ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನನೆಗುದಿಗೆ ಬಿದ್ದ ಕಾಮಗಾರಿ: ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹ

Published : 9 ಆಗಸ್ಟ್ 2023, 7:10 IST
Last Updated : 9 ಆಗಸ್ಟ್ 2023, 7:10 IST
ಫಾಲೋ ಮಾಡಿ
Comments

ಮಲೇಬೆನ್ನೂರು: ನನೆಗುದಿಗೆ ಬಿದ್ದಿರುವ ಮಲೇಬೆನ್ನೂರು-ಜಿಗಳಿ-ಹೊಳೆಸಿರಿಗೆರೆ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಇಇ ಆಶಾಜ್ಯೋತಿ, ಎಇಇ ಕವಿತಾ ಸೋಮವಾರ ಭೇಟಿ ನೀಡಿ, ಶಾಸಕ ಬಿ.ಪಿ. ಹರೀಶ್ ಉಪಸ್ಥಿತಿಯಲ್ಲಿ ಪರಿಶೀಲಿಸಿದರು. ನಾಗರಿಕರ ಸಮಸ್ಯೆಗಳನ್ನು ಆಲಿಸಿದರು.

ದೇವದುರ್ಗದ ಗುತ್ತಿಗೆದಾರ ವಿರೂಪಾಕ್ಷಪ್ಪ ಬಳೆ ಅವರು ₹4.75 ಕೋಟಿ ವೆಚ್ಚದ ಕಾಮಗಾರಿಯನ್ನು ಗುತ್ತಿಗೆ ಪಡೆದು, ಚುನಾವಣೆ ಪೂರ್ವದಲ್ಲಿ ಆರಂಭಿಸಿದ್ದರು. ಆದರೆ ಅರೆಬರೆ ಕೆಲಸ ಮಾಡಿ ಸ್ಥಗಿತಗೊಳಿಸಿದ್ದರು.

ಮಳೆಗಾಲದ ವೇಳೆ ಕೆಸರು ತುಂಬಿದ ರಸ್ತೆಯಲ್ಲಿ ಹಲವು ಅಪಘಾತಗಳು ಸಂಭವಿಸಿದ್ದು, ಜನರು ಕೈಕಾಲು ಮುರಿದುಕೊಂಡಿದ್ದರು. ಸ್ಥಳೀಯ ಅಧಿಕಾರಿಗಳು ಗಮನ ನೀಡದ ಹಿನ್ನೆಲೆಯಲ್ಲಿ ಬೇಸತ್ತ ಜನರು ಹಿರಿಯ ಎಂಜಿನಿಯರ್‌ಗಳಿಗೆ ದೂರು ನೀಡಿದ್ದರು.

ಗ್ರಾಮಸ್ಥರ ಮನವಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಎಂಜಿನಿಯರ್‌ಗಳು ಅರೆಬರೆ ಕಾಮಗಾರಿ ನೋಡಿ ಬೇಸರ ವ್ಯಕ್ತಪಡಿಸಿದರು. ‘6 ತಿಂಗಳಲ್ಲಿ ಕಾಮಗಾರಿ ಮುಗಿಸಿಕೊಡುವುದಾಗಿ ತಿಳಿಸಿದ ಗುತ್ತಿಗೆದಾರ ಕೆಲಸ ಬಿಟ್ಟು ಓಡಿಹೋಗಿದ್ದಾನೆ. ಅವನ ವಿರುದ್ಧ ಕ್ರಮ ಜರುಗಿಸಿ ಎಂದು ಜನರು ಪಟ್ಟು ಹಿಡಿದರು. ಸ್ಥಳಕ್ಕೆ ಶಾಸಕರೂ ಆಗಮಿಸಿದರು. ಗುತ್ತಿಗೆದಾರನನ್ನು ಬದಲಿಸಿ ಬೇಗ ಕಾಮಗಾರಿ ಮುಗಿಸಿ ರಸ್ತೆ ಸಮಸ್ಯೆ ಪರಿಹರಿಸಿ ಎಂದು ನಾಗರಿಕರು ಮನವಿ ಮಾಡಿದರು.

ಇದೇ ಗುತ್ತಿಗೆದಾರ ಸಮೀಪದ ಕುಂಬಳೂರು, ಆದಾಪುರದ ಬಳಿ 2 ಸೇತುವೆ ಎನ್‌ಎಚ್ 4-ಕೋಣನತಲೆ ಸಂಪರ್ಕ ರಸ್ತೆ, ಹೊನ್ನಾಳಿ ತಾಲ್ಲೂಕಿನ ಕೆಲವು ಕಾಮಗಾರಿಗಳನ್ನೂ ಪೂರ್ತಿ ಮಾಡಿಲ್ಲ ಎಂದು ನಾಗರಿಕರು ಅಧಿಕಾರಿಗಳ ಗಮನಕ್ಕೆ ತಂದರು. ಗುತ್ತಿಗೆದಾರನ ಎಲ್ಲ ಕಾಮಗಾರಿ ಪರಿಶೀಲಿಸುವ ಭರವಸೆ ನೀಡಿದ ಎಂಜಿನಿಯರ್‌ಗಳು ತೆರಳಿದರು.

ಮುಖಂಡರಾದ ಜಿಗಳಿ ಹನುಮಗೌಡ, ಬಿ. ಚಂದ್ರಪ್ಪ, ಪೂಜಾರ್ ನಾಗರಾಜ್, ದೇವರಾಜ್ ಅಂಗಡಿ, ಕರಿಮಲ್ಲಪ್ಪರ ನಾಗರಾಜ್ ರಂಗಪ್ಪ ಬೆಳ್ಳೂಡಿ, ಜೆ.ಇ. ಶಿವಮೂರ್ತಿ, ರೈತರು ಇದ್ದರು.

ರಸ್ತೆಯಲ್ಲಿ ಅರೆಬರೆ ಕಾಮಗಾರಿ ನಡೆಸಲಾಗಿದೆ
ರಸ್ತೆಯಲ್ಲಿ ಅರೆಬರೆ ಕಾಮಗಾರಿ ನಡೆಸಲಾಗಿದೆ

ಎಚ್ಚರಿಕೆಗೆ ಬಗ್ಗಿದ ಗುತ್ತಿಗೆದಾರ

ಶಾಸಕರ ಸಮ್ಮುಖದಲ್ಲಿ ಗುತ್ತಿಗೆದಾರರಿಗೆ ಅಧಿಕಾರಿಗಳು ಸ್ಥಳದಲ್ಲೇ ಕರೆ ಮಾಡಿದರು. ರಸ್ತೆ ಕೆಲಸವನ್ನು ತಕ್ಷಣ ಆರಂಭಿಸದಿದ್ದರೆ ಇಎಂಡಿ ಮುಟ್ಟುಗೋಲು ಹಾಕಿಕೊಂಡು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿದರು. ಅಧಿಕಾರಿಗಳ ಕಠಿಣ ಎಚ್ಚರಿಕೆಗೆ ಮಣಿದ ಗುತ್ತಿಗೆದಾರ ಬುಧವಾರ ಕಾಮಗಾರಿ ಆರಂಭ ಮಾಡುವುದಾಗಿ ತಿಳಿಸಿದ ಎಂದು ತಿಳಿದುಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT