ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಇಂದು ನಗರಕ್ಕೆ ನರೇಂದ್ರ ಮೋದಿ: ಬಿಗಿ ಭದ್ರತೆ

ಗಾಯತ್ರಿ ಸಿದ್ದೇಶ್ವರ, ಬಸವರಾಜ ಬೊಮ್ಮಾಯಿ ಪರ ಪ್ರಚಾರ
Published 28 ಏಪ್ರಿಲ್ 2024, 6:10 IST
Last Updated 28 ಏಪ್ರಿಲ್ 2024, 6:10 IST
ಅಕ್ಷರ ಗಾತ್ರ

ದಾವಣಗೆರೆ: ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಏ.28ರಂದು ದಾವಣಗೆರೆಗೆ ಭೇಟಿ ನೀಡಲಿದ್ದು, ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಮಧ್ಯಾಹ್ನ 3ಕ್ಕೆ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ‘ವಿಕಸಿತ ಭಾರತ ವಿಜಯ ಸಂಕಲ್ಪ ಸಮಾವೇಶ’ ವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಕಾರ್ಯಕ್ರಮಕ್ಕಾಗಿ ಬೃಹತ್‌ ಪೆಂಡಾಲ್‌ ಹಾಕಲಾಗಿದೆ. 340X650 ಅಡಿ ಅಳತೆಯ ಪೆಂಡಾಲ್ ಹಾಕಿದ್ದು, 36X60 ಅಳತೆಯ ವೇದಿಕೆ ನಿರ್ಮಾಣ ಮಾಡಲಾಗಿದೆ. 1ಲಕ್ಷ ಕುರ್ಚಿಗಳನ್ನು ಹಾಕಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹಾಗೂ ಹಾವೇರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಪರ ಪತಯಾಚನೆ ಮಾಡಲಿರುವ ಕಾರ್ಯಕ್ರಮದಲ್ಲಿ ಎರಡು ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಘಟಕದ ಅಧ್ಯಕ್ಷರು ಸೇರಿ 52 ಮುಖಂಡರಿಗೆ ಮಾತ್ರ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ನರೇಂದ್ರ ಮೋದಿ ಅವರು 28ರಂದು ಬೆಳಿಗ್ಗೆ 10ಕ್ಕೆ ಬೆಳಗಾವಿಯಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದು, ಮಧ್ಯಾಹ್ನ 12ಕ್ಕೆ ಶಿರಸಿಯಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸುವರು. ಬಳಿಕ ಮಧ್ಯಾಹ್ನ 2ಕ್ಕೆ ದಾವಣಗೆರೆಯ ಸಮಾವೇಶ ಮುಗಿಸಿ ಸಂಜೆ 4ಕ್ಕೆ ಹೊಸಪೇಟೆಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಹಾವೇರಿ ಜಿಲ್ಲೆಗಳಿಂದ ಪೊಲೀಸರನ್ನು ನಿಯೋಜಿಸಲಾಗಿದೆ.

‘ಕಾರ್ಯಕ್ರಮದ ಸಮಯದಲ್ಲಿ ಪ್ರತಿಭಟನೆ ಮಾಡುವವರು ಹಾಗೂ ಕಪ್ಪುಬಟ್ಟೆ ಪ್ರದರ್ಶನ ಮಾಡುವವರ ಮೇಲೆ ನಿಗಾವಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಮುಂಜಾಗ್ರತಾ ದೃಷ್ಟಿಯಿಂದ ಶನಿವಾರದಿಂದಲೇ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಕಾರ್ಯಕ್ರಮದ ಸ್ಥಳದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು, ಕೆಲವು ಅಂಗಡಿ, ಹೋಟೆಲ್‌ಗಳನ್ನು ಬಂದ್ ಮಾಡಲಾಗಿತ್ತು. ಹೈಸ್ಕೂಲ್ ಮೈದಾನದ ಸಮೀಪ ಇದ್ದ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಗಳನ್ನು ಸ್ಥಳಾಂತರ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಎಂ.ಪಿ.ರೇಣುಕಾಚಾರ್ಯ, ಮಾಜಿ ಮೇಯರ್ ಬಿ.ಜಿ.ಅಜಯ್‌ಕುಮಾರ್ ಸೇರಿದಂತೆ ಹಲವು ಮುಖಂಡರು ವೇದಿಕೆಯನ್ನು ಪರಿಶೀಲಿಸಿದರು.

‘ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ಜನರು ಅವರನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಅವರನ್ನು ಪ್ರಧಾನಿ ಮಾಡಲು ಜನರು ಗಾಯತ್ರಿ ಸಿದ್ದೇಶ್ವರ ಅವರಿಗೆ ಮತ ನೀಡಲಿದ್ದಾರೆ. ಯಡಿಯೂರಪ್ಪ ಅವರ ಜೊತೆ ಗೋವಿಂದ ಕಾರಜೋಳ, ಎನ್‌.ರವಿಕುಮಾರ್, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಅವರು ಭಾಗವಹಿಸಲಿದ್ದಾರೆ’ ಎಂದು ಜಿ.ಎಂ. ಸಿದ್ದೇಶ್ವರ ಹೇಳಿದರು. ಮುಖಂಡರಾದ ಲೋಕಿಕೆರೆ ನಾಗರಾಜ್, ಮಾಡಾಳ್ ಮಲ್ಲಿಕಾರ್ಜುನ್, ಕೊಳೇನಹಳ್ಳಿ ಸತೀಶ್, ಶಂಕರಗೌಡ ಬಿರಾದಾರ್, ಎನ್.ಎಚ್.ಹಾಲೇಶ್, ಮಂಜುನಾಥ್, ಎಚ್.ಪಿ.ವಿಶ್ವಾಸ್, ತೋಟಪ್ಪ ಇದ್ದರು.

5ನೇ ಬಾರಿಗೆ ಮೋದಿ ದಾವಣಗೆರೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಐದನೇ ಬಾರಿಗೆ ದಾವಣಗೆರೆಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿಯಾದ ನಂತರ ಮೂರನೇ ಬಾರಿಗೆ ದಾವಣಗೆರೆಗೆ ಆಗಮಿಸುತ್ತಿರುವುದು ವಿಶೇಷ.

ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ 2014 ಫೆ.18ರಂದು ‘ಭಾರತ ಗೆಲ್ಲಿಸಿ’ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿಯಾದ ಬಳಿಕ 2016ರ ಮೇ 29ರಂದು ಆಯೋಜಿಸಿದ್ದ ‘ವಿಕಾಸ ಪರ್ವ’ ಸಮಾವೇಶದಲ್ಲಿ ಭಾಗವಹಿಸಿದ್ದರು.

2018ರ ಫೆ.27ರಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ 75ನೇ ಜನ್ಮದಿನದ ಅಂಗವಾಗಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ರೈತ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅದು ಬರೀ ರೈತ ಸಮಾವೇಶ ವಾಗಿರಲಿಲ್ಲ. ವಿಧಾನಸಭಾ ಚುನಾವಣಾ ಪ್ರಚಾರ ಚಾಲನಾ ಕಾರ್ಯಕ್ರಮವೂ ಆಗಿತ್ತು. 2023ರ ಮಾರ್ಚ್ 25ರಂದು ವಿಧಾನ ಸಭಾ ಚುನಾವಣೆಯ ‘ವಿಜಯ ಸಂಕಲ್ಪ ಯಾತ್ರೆ’ ಸಮಾರೋಪಕ್ಕೆ ಆಗಮಿಸಿದ್ದರು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT