ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊನ್ನಾಳಿ: ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ

ತುಂಗಭದ್ರಾ ನದಿಗೆ ತಡೆಗೋಡೆ, ಬಾಗೇವಾಡಿ ಸೇತುವೆ ನಿರ್ಮಾಣ
Published 1 ಏಪ್ರಿಲ್ 2024, 7:22 IST
Last Updated 1 ಏಪ್ರಿಲ್ 2024, 7:22 IST
ಅಕ್ಷರ ಗಾತ್ರ

ಹೊನ್ನಾಳಿ: ‘ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಪಟ್ಟಣದಲ್ಲಿ ತುಂಗಭದ್ರಾ ನದಿಗೆ ತಡೆಗೋಡೆ, ದಾವಣಗೆರೆಗೆ ವಿಮಾನ ನಿಲ್ದಾಣ, ಬಾಗೇವಾಡಿ ಸಮೀಪದಲ್ಲಿ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು’ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

‘ತಾಲ್ಲೂಕಿಗೆ ಒಂದೆರಡು ಆ್ಯಂಬುಲೆನ್ಸ್ ಇರಬಹುದು. ಮುಂದೆ ಅಧಿಕಾರಕ್ಕೆ ಬಂದರೆ ಪ್ರತಿ ಪಿಎಚ್‍ಸಿ ಹಂತದಲ್ಲಿ ಆ್ಯಂಬುಲೆನ್ಸ್ಗಳನ್ನು ಒದಗಿಸುವ ಪ್ರಯತ್ನ ಮಾಡಲಾಗುವುದು. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಸಣ್ಣ ಕೈಗಾರಿಕೆಗಳು ಬೇಕು ಎನ್ನುವ ಬೇಡಿಕೆ ಇದೆ ಈ ಬಗ್ಗೆ ಗಮನಹರಿಸಲಾಗುವುದು.  ಈಗಾಗಲೇ ಎಸ್‍.ಎಸ್. ಕೇರ್ ಟ್ರಸ್ಟ್ ವತಿಯಿಂದ ಹಲವು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದೇವೆ. ಟ್ರಸ್ಟ್ ವತಿಯಿಂದ ಈಗಾಗಲೇ ಉಚಿತವಾಗಿ 16,000 ಜನರಿಗೆ ಡಯಾಲಿಸಿಸ್ ಸೇವೆ ನೀಡಿದ್ದೇವೆ. ಉಚಿತ ಕಣ್ಣಿನ ಚಿಕಿತ್ಸೆ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ದಂತ ತಪಾಸಣೆ ನಡೆಸಲಾಗಿದೆ. ಈ ಸೇವೆ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ದಾವಣಗೆರೆಯ ಧ್ವನಿಯಾಗಿ ಕೆಲಸ ಮಾಡುವೆ’ ಎಂದರು.

‘25 ವರ್ಷ ಬಿಜೆಪಿಗೆ ಮತ ನೀಡಿದ್ದು ಸಾಕು. ಅವರ ಅಭಿವೃದ್ಧಿ ಶೂನ್ಯ, ಅವರು ತಮ್ಮ ಸಾಧನೆ ನೋಡಿ ಮತ ಕೊಡಿ ಎಂದು ಕೇಳುತ್ತಿಲ್ಲ. ಬದಲಾಗಿ ಮೋದಿಯವರನ್ನು ನೋಡಿ ಮತ ಕೊಡಿ ಎನ್ನುತ್ತಿದ್ದಾರೆ. ಪ್ರತಿಯೊಬ್ಬರೂ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳನ್ನು ಮನೆ ಮನೆಗೆ ಹೋಗಿ ಪ್ರಚಾರ ಮಾಡಬೇಕು’ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

‘ರಾಜ್ಯದಲ್ಲಿ ಭೀಕರ ಬರಗಾಲ ಬಂದರೂ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬರಲಿಲ್ಲ. ರಾಜ್ಯದ ಜಿಎಸ್‍ಟಿ ತೆರಿಗೆ ಪಾಲು ಕೊಡಲಿಲ್ಲ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾಗಿ ಸರ್ಕಾರ ಮುನ್ನಡೆಸುತ್ತಿದ್ದಾರೆ. ತಾಲ್ಲೂಕಿಗೆ ಈಗಾಗಲೇ ₹ 100 ಕೋಟಿ ಅನುದಾನ ಕೊಟ್ಟಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಕಾಂಗ್ರೆಸ್ ಸರ್ಕಾರದ ಕೊಡುಗೆ. ಅದು ಇಲ್ಲದಿದ್ದರೆ ಕೂಲಿ ಕಾರ್ಮಿಕರು ಬೀದಿಗೆ ಬರುತ್ತಿದ್ದರು’ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

‘ರೈತರು ಒಂದೂವರೆ ವರ್ಷದಿಂದ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ ಪ್ರಧಾನಿ ಮೋದಿ ರೈತರ ಕಡೆ ತಿರುಗಿ ನೋಡುತ್ತಿಲ್ಲ. ವಿರೋಧ ಪಕ್ಷದ ಮುಖಂಡರನ್ನು ಇ.ಡಿ ಮೂಲಕ ಬೆದರಿಸಿ ಹಣಿಯುವ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ದೂರಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ದೇಶದ ಬಡಮಹಿಳೆಯರಿಗೆ ವಾರ್ಷಿಕವಾಗಿ ₹ 1 ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಒಂದು ಜಾತಿಯನ್ನು ಹೊರಗಿಟ್ಟು ಸಬ್ ಕಾ ವಿಕಾಸ್ ಹೇಗೆ ಮಾಡುತ್ತಾರೆ’ ಎಂದು ಕಾಂಗ್ರೆಸ್  ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಪ್ರಶ್ನಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತೇವೆ. ಮೀಸಲಾತಿ ತೆಗೆಯುತ್ತೇವೆ ಎನ್ನುತ್ತಿದ್ದಾರೆ. ಕೋಮುವಾದಿ ಬಿಜೆಪಿಯನ್ನು ದೇಶದಿಂದ ಓಡಿಸಬೇಕು’ ಎಂದು ಅವರು ಹೇಳಿದರು.

2ಇಪಿ : ಹೊನ್ನಾಳಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರಸಭೆಯನ್ನು ಉದ್ದೇಶಿಸಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದರು. 
2ಇಪಿ : ಹೊನ್ನಾಳಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರಸಭೆಯನ್ನು ಉದ್ದೇಶಿಸಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದರು. 

ಮಾಜಿ ಶಾಸಕ ಡಿ.ಬಿ. ಗಂಗಪ್ಪ, ಮುಖಂಡರಾದ ಆರ್. ನಾಗಪ್ಪ, ಎಚ್.ಎ. ಉಮಾಪತಿ, ಚೀಲೂರು ವಾಜೀದ್, ಡಿ.ಜಿ. ವಿಶ್ವನಾಥ್, ಸಣ್ಣಕ್ಕಿ ಬಸವನಗೌಡ, ಕುಳಗಟ್ಟೆ ಚಂದ್ರಶೇಖರ್, ಕಾಂಗ್ರೆಸ್‌ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ರವೀಶ್, ಎನ್‍ಎಸ್‍ಯುಐ ಅಧ್ಯಕ್ಷ ಮನೋಜ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT