ಶುಕ್ರವಾರ, ಜನವರಿ 24, 2020
16 °C
ಕೆಲ ಸಮಯ ಗೊಂದಲದ ಗೂಡಾದ ಸಭೆ * ಸ್ವಲ್ಪ ಹೊತ್ತು ಸಭೆಯಿಂದ ಹೊರನಡೆದ ಜಿಲ್ಲಾಧಿಕಾರಿ

ಮಾಯಕೊಂಡ ತಾಲ್ಲೂಕು: ಪರ–ವಿರೋಧದ ಏರುಧ್ವನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಾಯಕೊಂಡವನ್ನು ತಾಲ್ಲೂಕನ್ನಾಗಿ ರಚಿಸುವ ಬಗ್ಗೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜನಾಭಿಪ್ರಾಯ ಸಂಗ್ರಹದ ಸಭೆ ತಾಲ್ಲೂಕಿಗೆ ಸೇರುವ– ಸೇರಲಿಚ್ಛಿಸದವರ ಏರುಧ್ವನಿಗಳ ವಿನಿಮಯಕ್ಕೆ ಸಾಕ್ಷಿಯಾಯಿತು. ಸಭೆಯಲ್ಲಿದ್ದವರು ತಮ್ಮೊಳಗೇ ವಾಗ್ವಾದ ನಡೆಸುವುದನ್ನು ಕಂಡ ಜಿಲ್ಲಾಧಿಕಾರಿ ಸಭೆಯಿಂದ ಹೊರನಡೆದರು. ಪರಿಸ್ಥಿತಿ ಶಾಂತಗೊಂಡ ಬಳಿಕ ಮತ್ತೆ ಮರಳಿ ಸಭೆ ಮುಂದುವರಿಸಿದರು.

ಪೊಲೀಸ್‌ ಬಂದೋಬಸ್ತು ಏರ್ಪಡಿಸಲಾಗಿತ್ತು. ಆದರೆ ವಾದ, ವಿವಾದಗಳು ಜೋರಾದಾಗ ಮತ್ತಷ್ಟು ಪೊಲೀಸರನ್ನು ಕರೆಸಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಅವರೇ ಬಂದು ನಿಯಂತ್ರಿಸಿದರು. ಸರಿಯಾಗಿ ಕೇಳಿಸದ ಧ್ವನಿವರ್ಧಕ ಕೂಡ ಸಮಸ್ಯೆ ಉಂಟು ಮಾಡಿತು.

ತಾಲ್ಲೂಕಿಗಲ್ಲ, ಸೇರ್ಪಡೆಗೆ ವಿರೋಧ

‘ಎಲ್ಲ ಸೌಲಭ್ಯ ಇರುವುದರಿಂದ ಮಾಯಕೊಂಡವನ್ನೇ ತಾಲ್ಲೂಕನ್ನಾಗಿ ಮಾಡಬೇಕು’ ಎಂದು ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದರು. ‘ಮಾಯಕೊಂಡ ತಾಲ್ಲೂಕು ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಆ ತಾಲ್ಲೂಕಿಗೆ ನಮ್ಮನ್ನು ಸೇರ್ಪಡೆ ಮಾಡಬೇಡಿ’ ಎಂದು ಬಹುತೇಕರು ಮನವಿ ಮಾಡಿಕೊಂಡರು.

ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್ ಆರಂಭದಲ್ಲಿ ಮಾತನಾಡಿ, ‘ಹೊಸ ತಾಲ್ಲೂಕು ರಚನೆ ವೇಳೆ ಭೌಗೋಳಿಕ ಅಂಶಗಳನ್ನು ಗಮನಿಸುವುದು ಅತಿ ಮುಖ್ಯ. ಮಾಯಕೊಂಡ ವಿಧಾನಸಭಾ ಕ್ಷೇತ್ರವನ್ನು ಆಧರಿಸಿ ತಾಲ್ಲೂಕನ್ನಾಗಿ ಮಾಡುವುದಿದ್ದರೆ ಕ್ಷೇತ್ರದ ಮಧ್ಯ ಭಾಗವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು. ಇಲ್ಲದೇ ಇದ್ದರೆ ಬಸವಾಪಟ್ಟಣ ಹೋಬಳಿ1 ಮತ್ತು 2ನ್ನು ಹೊರಗೆ ಇಡಿ. ನಾವು ಚನ್ನಗಿರಿ ತಾಲ್ಲೂಕಿನಲ್ಲೇ ಇರುತ್ತೇವೆ. ಮುಂದೆ ಚನ್ನಗಿರಿಯನ್ನು ಎರಡು ತಾಲ್ಲೂಕನ್ನಾಗಿ ಮಾಡುವುದಿದ್ದರೆ ತ್ಯಾವಣಿಗೆಯನ್ನು ಕೇಂದ್ರವನ್ನಾಗಿ ಮಾಡಿ. ಎಲ್ಲೇ ತಾಲ್ಲೂಕು ಮಾಡುವುದಿದ್ದರೂ ಅದಕ್ಕೆ ರೈತರ ಭೂಸ್ವಾಧೀನ ಮಾತ್ರ ಮಾಡಬೇಡಿ’ ಎಂದು ಸಲಹೆ ನೀಡಿದರು.

ತಾಲ್ಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಎಂಎಸ್‌ಕೆ ಶಾಸ್ತ್ರಿ, ‘ಮಾಯಕೊಂಡಕ್ಕೆ ಇತಿಹಾಸ ಇದೆ. ರಾಣಿ ಎಲಿಜಬೆತ್‌ ವಿರುದ್ಧ ಹೋರಾಡಿ 180 ಮಂದಿ ಇಲ್ಲಿ ಹುತಾತ್ಮರಾಗಿದ್ದಾರೆ. ಕರ್ನಾಟಕದಲ್ಲಿ ಮಾಯಕೊಂಡ, ಈಸೂರು ಮತ್ತು ತುರುವನೂರು ಮಾತ್ರ ಇಂಥ ಇತಿಹಾಸ ಹೊಂದಿದೆ. ಮಾಯಕೊಂಡಕ್ಕೆ ರೈಲು ಸಂಪರ್ಕ ಇದೆ. ಎಲ್ಲ ಮೂಲ ಸೌಲಭ್ಯಗಳಿವೆ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಮಾಯಕೊಂಡವನ್ನು ತಾಲ್ಲೂಕಾಗಿಸುಲು ಒತ್ತಾಯಿಸುತ್ತಿದ್ದೇವೆ. ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ತಾಲ್ಲೂಕುಗಳನ್ನಾಗಿ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಆಗಿಲ್ಲ. ಈಗ ಕಾಲ ಕೂಡಿ ಬಂದಿದೆ’ ಎಂದು ಹೇಳಿದರು.

ಮಾಯಕೊಂಡ ತಾಲ್ಲೂಕಿಗೆ ಬಸವಾಪಟ್ಟಣದವರು ಬೇಕಾಗಿಲ್ಲ ಎಂದು ಶಾಸ್ತ್ರಿ ಹೇಳಿದ ಮಾತು ತೀವ್ರ ಚಕಾಮಕಿಗೆ ಕಾರಣವಾಯಿತು. ಸಭೆ ಗೊಂದಲದ ಗೂಡಾಯಿತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಮಾತನ್ನೂ ಜನ ಕೇಳದಾಗ ಅವರು ಹೊರನಡೆದರು. ಮತ್ತೆ ಬಂದ ಜಿಲ್ಲಾಧಿಕಾರಿ, ‘ಎಲ್ಲರಿಗೂ ಅಭಿಪ್ರಾಯ ತಿಳಿಸುವ ಅವಕಾಶ ಮತ್ತು ಹಕ್ಕು ಇದೆ. ಯಾರೂ ಅಡ್ಡಿಪಡಿಸಬಾರದು. ಎರಡು ನಿಮಿಷದೊಳಗೆ ಅಭಿಪ್ರಾಯ ತಿಳಿಸಿ ಸುಮ್ಮನಾಗಬೇಕು. ಇಲ್ಲದೇ ಇದ್ದರೆ ಸಭೆ ನಡೆಸುವುದಿಲ್ಲ’ ಎಂದು ಎಚ್ಚರಿಸಿದರು.

ವಿವಾದವಾದ ಗೋಲಿಬಾರ್‌ ಹೇಳಿಕೆ: ಆನಗೋಡನ್ನು ಮಾಯಕೊಂಡ ತಾಲ್ಲೂಕಿಗೆ ಸೇರಿಸಿದರೆ 1992ರಲ್ಲಿ ಆದ ಗೋಲಿಬಾರ್‌ ಮರುಕಳಿಸಲಿದೆ ಎಂದು ಚಿನ್ನಸಮುದ್ರ ಶೇಖರ ನಾಯ್ಕ್‌ ಹೇಳಿದ ಮಾತು ವಿವಾದಕ್ಕೆ ಕಾರಣವಾಯಿತು. ಸಭೆಯಲ್ಲಿ ಮತ್ತೆ ಗದ್ದಲ ಏರ್ಪಟ್ಟಿತು. ಶೇಖರ ನಾಯ್ಕ್‌ ಅವರನ್ನು ಪೊಲೀಸರು ಕರೆದುಕೊಂಡು ಹೋಗಿ ಹಿಂದೆ ಕೂರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ.ವೈ ರಾಮಪ್ಪ, ‘ಮೊದಲು ನಕ್ಷೆ ತಯಾರಿಸಬೇಕು. ಮಾಯಕೊಂಡಕ್ಕೆ ಹತ್ತಿರ ಇರುವ ಪ್ರದೇಶಗಳನ್ನು ಸೇರಿಸಿ ತಾಲ್ಲೂಕು ಮಾಡಬೇಕು. ದೂರ ಇರುವ ಪ್ರದೇಶಗಳನ್ನು ಕೈಬಿಡಬೇಕು. ಹಿಂದುಳಿದ ಪ್ರದೇಶವು ತಾಲ್ಲೂಕಾದರೆ ನಂಜುಂಡಪ್ಪ ವರದಿಯ ಪ್ರಕಾರ ಹೆಚ್ಚು ಅನುದಾನ ಸಿಗುತ್ತದೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಜಿ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ದಾವಣಗೆರೆ ತಹಶೀಲ್ದಾರ್ ಸಂತೋಷ್‌ ಕುಮಾರ್, ಚನ್ನಗಿರಿ ತಹಶೀಲ್ದಾರ್ ನಾಗರಾಜ್, ತಾಲ್ಲೂಕು ಪಂಚಾಯಿತಿ ಇಒ ಧಾರುಕೇಶ್‌ ಅವರೂ ಇದ್ದರು.

ಸರ್ಕಾರಕ್ಕೆ ವಾಸ್ತವ ವರದಿ

ಎಲ್ಲರ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳಲಾಗಿದೆ. ವಿಡಿಯೊ ಚಿತ್ರೀಕರಣ ಕೂಡ ಮಾಡಲಾಗಿದೆ. ಕೆಲವರು ತಾಲ್ಲೂಕು ಆಗಬೇಕು ಎಂದಿದ್ದೀರಿ. ಇನ್ನು ಕೆಲವರು ತಾಲ್ಲೂಕು ಆದರೂ ನಮ್ಮನ್ನು ಸೇರಿಸಬೇಡಿ ಎಂದಿದ್ದೀರಿ. ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ವೈಜ್ಞಾನಿಕವಾದ, ವಾಸ್ತವ ವರದಿಯನ್ನು ಮೂರು ದಿನಗಳ ಒಳಗೆ ಸರ್ಕಾರಕ್ಕೆ ಕಳುಹಿಸಲಾಗುವುದು. ಅಂತಿಮ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಪ್ರತಿಕ್ರಿಯಿಸಿ (+)