ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಶೇ 85ಕ್ಕಿಂತ ಹೆಚ್ಚು ಮತದಾನಕ್ಕೆ ಜಾಗೃತಿ

ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್
Published 28 ಮಾರ್ಚ್ 2024, 5:06 IST
Last Updated 28 ಮಾರ್ಚ್ 2024, 5:06 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಸ್ತುತ ಲೋಕಸಭೆಗೆ ಚುನಾವಣೆಯಲ್ಲಿ ಶೇ 85ಕ್ಕಿಂತಲೂ ಹೆಚ್ಚಿನ ಮತದಾನ ನಡೆಯುವಂತೆ ನೋಡಿಕೊಂಡು ಹೊಸ ದಾಖಲೆ ಬರೆಯಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಕೋರ್ ಕಮಿಟಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ದಾವಣಗೆರೆ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಶೇ 72.96ರಷ್ಟು ಮತದಾನವಾಗಿತ್ತು. ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಿ ಜಾಗೃತಿ ಮೂಡಿಸುವುದರ ಜೊತೆಗೆ ಅವರಿಗೆ ಆಗಿರುವ ಅನಾನುಕೂಲಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಮತದಾನ ಕಡಿಮೆಯಾಗಲು ಕಾರಣವಾಗಿರುವ ಅಂಶಗಳನ್ನು ಮನಗಂಡು ಅದಕ್ಕೆ ಪರಿಹಾರ ಕಂಡುಕೊಂಡು ಈ ವರ್ಷ ಮತದಾನ ಹೆಚ್ಚಳಕ್ಕೆ ಮುಂದಾಗಬೇಕಾಗಿದೆ’ ಎಂದರು.

‘ಗ್ರಾಮಾಂತರ ಪ್ರದೇಶಗಳಲ್ಲಿ ಮತದಾನ ಹೆಚ್ಚು ಇರುತ್ತದೆ, ಆದರೆ ನಗರ, ಪಟ್ಟಣ ಪ್ರದೇಶದ ಕೆಲವು ಪ್ರದೇಶಗಳು ಅಂದರೆ ಶಿಕ್ಷಣವಂತರೇ ಮತದಾನದಿಂದ ದೂರ ಇರುತ್ತಾರೆ.  ಚುನಾವಣಾ ಫಲಿತಾಂಶದಲ್ಲಿ ಒಂದು ಮತದ ಪಾತ್ರವೂ ಬಹಳ ಪ್ರಾಮುಖ್ಯವಾಗಿದ್ದು, ಎಲ್ಲರೂ ಚುನಾವಣಾ ಹಬ್ಬದಲ್ಲಿ ಭಾಗವಹಿಸುವಂತೆ ಪ್ರೆರೇಪಿಸಬೇಕಾಗಿದೆ’ ಎಂದರು.

ಮತಗಟ್ಟೆ ಸೌಲಭ್ಯಗಳ ಕಡೆಗೂ ಗಮನಹರಿಸಿ:

ಮತಗಟ್ಟೆಗೆ ಜನರು ಖುಷಿಯಿಂದ ಬಂದು ಮತದಾನ ಮಾಡುವಂತಹ ವಾತಾವರಣ ಕಲ್ಪಿಸಬೇಕು. ಮತಗಟ್ಟೆಗಳಲ್ಲಿ ಜನರಿಗೆ ಕನಿಷ್ಠ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ದಾವಣಗೆರೆ ನಗರದ ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಎಲ್ಲಾ ಮತದಾರರ ವಿವರ ಸಂಗ್ರಹ ಮಾಡಿಕೊಂಡಿರುವುದನ್ನು ಗಮನಿಸಲಾಗಿದೆ. ಇದಕ್ಕಾಗಿಯೇ ಪ್ರತ್ಯೇಕ ವಹಿ ನಿರ್ವಹಿಸುವ ಮೂಲಕ ಎಲ್ಲಾ ಮಾಹಿತಿ ಸಂಗ್ರಹ ಮಾಡಿ ಮತದಾರರೊಂದಿಗೆ ಸಂಪರ್ಕವನ್ನಿಟ್ಟುಕೊಂಡಿದ್ದು ಇದು ಸಹ ಮತದಾನ ಹೆಚ್ಚಳಕ್ಕೆ ಪೂರಕವಾದ ಅಂಶವಾಗಿದೆ’ ಎಂದರು.

 ಇಲಾಖಾವಾರು ಮತದಾರರ ಜಾಗೃತಿ ಕಾರ್ಯಕ್ರಮ:

‘ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ವಿಶೇಷವಾಗಿ ಮೂರು ತಲೆಮಾರಿನ ಮತದಾರರಿಂದ ಮತದಾನ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಸೇರಿದಂತೆ ಮತದಾರರ ಜಾಗೃತಿಗೆ ವಿನೂತನ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ’ ಎಂದು ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದರು.

‘ಮತದಾರರ ಜಾಗೃತಿಗೆ ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗಿದೆ ಮತ್ತು ಆರೋಗ್ಯ ಇಲಾಖೆಯಿಂದ ಮೇ 7ರಂದು ಮತದಾನ ಮಾಡಲು ಚಿಕಿತ್ಸೆ, ತಪಾಸಣೆಗೆ ಆಗಮಿಸುವ ಎಲ್ಲ ರೋಗಿಗಳು, ಜೊತೆಯಲ್ಲಿ ಬರುವವರಿಗೂ ಮತದಾನ ಜಾಗೃತಿ ಮೂಡಿಸಲಾಗುತ್ತದೆ. ಹಾಸ್ಟೆಲ್‍ನಲ್ಲಿ ಇರುವ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಕಾರ್ಯಕ್ರಮ ರೂಪಿಸಲಾಗುತ್ತದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘2023ರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಶೇ 85ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಲು ಅಗತ್ಯವಿರುವ ಎಲ್ಲಾ ಜಾಗೃತಿ ಕಾರ್ಯಕ್ರಮ ರೂಪಿಸಲಾಗಿದೆ. ಕಾಲೇಜುಗಳಲ್ಲಿ ಸ್ವೀಪ್ ಕಾರ್ಯಕ್ರಮ ರೂಪಿಸುವ ಮೂಲಕ ಮತ್ತು ಸಂವಾದ ನಡೆಸುವ ಮೂಲಕ 36 ಸಾವಿರಕ್ಕಿಂತ ಹೆಚ್ಚು ಹೊಸ ಮತದಾರರನ್ನು ನೊಂದಣಿ ಮಾಡಿಸಲಾಗಿದೆ' ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್, ಪಾಲಿಕೆ ಆಯುಕ್ತೆ ರೇಣುಕಾ, ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ಮಹಾಂತೇಶ್‌ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮತದಾನ ಜಾಗೃತಿಗೆ ಬೈಕ್ ರ‍್ಯಾಲಿ

ದಾವಣಗೆರೆ: ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಅಂಗವಿಕಲರು ಶೇ 100ರಷ್ಟು ಮತದಾನ ಮಾಡಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಸಲಹೆ ನೀಡಿದರು. ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಅಂಗವಿಕಲರ ಬೈಕ್ ರ‍್ಯಾಲಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಂಗವಿಕಲರು ಶೇ 97ರಷ್ಟು ಮತದಾನ ಮಾಡಿದ್ದು ಈ ಬಾರಿ ಶೇ 100ರಷ್ಟು ಮತದಾನ ಮಾಡುವ ವಿಶ್ವಾಸವಿದೆ. ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ ಎಲ್ಲರೂ ಸೇರಿ ಮತದಾನ ಮಾಡುವ ಮೂಲಕ ಅತ್ಯುತ್ತಮ ಪ್ರಜಾಪ್ರಭುತ್ವದ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ’ ಎಂದರು. ಜಿಲ್ಲಾ ಪಂಚಾಯಿತಿ ಆವರಣದಿಂದ ಹೊರಟ ರ‍್ಯಾಲಿ ಹದಡಿ ರಸ್ತೆ ಜಯದೇವ ಸರ್ಕಲ್ ಪಿ.ಬಿ. ರೋಡ್ ಮಹಾನಗರ ಪಾಲಿಕೆ ಅಂತಿಮವಾಗಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ರ‍್ಯಾಲಿಯ ಸಮಾರೋಪದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾತನಾಡಿ ‘ಎಲ್ಲರ ಪಾಲ್ಗೊಳ್ಳುವಿಕೆಯೇ ಪ್ರಜಾಪ್ರಭುತ್ವ ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಜೆಗಳ ಅಧಿಕಾರ ಈ ಅಧಿಕಾರವನ್ನು ಮೇ 7ರಂದು ಮತಚಲಾಯಿಸುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ’ ಎಂದರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ. ಬಿ ಇಟ್ನಾಳ್ ಪಾಲಿಕೆ ಆಯುಕ್ತರಾದ ರೇಣುಕಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ವಿಕಲಚೇತನರ ಕಲ್ಯಾಣಾಧಿಕಾರಿ ಕೆ.ಕೆ. ಪ್ರಕಾಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT