ಭಾನುವಾರ, ಸೆಪ್ಟೆಂಬರ್ 26, 2021
22 °C

ಎಂ.ಬಿ. ಪಾಟೀಲ ಕ್ಷಮೆ ಯಾಚಿಸಲು ಶಾಮನೂರು ಅಭಿಮಾನಿಗಳ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಗೃಹ ಸಚಿವ ಎಂ.ಬಿ. ಪಾಟೀಲ ಹಗುರವಾಗಿ ಮಾತನಾಡಿದ್ದು, ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಶಾಮನೂರು ಶಿವಶಂಕರಪ್ಪ ಅಭಿಮಾನಿ ಬಳಗ ಒತ್ತಾಯಿಸಿದೆ.

ವೀರಶೈವ– ಲಿಂಗಾಯತ ಸಮಾಜಕ್ಕೆ ಶಿವಶಂಕರಪ್ಪ ಅವರು ಹಲವು ಕೊಡುಗೆಗಳನ್ನು ನೀಡಿದ್ದಾರೆ. ಸಮಾಜದಲ್ಲಿ ಒಡಕು ಉಂಟು ಮಾಡಿದ ಎಂ.ಬಿ. ಪಾಟೀಲ ಅವರಿಗೆ ಮಂಗನಂತೆ ಮಾಡಿ ಸಮಾಜವನ್ನು ಹಾಳು ಮಾಡಬೇಡ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆಯೇ ಹೊರತು ಪಾಟೀಲರೇ ಮಂಗ ಎಂದು ಹೇಳಿಲ್ಲ. ಇದನ್ನು ಅರ್ಥಮಾಡಿಕೊಳ್ಳದ ಪಾಟೀಲರು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಅಭಿಮಾನಿ ಬಳಗದ ಬಿ.ಎಚ್‌. ವೀರಭದ್ರಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಇದನ್ನೂ ಓದಿ.. ಶಾಮನೂರು ಶಿವಶಂಕರಪ್ಪ ನನ್ನ ತಂದೆಗೆ ಸಮಾನರು: ಎಂ.ಬಿ.ಪಾಟೀಲ

ಕಿರಾಣಿ ಅಂಗಡಿ ನಡೆಸಿ ಶಾಮನೂರು ಶ್ರೀಮಂತರಾಗಿ ರಾಜಕೀಯ ಮಾಡಿದರೇ ಹೊರತು ರಾಜಕೀಯಕ್ಕೆ ಬಂದು ಶ್ರೀಮಂತರಾಗಿ ಕಿರಾಣಿ ಅಂಗಡಿ ನಡೆಸಲಿಲ್ಲ. ಕಾಯಕವೇ ಕೈಲಾಸ ಎಂಬ ತತ್ವದಡಿ ಕೆಲಸ ಮಾಡುತ್ತಾ ಇಲ್ಲಿನ ವಿದ್ಯಾಸಂಸ್ಥೆಗಳನ್ನು ಬೆಳೆಸಿದರು. ಎಸ್‌ಎಸ್‌ ಗರಡಿಯಲ್ಲಿ ಹಲವರು ಬೆಳೆದು ನಾಯಕರಾದರು ಎಂದು ಹೇಳಿದರು.

ಎಂ.ಬಿ. ಪಾಟೀಲ ಅವರು ಬಹಿರಂಗ ಕ್ಷಮೆ ಯಾಚಿಸಬೇಕು. ಮುಂದೆ ಶಾಮನೂರು ಆಗಲಿ, ಪಾಟೀಲರಾಗಲಿ ಈ ವಿವಾದವನ್ನು ಬೆಳೆಸಬಾರದು. ಪಾಟೀಲರು ಕ್ಷಮೆ ಯಾಚಿಸದಿದ್ದರೆ ಫೆ.1ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸೈಯದ್‌ ಸೈಫುಲ್ಲಾ ಮಾತನಾಡಿ, ‘ಧರ್ಮದ ಒಳಗಿನ ವಿಚಾರಗಳನ್ನು ಅಲ್ಲೇ ಮಾತನಾಡಿಕೊಳ್ಳಬೇಕು. ಅದನ್ನು ರಾಜಕೀಯಕ್ಕೆ ಎಳೆಯಬಾರದು. ಬಿ ಫಾರ್ಮ್‌ ಬಗ್ಗೆಯೂ ಪಾಟಿಲರು ಮಾತನಾಡಿರುವುದು ಸರಿಯಲ್ಲ. ಹಿಂದೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಬಿ ಫಾರ್ಮ್‌ ಕೇಳಿದ್ದೆ. ಉತ್ತರ ಕ್ಷೇತ್ರದಿಂದ ಪಕ್ಷ ನೀಡಿತ್ತು. ಅದಕ್ಕೂ ಶಾಮನೂರು ಅವರಿಗೂ ಯಾವುದೇ ಸಂಬಂಧ ಇಲ್ಲ. ಗೊಂದಲ ಸೃಷ್ಟಿಸಲು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ತಿಳಿಸಿದರು.

ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಡೆದ ರಾಜಕೀಯ ಹುನ್ನಾರಗಳ ಬಗ್ಗೆ ಶಾಮನೂರು ಮಾತನಾಡಿದರೇ ಹೊರತು, ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ವೀರಶೈವ, ಲಿಂಗಾಯತರು ಒಟ್ಟಿಗೆ ಹೋದರಷ್ಟೇ ಸಕಾರಾತ್ಮಕ ಕೆಲಸಗಳಾಗುತ್ತವೆ. ಪ್ರತ್ಯೇಕವಾಗಿ ಹೋದರೆ ಪ್ರಯೋಜನವಿಲ್ಲ ಎಂಬುದನ್ನು ಹೇಳಿದ್ದರು. ಅದಕ್ಕೆ ಪಾಟೀಲರ ಪ್ರತಿಕ್ರಿಯೆ ಸರಿಯಿಲ್ಲ ಎಂದು ಅಭಿಮಾನಿ ಬಳಗದ ಶಿವನಹಳ್ಳಿ ರಮೇಶ್‌, ದೇವರಮನೆ ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ... ಶಾಮನೂರು - ಪಾಟೀಲ ಬೈಗುಳ ಜಗಳಬಂದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು