ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರ: ಠೇವಣಿ ಕಳೆದುಕೊಂಡವರ ಪರೇಡ್‌

ಸ್ಪರ್ಧಾ ಕಣದಲ್ಲಿದ್ದ 30 ಅಭ್ಯರ್ಥಿಗಳಲ್ಲಿ 28 ಅಭ್ಯರ್ಥಿಗಳ ಠೇವಣಿ ಜಪ್ತಿ
Published 7 ಜೂನ್ 2024, 5:19 IST
Last Updated 7 ಜೂನ್ 2024, 5:19 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಹುತೇಕ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದ್ದಾರೆ. ಬಹುತೇಕ ಅಭ್ಯರ್ಥಿಗಳು ನೋಟಾ (ಈ ಮೇಲಿನ ಯಾರೂ ಇಲ್ಲ ಆಯ್ಕೆ)ಗಿಂತ ಕಡಿಮೆ ಮತ ಪಡೆದಿರುವುದು ಗಮನಾರ್ಹ.

ಗೆದ್ದ ಅಭ್ಯರ್ಥಿ ಹಾಗೂ ಸಮೀಪದ ಪ್ರತಿಸ್ಪರ್ಧಿ ಹೊರತುಪಡಿಸಿ ಉಳಿದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿರುವುದು ಈ ಚುನಾವಣೆಯ ವಿಶೇಷ. 1977ರಿಂದ 2024ರವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಾಮಾನ್ಯವಾಗಿ ಗೆದ್ದ ಹಾಗೂ ಪ್ರತಿಸ್ಪರ್ಧಿ ಹೊರತುಪಡಿಸಿ ಉಳಿದ ಬಹುತೇಕರು ಠೇವಣಿ ಉಳಿಸಿಕೊಂಡಿಲ್ಲ. ಅದು ಈ ಚುನಾವಣೆಯಲ್ಲೂ ಮುಂದುವರಿದಿದೆ.

ಚುನಾವಣೆಯ ನಿಯಮಗಳ ಪ್ರಕಾರ ಚಲಾವಣೆಯಾದ ಒಟ್ಟು ಮತಗಳಲ್ಲಿ 6ನೇ ಒಂದು ಭಾಗದಷ್ಟು ಮತ ಪಡೆಯಲು ಸಾಧ್ಯವಾಗದೇ ಇದ್ದರೆ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ನಿಯಮದ ಪ್ರಕಾರ ಈ ಬಾರಿ ಕ್ಷೇತ್ರದಲ್ಲಿ 28 ಜನರು ಠೇವಣಿ ಕಳೆದುಕೊಂಡಿದ್ದಾರೆ.

ಬಹುತೇಕ ಅಭ್ಯರ್ಥಿಗಳು ಮೂರಂಕಿ, ನಾಲ್ಕಂಕಿ ಮತ ಪಡೆದಿದ್ದಾರೆ. ಹಿಂದಿನ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಅತಿ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಠೇವಣಿ ಕಳೆದುಕೊಂಡಿದ್ದಾರೆ.

ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತ 13,15,746. ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು 30 ಜನ. ಅದರಲ್ಲಿ ಕಾಂಗ್ರೆಸ್‌ನ ಡಾ. ಪ್ರಭಾ ಮಲ್ಲಿಕಾರ್ಜುನ್‌ ಗೆದ್ದರೆ, ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಸಮೀಪದ ಪ್ರತಿಸ್ಪರ್ಧಿ. ಇವರಿಬ್ಬರನ್ನು ಹೊರತುಪಡಿಸಿದರೆ ಉಳಿದ 28 ಜನರು ಠೇವಣಿ ಕಳೆದುಕೊಂಡಿದ್ದಾರೆ.

ಒಟ್ಟು ಚಲಾವಣೆಯಾದ ಮತದ ಶೇ 5ರಷ್ಟು ಮತವನ್ನೂ ಈ ಅಭ್ಯರ್ಥಿಗಳು ಪಡೆಯದೇ ಇರುವುದು ಗಮನಾರ್ಹ.

ನಿರೀಕ್ಷೆ ಹೆಚ್ಚಿಸಿದ್ದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ (ಪಡೆದ ಮತ 42907) ಕೂಡ ಠೇವಣಿ ಉಳಿಸಿಕೊಂಡಿಲ್ಲ. (ಠೇವಣಿ ಉಳಿಸಿಕೊಳ್ಳಲು 2,19,291 ಮತ ಪಡೆಯಬೇಕಿತ್ತು).

ಬಹುತೇಕ ಅಭ್ಯರ್ಥಿಗಳು ನೋಟಾಗಿಂತ (3173) ಕಡಿಮೆ ಮತ ಪಡೆದಿದ್ದಾರೆ. ಜಿ.ಬಿ.ವಿನಯ್ ಕುಮಾರ್ ಹಾಗೂ ಬಹುಜನ ಸಮಾಜ ಪಾರ್ಟಿಯ ಡಿ.ಹನುಮಂತಪ್ಪ (ಪಡೆದ ಮತ 4475) ಹೊರತುಪಡಿಸಿ ಉಳಿದ 26 ಅಭ್ಯರ್ಥಿಗಳು ನೋಟಾಗಿಂತ ಕಡಿಮೆ ಮತ ಪಡೆದಿದ್ದಾರೆ.

ಉತ್ತಮ ಪ್ರಜಾಕೀಯ ಪಾರ್ಟಿಯ ಈಶ್ವರ ಶೇಂಗಾ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)ದ ಅಣಬೇರು ತಿಪ್ಪೇಸ್ವಾಮಿ, ಕಂಟ್ರಿ ಸಿಟಿಜನ್ ಪಾರ್ಟಿಯ ಎಂ.ಪಿ.ಖಲಂದರ್, ಜನಹಿತ ಪಕ್ಷದ ದೊಡ್ಡೇಶಿ ಎಚ್.ಎಸ್., ಸಮಾಜ ವಿಕಾಸ ಕ್ರಾಂತಿ ಪಾರ್ಟಿಯ ರುದ್ರೇಶ್ ಕೆ.ಎಚ್, ರಾಣಿ ಚೆನ್ನಮ್ಮ ಪಾರ್ಟಿಯ ವೀರೇಶ್ ಎಸ್., ಕರ್ನಾಟಕ ರಾಷ್ಟ್ರ ಸಮಿತಿಯ ಕೆ.ಎಸ್.ವೀರಭದ್ರಪ್ಪ, ನವಭಾರತ ಸೇನಾದ ಎಂ.ಜಿ.ಶ್ರೀಕಾಂತ್, ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷ ಎಂ.ಸಿ.ಶ್ರೀನಿವಾಸ್,  ಪಕ್ಷೇತರರಾದ ಅಬ್ದುಲ್ ನಜೀರ್ ಅಹಮದ್, ಎ.ಕೆ.ಗಣೇಶ್, ಜಿ.ಎಂ.ಗಾಯಿತ್ರಿ ಸಿದ್ದೇಶಿ, ಟಿ.ಚಂದ್ರು, ಟಿ.ಜಬೀನಾ ಆಪಾ, ತಸ್ಲೀಮ್ ಬಾನು, ಪರ್ವೀಜ್ ಎಚ್., ಪೆದ್ದಪ್ಪ ಎಸ್., ಬರ್ಕತ್ ಅಲಿ, ಜಿ.ಎಂ. ಬರ್ಕತ್ ಅಲಿ ಬಾಷಾ, ಮೆಹಬೂಬ್ ಬಾಷಾ,  ಮೊಹ್ಮದ್ ಹಯಾತ್ ಎಂ., ಮಂಜು ಮಾರಿಕೊಪ್ಪ, ರವಿನಾಯ್ಕ ಬಿ., ರಷೀದ್ ಖಾನ್, ಸಲೀಂ ಎಸ್., ಸೈಯದ್ ಜಬೀವುಲ್ಲಾ ಕೆ. ಠೇವಣಿ ಕಳೆದುಕೊಂಡವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT