ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಸಾಕಣೆದಾರರ ನೆರವಿಗೆ ಸರ್ಕಾರ ಧಾವಿಸಲಿ: ಮಲ್ಲಾಪುರ ದೇವರಾಜ್

ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್ ಆಗ್ರಹ
Published 22 ನವೆಂಬರ್ 2023, 5:05 IST
Last Updated 22 ನವೆಂಬರ್ 2023, 5:05 IST
ಅಕ್ಷರ ಗಾತ್ರ

ದಾವಣಗೆರೆ: ‘ಬಹುರಾಷ್ಟ್ರೀಯ ಕಂಪನಿಗಳು ಕೋಳಿ ಮಾಂಸದ ಮಾರುಕಟ್ಟೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದು, ಇದರಿಂದಾಗಿ ಸಾಕಾಣಿಕೆ ಮಾಡುತ್ತಿರುವ ರೈತರಿಗೆ ನಷ್ಟವಾಗುತ್ತಿದೆ. ಸರ್ಕಾರವೇ ಮಧ್ಯಪ್ರವೇಶಿಸಿ ಮಾಂಸದ ದರ ನಿಗದಿಪಡಿಸಬೇಕು' ಎಂದು ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್ ಆಗ್ರಹಿಸಿದರು.

‘ವೆಂಕಾಬ್, ಅಬ್ಬೀಸ್ ಸೇರಿದಂತೆ ಹಲವು ಕಂಪನಿಗಳು ಕೋಳಿ ಮರಿಗಳು, ಫೀಡ್ ಸರಬರಾಜು ಮಾಡುವುದರಿಂದ ಹಿಡಿದು ಮಾಂಸದ ದರ ನಿಗದಿಪಡಿಸುವ ತನಕ ಹಿಡಿತ ಸಾಧಿಸಿವೆ. ರೈತರು 1000–5000 ಕೋಳಿ ಸಾಕಾಣಿಕೆ ಮಾಡಲು ಹಾಕಿದ ಬಂಡವಾಳ ರೈತರ ಕೈಸೇರುತ್ತಿಲ್ಲ. ಇದರಿಂದಾಗಿ ರೈತರು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಕೋಳಿ ಸಾಕಾಣಿಕೆಯಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಅಂದರೆ ಒಂದು ಕೆ.ಜಿಗೆ ₹100 ಖರ್ಚು ತಗುಲಿದರೆ ಕಂಪೆನಿಯವರು ₹ 70ಕ್ಕೆ ವ್ಯಾಪಾರ ಮಾಡಿ ಮುಗಿಸುತ್ತಾರೆ. ಇದರಿಂದ ತುಂಬಾ ನಷ್ಟವಾಗುತ್ತಿದೆ. ವಿಎಚ್‌ಎಚ್ ಕಂಪನಿಯು ಇಂಟರ್‌ನೆಟ್‌ನಲ್ಲಿ ದರ ನಿಗದಿಪಡಿಸಿ ರೈತರ ಕೋಳಿ ಮಾಂಸವನ್ನು ಖರೀದಿಸಲು ಬಾರದಂತೆ ಮಾಡುತ್ತಿದೆ’ ಎಂದು ಆಪಾದಿಸಿದರು.

‘ಬಹುರಾಷ್ಟ್ರೀಯ ಕಂಪನಿಗಳಿಂದಾಗಿ ಅತಿ ಹೆಚ್ಚಿನ ದರಕ್ಕೆ ಕೋಳಿ ಮಾಂಸ ಮಾರಾಟ ಮಾಡುತ್ತಿರುವುದರಿಂದ ಗ್ರಾಹಕರಿಗೂ ಶೋಷಣೆಯಾಗುತ್ತಿದೆ. ರೈತರಿಗೂ ನಷ್ಟವಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಜಿಎಸ್‌ಟಿಯಲ್ಲಿ ರಿಯಾಯಿತಿ ನೀಡಿರುವುದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದ್ದು, ಅವರನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು’ ಎಂದು ಆಗ್ರಹಿಸಿದರು.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ನಮ್ಮನ್ನು ಕರೆದು ಸಭೆ ಮಾಡುವ ಮನಸ್ಸಿಲ್ಲ. ಕೂಡಲೇ ದರ ನಿಗದಿಗೆ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

‘ಸರ್ಕಾರ ರೈತರು ಹಾಗೂ ಮಾರಾಟಗಾರರ ರಕ್ಷಣೆಗೆ ಬರಬೇಕು. ನ.22ರಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ದಾವಣಗೆರೆಗೆ ಭೇಟಿ ನೀಡುತ್ತಿದ್ದು, ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ರೈತ ಮುಖಂಡ ಬಲ್ಲೂರು ರವಿಕುಮಾರ್ ಹೇಳಿದರು.

ರೈತ ಮುಖಂಡರಾದ ಬುಳ್ಳಾಪುರದ ಹನುಮಂತಪ್ಪ, ಗುರುಮೂರ್ತಿ, ಶಿವಮೂರ್ತಪ್ಪ, ನಾಗರಾಜ ಎ.ಕೆ., ಮಿಯ್ಯಾಪುರ ತಿರುಮಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT