ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಯವೇತನ ನೀಡದ ಸರ್ಕಾರದ ವಿರುದ್ಧ ವೈದ್ಯಕೀಯ ವಿದ್ಯಾರ್ಥಿಗಳಿಂದ ಬೀದಿ ನಾಟಕ

Last Updated 7 ಜುಲೈ 2020, 13:20 IST
ಅಕ್ಷರ ಗಾತ್ರ

ದಾವಣಗೆರೆ: 16 ತಿಂಗಳ ಶಿಷ್ಯವೇತನಕ್ಕೆ ಆಗ್ರಹಿಸಿ ಇಲ್ಲಿನ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದರು.

‘ಸರ್ಕಾರಕ್ಕೆ ಚೆಲ್ಲಾಟ, ವೈದ್ಯರಿಗೆ ಪ್ರಾಣಸಂಕಟ’ ಶೀರ್ಷಿಕೆಯಡಿ ವಿದ್ಯಾರ್ಥಿಗಳು ತಮ್ಮದೇ ಸ್ಥಿತಿಯನ್ನು ನಾಟಕದ ಮೂಲಕ ವಿವರಿಸಿದರು.

ತಂದೆ–ತಾಯಿಯದು ಬಡ ಕುಟುಂಬ. ಮಗಳನ್ನು ಚೆನ್ನಾಗಿ ಓದಿಸಿ ಡಾಕ್ಟರ್ ಮಾಡಬೇಕು ಎಂಬುದು ಅವರ ಬಯಕೆ. ಸಾಲ ಮಾಡಿ, ಹಣ ಸಾಲದ್ದಕ್ಕೆ ತಾಯಿ ತನ್ನ ಒಡವೆ ಮಾರಿ ಮೆಡಿಕಲ್ ಸೀಟು ಕೊಡಿಸುತ್ತಾರೆ. ಮಗಳು ಕಷ್ಟಪಟ್ಟು ಮೆಡಿಕಲ್ ಮುಗಿಸುತ್ತಾಳೆ. ಅಪ್ರೆಂಟಿಸ್ ಆಗಿ ದುಡಿಯುತ್ತಾಳೆ. ಆದರೆ ಸರ್ಕಾರವಾಗಲೀ, ಆಡಳಿತ ಮಂಡಳಿಯಾಗಲೀ ಶಿಷ್ಯವೇತನ ನೀಡುವುದಿಲ್ಲ. ಕೊನೆಗೆ ಸಾಲಗಾರ ಬಂದು ಸಾಲಕ್ಕೆ ಪೀಡಿಸುತ್ತಾನೆ. ಶಿಷ್ಯವೇತನ ಬಂದ ಮೇಲೆ ಕೊಡುತ್ತೇನೆ ಎಂದು ಬೇಡಿಕೊಳ್ಳುವುದು. ಸ್ನೇಹಿತೆ ತಿಂಡಿ ಕೊಡಿಸು ಎಂದು ಕೇಳಿದರೂ ತಿಂಡಿ ಕೊಡಿಸಲು ಹಣ ಇರುವುದಿಲ್ಲ. ಈ ಸನ್ನಿವೇಶಗಳ ಮೂಲಕ ನಾಟಕ ಮುಗಿಯುತ್ತದೆ.

ಶಿಷ್ಯವೇತನಕ್ಕೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ ಹಾಗೂ ಆಡಳಿತ ಮಂಡಳಿಯ ಜಗ್ಗಾಟದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ನೋವು ಅನುಭವಿಸುತ್ತಿದ್ದು, ಪತ್ರ ಚಳವಳಿ, ಸಹಿ ಸಂಗ್ರಹ ಚಳವಳಿಯ ನಂತರ ಬೀದಿ ನಾಟಕದ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಡಾ.ಗಾಯನ ಮತ್ತು ತಂಡ ಮನೋಜ್ಞವಾಗಿ ಅಭಿನಯಿಸಿತು. ಡಾ.ನಿಧಿ ಅವರು ಮನಮುಟ್ಟುವಂತೆ ನಿರೂಪಿಸಿದರು.

ಬೀದಿ ನಾಟಕ ಮುಗಿದ ನಂತರ ಚೀನಾ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಬ್ಯಾನರ್ ಅಳವಡಿಸಿ ವೈದ್ಯ ವಿದ್ಯಾರ್ಥಿಗಳು ನಮನ ಸಲ್ಲಿಸಿದರು. ಆನಂತರ ರಾಷ್ಟ್ರಗೀತೆ ಹಾಡಿದರು.

ಡಾ.ರಾಹುಲ್ ಮಾತನಾಡಿ, ‘ಚೀನಾದ ಗಾಲ್ಕನ್‌ ಕಣಿವೆಯಲ್ಲಿ ದೇಶಕ್ಕಾಗಿ ಹೋರಾಡುತ್ತಿರುವ ನಿಜವಾದ ಯೋಧರು ನಮಗೆ ಸ್ಫೂರ್ತಿ. ಜೀವದ ಹಂಗು ತೊರೆದು ಸೈನಿಕರು ಗಡಿಯಲ್ಲಿ ಹೋರಾಡುತ್ತಿದ್ದಾರೆ. ನಾವೂ ಜೀವದ ಹಂಗು ತೊರೆದು ಕೊರೊನಾ ವಿರುದ್ಧ ಸೈನಿಕರಂತೆ ನಾವೂ ಹೋರಾಡುತ್ತೇವೆ’ ಎಂದರು.

ಸರ್ಕಾರ ಹಾಗೂ ಆಡಳಿತ ಮಂಡಳಿ ನಮ್ಮ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಶಾಸಕರು ಬರೀ ಮಾತನಾಡುತ್ತಾರೆ ಅಷ್ಟೇ. ಕೆಲಸ ಮಾಡುವವರು ಯಾರೂ ಇಲ್ಲ. ನಾವು ರಾತ್ರಿ ವೇಳೆ ಕೆಲಸ ಮಾಡಿ ಇಲ್ಲಿಗೆ ಬರಬೇಕು. ಎಷ್ಟು ದಿವಸ ನಮ್ಮನ್ನು ರಸ್ತೆಯ ಮೇಲೆ ನಿಲ್ಲಿಸುತ್ತೀರಾ? ಆದಷ್ಟು ಬೇಗ ನಮ್ಮ ಬೇಡಿಕೆ ಈಡೇರಿಸಬೇಕು. ಕೆಲಸ ಮಾಡಲು ಧೈರ್ಯ ಹಾಗೂ ಸ್ಫೂರ್ತಿ ಬೇಕು ಎಂದರೆ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT