ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ನ್ಯಾಯದ ಹೋರಾಟ ಯಶಸ್ವಿಗೊಳಿಸಿ

ಪೂರ್ವಭಾವಿ ಸಭೆಯಲ್ಲಿ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮನವಿ
Last Updated 6 ಡಿಸೆಂಬರ್ 2020, 8:51 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿರುವ 70 ಲಕ್ಷ ಕುರುಬ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸಬೇಕು ಎಂಬ ಉದ್ದೇಶದಿಂದ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದು, ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದುಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮನವಿ ಮಾಡಿದರು.

ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿಗಾಗಿ ಜನವರಿ 15ರಿಂದ ಕಾಗಿನೆಲೆಯಿಂದ ಬೆಂಗಳೂರಿಗೆ ನಡೆಯುವ ಪಾದಯಾತ್ರೆ ಸಿದ್ಧತೆಗಾಗಿ ದಾವಣಗೆರೆಯಲ್ಲಿ ಎಸ್‌.ಟಿ ಹೋರಾಟ ಸಮಿತಿಯಿಂದ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಎಸ್‌ಟಿ ಹೋರಾಟದ ಬೇಡಿಕೆ ಇವತ್ತಿನದಲ್ಲ. ಬಹಳ ಹಿಂದಿನಿಂದಲೂ ಹೋರಾಟ ನಡೆದಿದೆ. ಕುರುಬ ಸಮುದಾಯ ಎಸ್‌ಟಿಯಲ್ಲಿ ಇದೆ. ಆದರೆ ಯಾವುದೋ ಒಂದು ತಪ್ಪು ಕಲ್ಪನೆಯಿಂದ ‘ಕುರುಬ’ ಪದ ಬಿಟ್ಟು ಹೋಗಿದೆ. ಅದನ್ನು ಸೇರಿಸಿ ಸವಲತ್ತು ನೀಡಬೇಕು. ಕೆಲವೊಂದು ಮೇಲ್ವರ್ಗದ ಜಾತಿಯವರಿಗೆ ಏನು ಮಾಡದೇ ಇದ್ದರೂ ಸವಲತ್ತುಗಳು ಸಿಗುತ್ತವೆ. ಆದರೆ ಹಿಂದುಳಿದ ವರ್ಗದವರು ಅನಿವಾರ್ಯವಾಗಿ ಹೋರಾಟ ಮಾಡಿ ಸವಲತ್ತುಗಳನ್ನು ಪಡೆದುಕೊಳ್ಳಬೇಕಿದೆ’ ಎಂದು ವಿಷಾದಿಸಿದರು.

‘ಬೀದರ್, ಕಲಬುರ್ಗಿ, ‌ಯಾದಗಿರಿಗಳ ಜೊತೆಗೆ ಅಖಂಡ ಕರ್ನಾಟಕದ ಕುರುಬರನ್ನು ಎಸ್‌ಟಿಗೆ ಸೇರಿಸಬೇಕು ಎಂದು ಕಳೆದ ವಾರ ದೆಹಲಿಗೆ ಹೋಗಿ ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವೆ ರೇಣುಕಾ ಸಿಂಗ್ ಮೀಸಲಾತಿ ಸಂಬಂಧ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದ್ದಾರೆ’ ಎಂದು ಉತ್ತರಿಸಿದರು.

ಒಂದು ದಿನಕ್ಕೆ ಎರಡು ತಾಲ್ಲೂಕು, ಒಂದು ಜಿಲ್ಲೆ: ‘23 ದಿನಗಳ ಕಾಲ ನಡೆಯುವ ಪಾದಯಾತ್ರೆ ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಒಂದು ದಿನಕ್ಕೆ ಎರಡು ತಾಲ್ಲೂಕು ಅದರ ಜೊತೆಗೆ ರಾಜ್ಯದ ಒಂದು ಜಿಲ್ಲೆ ಪಾಲ್ಗೊಳ್ಳಬೇಕು. ಆ ಪ್ರಕಾರ ದಿನಾಂಕ ನಿಗದಿಪಡಿಸುತ್ತೇವೆ’ ಎಂದು ನಿರಂಜನಾನಂದಪುರಿ ಶ್ರೀ ಮಾಹಿತಿ ನೀಡಿದರು.

‘ಎಸ್‌ಟಿ ಹೋರಾಟ ಸಮಿತಿ ಹಾಗೂ ಕಾಗಿನೆಲೆ ಮಹಾ ಸಂಸ್ಥಾನ ಗುರುಪೀಠ ಹಾಗೂ ಎಲ್ಲಾ ಸಂಘಟನೆ
ಗಳು ಪಾದಯಾತ್ರೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಎಲ್ಲ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಗುರಿ ಮುಟ್ಟುವ ತನಕ ಹೋರಾಟ ಮಾಡಬೇಕು.ಸಮಾಜದಿಂದ ನಾವು ಇರಬೇಕು. ನಮ್ಮಿಂದ ಸಮಾಜ ಅಲ್ಲ. ಸಮಾಜದ ಎಲ್ಲವನ್ನೂ ಅನುಭವಿಸಿದ್ದೇವೆ. ಅಂತಹ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಎಸ್‌ಟಿ ಎನ್ನುವುದು ಸಮುದ್ರ, ನಾವೆಲ್ಲರೂ ನದಿಯಾಗಬೇಕಾಗಿದೆ. ಎಲ್ಲರೂ ನದಿಗಳಾಗಿ ಹೋರಾಡಿದರೆ ಗುರಿ ಮುಟ್ಟಲು ಸಾಧ್ಯ’ ಎಂದರು.

ಸಮಾಜದ ಮುಖಂಡರಾದ, ಬಿ.ಎಂ.ಸತೀಶ್, ಮಂಜುನಾಥ್, ಹದಡಿ ನಿಂಗಪ್ಪ, ಬಿ.ಎಚ್. ಪರಶುರಾಮಪ್ಪ, ಕುಣೆಬೆಳೆಕೇರಿ ದೇವೇಂದ್ರಪ್ಪ, ಪಿ.ಜೆ. ರಮೇಶ್, ಕುಂಬಳೂರು ವಿರೂಪಾಕ್ಷಪ್ಪ, ಜಿ.ಸಿ.ಲಿಂಗಪ‍್ಪ, ರಾಜು ಮೌರ್ಯ ಮಾತನಾಡಿದರು.ಸಭೆಯಲ್ಲಿ ಸಮಾಜದ ಮುಖಂಡರಾದ ಎಚ್.ಬಿ. ಗೋಣೆಪ್ಪ, ಎಚ್.ಎನ್.ಗುರುನಾಥ್, ಎಚ್.ಜಿ. ಸಂಗಪ್ಪ, ಸುನಂದಮ್ಮ ಪರಶುರಾಮಪ್ಪ, ಮುದಹದಡಿ ದಿಳ್ಯಪ್ಪ ಭಾಗವಹಿಸಿದ್ದರು. ಪುರಂದರ ಲೋಕಿಕೆರೆ ಪ್ರಾರ್ಥಿಸಿದರು. ಅಡಾಣಿ ಸಿದ್ದಪ್ಪ
ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT