ಭಾನುವಾರ, ಜೂನ್ 13, 2021
22 °C
ದಾವಣಗೆರೆ ಎಸ್‍ಎಸ್ ನಾರಾಯಣ ಹಾರ್ಟ್ ಸೆಂಟರ್ ವೈದ್ಯರಿಂದ ಅಪಾಯಕಾರಿ ಹೃದ್ರೋಗಕ್ಕೆ ಚಿಕಿತ್ಸೆ

ರೊಟೇಶನಲ್ ಆಥೆರೆಕ್ಟಮಿ ಚಿಕಿತ್ಸೆಯಿಂದ ವೃದ್ಧನಿಗೆ ಜೀವದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅಪಾಯಕಾರಿ ಹೃದಯರೋಗದಿಂದ ಬಳಲುತ್ತಿದ್ದ 82ರ ವೃದ್ಧರೊಬ್ಬರಿಗೆ ರೊಟೇಶನಲ್ ಆಥೆರೆಕ್ಟಮಿ ಚಿಕಿತ್ಸೆ ನೀಡುವ ಮೂಲಕ ಇಲ್ಲಿನ ಎಸ್‍ಎಸ್ ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯರ ತಂಡ ಜೀವ ಉಳಿಸಿದೆ. ಮಧ್ಯ ಕರ್ನಾಟಕದಲ್ಲಿ ಇಂಥ ಚಿಕಿತ್ಸೆ ಮಾಡಿ ಯಶಸ್ವಿಯಾದ ಮೊಟ್ಟ ಮೊದಲ ಆಸ್ಪತ್ರೆ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚನ್ನಗಿರಿಯ ಶಾಂತವೀರಪ್ಪ ಅವರಿಗೆ ಆರೇಳು ತಿಂಗಳುಗಳಿಂದ ಹೃದಯ ಊತದ ಸಮಸ್ಯೆ ಉಂಟಾಗಿತ್ತು. ಜತೆಗೆ ಅಧಿಕ ರಕ್ತದೊತ್ತಡದಿಂದಲೂ ಬಳಲುತ್ತಿದ್ದರು. ಶಿವಮೊಗ್ಗದಲ್ಲಿ ಸಲಹಾ ತಜ್ಞರನ್ನು ಸಂಪರ್ಕಿಸಿದ್ದರು. ಅಲ್ಲಿ ಆ್ಯಂಜಿಯೋಗ್ರಾಂ ತಪಾಸಣೆ ನಡೆಸಿದಾಗ ಹೃದಯದ ರಕ್ತನಾಳದಲ್ಲಿ ಕೀವು ತುಂಬಿಕೊಂಡಿರುವುದು ಕಂಡುಬಂದಿತ್ತು. ಇದರಿಂದ ರಕ್ತ ಸಂಚಾರ ಬಹಳ ಕಡಿಮೆಯಾಗಿತ್ತು.

ಶಾಂತವೀರಪ್ಪ ಅವರನ್ನು ಎಸ್‍ಎಸ್ ನಾರಾಯಣ ಹಾರ್ಟ್ ಸೆಂಟರ್‌ಗೆ ದಾಖಲಿಸಲಾಗಿತ್ತು. ಹೃದಯರೋಗ ತಜ್ಞ ಡಾ. ಧನಂಜಯ ಆರ್.ಎಸ್. ಮತ್ತು ಹೃದಯ ಶಸ್ತ್ರಚಿಕಿತ್ಸಕ ಡಾ. ಮುರಳಿ ಬಾಬು ನೇತೃತ್ವದ ತಜ್ಞ ವೈದ್ಯರ ತಂಡ ಈ ವಿಶೇಷ ಪ್ರಕರಣದ ಪರಾಮರ್ಶೆ ನಡೆಸಿತು.

ಈ ಸಮಸ್ಯೆಗೆ ಸಾಮಾನ್ಯವಾಗಿ ಸಿಎಬಿಜಿ (ಕರೋನರಿ ಆರ್ಟೆರಿ ಬೈಪಾಸ್ ಗ್ರಾಫ್ಟಿಂಗ್)ಚಿಕಿತ್ಸೆ ನೀಡಲಾಗುತ್ತದೆ. ಆದರೆ ಶಾಂತವೀರಪ್ಪ ಅವರಿಗೆ ವಯಸ್ಸಾಗಿರುವ ಕಾರಣ ಮತ್ತು ಉಸಿರಾಟದ ತೀವ್ರ ತೊಂದರೆ ಇರುವುದರಿಂದ ಸಿಎಬಿಜಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಿಲ್ಲ ಎಂದು ತಜ್ಞ ವೈದ್ಯರು ನಿರ್ಧರಿಸಿದರು. ರೊಟೇಷನಲ್ ಆಥೆರೆಕ್ಷಮಿ ಶಸ್ತ್ರಚಿಕಿತ್ಸೆ ನಡೆಸಿ ಬಳಿಕ ಎಡಭಾಗದ ಮುಖ್ಯ ಬೇರ್ಪಡಿಸುವಿಕೆ ಸ್ಟೆಂಟಿಂಗ್ ವಿಧಾನದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದರು. ಈ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಈ ಚಿಕಿತ್ಸೆಯನ್ನು ನೆರವೇರಿಸಿತು. ಮರುದಿನವೇ ರೋಗಿಯನ್ನು ವಾರ್ಡ್‍ಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆ ನೆರವೇರಿಸಿದ 2 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಎಸ್‍ಎಸ್ ನಾರಾಯಣ ಹಾರ್ಟ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್ ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ರೊಟೇಷನಲ್ ಆಥೆರೆಕ್ಷಮಿ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಅಪಾಯಕಾರಿ ಕ್ಯಾಲ್ಸಿಫೈಡ್ ಗಾಯಗಳಿಂದ ಕೂಡಿದ ಹೃದಯ ರೋಗಿಗಳಿಗೆ ನೀಡಲಾಗುತ್ತದೆ. ಕೊರೋನರಿ ಆರ್ಟೆರಿ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ) ನಂತಹ ಚಿಕಿತ್ಸೆಯ ಅವಕಾಶವೇ ಇಲ್ಲದಾಗ ಕೈಗೊಳ್ಳಲಾಗುತ್ತದೆ. ರೊಟ್ಯಾಬ್ಲೇಷನ್ ಎನ್ನುವುದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಕೀವು ತುಂಬಿ ಕಟ್ಟಿಕೊಂಡ ರಕ್ತನಾಳಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯಲ್ಲಿ ಆಕ್ರಾನ್ ಹಣ್ಣಿನ ಆಕೃತಿಯ ವಿಶೇಷವಾದ ವಜ್ರಲೇಪಿತ ಕ್ಯಾಥೆಟರ್ ಅನ್ನು ಹೃದಯದ ರಕ್ತನಾಳದ ಕಟ್ಟಿಕೊಂಡ ಭಾಗಕ್ಕೆ ನಿರ್ದೇಶಿಸಲಾಗುತ್ತದೆ. ಇದರ ತುದಿಯು ಅತ್ಯಧಿಕ ವೇಗದಿಂದ ತಿರುಗುತ್ತಾ, ಹೃದಯ ಕವಾಟದಲ್ಲಿ ಕೀವು ತುಂಬಿಕೊಂಡ ಫಲಕವನ್ನು ಪುಡಿ ಮಾಡುತ್ತದೆ. ಈ ಸೂಕ್ಷ್ಮಕಣಗಳನ್ನು ರಕ್ತದ ಪ್ರವಾಹವು ಕೊಚ್ಚಿಕೊಂಡು ಹೋಗುತ್ತದೆ. ಈ ವಿಧಾನವು ಸ್ಟೆಂಟ್ ಅಳವಡಿಸಲು ಅನುವು ಮಾಡಿಕೊಡುತ್ತದೆ. ಹಾಗೂ ರಕ್ರದ ಸರಾಗ ಹರಿವಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ತಜ್ಞ ವೈದ್ಯ ಡಾ. ಧನಂಜಯ್ ಆರ್.ಎಸ್. ವಿವರ ನೀಡಿದ್ದಾರೆ.

‘ಈ ಕಾಯಿಲೆಯಿಂದ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಕುಗ್ಗಿಹೋಗಿದ್ದೆ. ನನ್ನನ್ನು ಈ ಸ್ಥಿತಿಯಿಂದ ಗುಣಪಡಿಸಿ ಎಸ್‍ಎಸ್ ನಾರಾಯಣ ಹೃದಯ ಕೇಂದ್ರದ ವೈದ್ಯರ ತಂಡ ಪಾರು ಮಾಡಿದೆ’ ಎಂದು ಶಾಂತವೀರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.

ಆಸ್ಪತ್ರೆಯ ಮಾಹಿತಿಗೆ 9901662045, 9538684731 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.