂದ 20 ಲಕ್ಷದವರೆಗೂ ಮರಿ ಸಾಕುತ್ತಾರೆ. 2ರಿಂದ 3 ಸೆಂ.ಮೀ. ಇದ್ದರೆ ಪ್ರತಿ ಲಕ್ಷ ಮರಿಗಳಿಗೆ ₹ 15 ಸಾವಿರದಿಂದ ₹ 20 ಸಾವಿರಕ್ಕೆ ಮಾರಾಟ ಮಾಡುತ್ತಾರೆ. ಕಳೆದ ವರ್ಷ ಸುರಿದ ಮಳೆಯಿಂದಾಗಿ ತಾಲ್ಲೂಕಿನಲ್ಲಿ 63 ಕೆರೆಗಳ ಪೈಕಿ 45 ಕೆರೆಗಳಲ್ಲಿ ನೀರು ಇದೆ. ಮೀನು ಕೃಷಿ ನಡೆಯುತ್ತಿದೆ. ಬೇಸಿಗೆ ಆರಂಭದಿಂದ ಮೀನುಗಳನ್ನು ಮಾರಾಟ ಮಾಡಲು ಆರಂಭಿಸುತ್ತಾರೆ. ಇವುಗಳನ್ನು ಅವಲಂಬಿಸಿ ನೂರಾರು ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ.

‘ಕೆರೆಗಳಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ದೂರದ ತಮಿಳುನಾಡು, ಆಂಧ್ರಪ್ರದೇಶ, ಮುನಿರಾಬಾದ್, ಶಿವಮೊಗ್ಗ, ಬೆಳಗಾವಿ ಸೇರಿ ವಿವಿಧೆಡೆ ಕೇಂದ್ರಗಳಿಂದ ಆಮ್ಲಜನಕದ ಪ್ಯಾಕೆಟ್‌ಗಳಲ್ಲಿ ಮೀನು ಮರಿ ತರಬೇಕು. ಆದರೆ, ಈ ಬಾರಿ ಆಮ್ಲಜನಕದ ಸಿಲಿಂಡರ್ ಸಿಗುತ್ತಿಲ್ಲ’ ಎಂದು ಹರಪನಹಳ್ಳಿ ದುರ್ಗಾ ಮೀನುಮರಿ ಉತ್ಪಾದನೆ ಕೇಂದ್ರದ ಮಾಲೀಕ ಪವಾಡಿ
ಮಲ್ಲಿಕಾರ್ಜುನ್ ತಿಳಿಸಿದರು.

ಅಂಬಿಗರ ಚೌಡಯ್ಯ ಮೀನು ಉತ್ಪನ್ನ ಸಂಸ್ಕರಣಮತ್ತು ಮಾರಾಟಗಾರರ ಸಹಕಾರ ಸಂಘದ ಕಾರ್ಯದರ್ಶಿ ಎನ್.ರವಿ, ‘ಮೀನು ಕೃಷಿಯಿಂದಲೇ ಮೀನುಗಾರಿಕೆ ಸಂಘಗಳು ಮತ್ತು ಮೀನುಗಾರ ಕುಟುಂಬಗಳು ಅವಲಂಬಿಸಿವೆ. ಈ ವರ್ಷ ಆಮ್ಲಜನಕದ ಸಿಲಿಂಡರ್ ಸಿಗದೇ ಮೀನು ಮರಿ ತರಲು ಸಾಧ್ಯವಾಗದಿದ್ದರೆ ನೂರಾರು ಕುಟುಂಬಗಳು ಬೀದಿಗೆ ಬರುತ್ತವೆ’ ಎಂದು ಅಳಲು ತೋಡಿಕೊಂಡರು.

‘ಕೆರೆಗಳಲ್ಲಿ ಬಲೆ ಹೆಣೆದು, ದೋಣಿಗಳ ಮೂಲಕ ಸಂಗ್ರಹಿಸುವ ಮೀನು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತೇವೆ. ಇಲ್ಲಿಯವರೆಗೂ ಕೆರೆಗಳಿಗೆ ಮೀನು ಮರಿಗಳನ್ನು ತರಲು ಸಾಧ್ಯವಾಗಿಲ್ಲ’ ಎಂದು ಮೀನು ಮಾರಾಟಗಾರ ಸಿದ್ದೇಶ್ ಆತಂಕ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು