ಮಂಗಳವಾರ, ಮೇ 17, 2022
26 °C
ದೇಶದ ಏಳು ಕಡೆ ಜವಳಿ ಪಾರ್ಕ್‌ ತೆರೆಯಲು ಬಜೆಟ್‌ ಮೂಲಕ ಕೇಂದ್ರ ಸರ್ಕಾರ ಘೋಷಣೆ

ತೋಳಹುಣಸೆಗೆ ಬರಲಿದೆಯೇ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌?

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಒಂದು ಕಾಲದಲ್ಲಿ ಮ್ಯಾಂಚೆಸ್ಟರ್‌ ಸಿಟಿ ಎಂಬ ಹೆಗ್ಗಳಿಕೆಗೆ ಕಾರಣವಾಗಿದ್ದ ದಾವಣಗೆರೆ ಮತ್ತೆ ಗತವೈಭವ ಪಡೆಯಲಿದೆಯೇ ಎಂಬ ಕುತೂಹಲ ಎದುರಾಗಿದೆ. ದೇಶದಲ್ಲಿ ಏಳು ಕಡೆ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಅರ್ಥಸಚಿವೆ ಘೋಷಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಅದಕ್ಕೆ ಸಂಬಂಧಿಸಿದ ಪೂರಕ ಚಟುವಟಿಕೆಗಳು ಗರಿಗೆದರಿವೆ. ತೋಳಹುಣಸೆಯಲ್ಲಿರುವ ರಾಷ್ಟ್ರೀಯ ಜವಳಿ ನಿಗಮದ ಭೂಮಿಯಲ್ಲಿ ಜವಳಿ ಪಾರ್ಕ್‌ ತೆರೆಯಬಹುದು ಎಂದು ಜಿಲ್ಲಾಡಳಿತವು ಏಕಗವಾಕ್ಷಿ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ತೋಳಹುಣಸೆ ಗ್ರಾಮದಲ್ಲಿ ಈಗ ಮುಚ್ಚಿ ಹೋಗಿರುವ ಶ್ರೀ ಯಲ್ಲಮ್ಮ ಕಾಟನ್, ಉಲ್ಲನ್‌ ಆ್ಯಂಡ್‌ ಸಿಲ್ಕ್‌ ಮಿಲ್‍ನ 138.14 ಎಕರೆ ಜಾಗವಿದೆ. ಜಮೀನು ರಾಷ್ಟ್ರೀಯ ಜವಳಿ ನಿಗಮದ ಅಡಿಯಲ್ಲಿದೆ. ಇಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ ಮಾಡಿದರೆ 131 ಘಟಕಗಳನ್ನು ಆರಂಭಿಸಬಹುದು. ದಾರ ತಯಾರಿಕೆ, ಬಟ್ಟೆ ತಯಾರಿಕೆಯಿಂದ ಹಿಡಿದು ಜವಳಿಗೆ ಸಂಬಂಧಿಸಿದ ಬೇರೆ ಬೇರೆ ಕೆಲಸಗಳನ್ನು ಒಂದೆಡೆ ಆರಂಭಿಸಬಹುದು ಎಂದು ಅವುಗಳನ್ನು ಪಟ್ಟಿ ಮಾಡಲಾಗಿದೆ. ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಏಕಗವಾಕ್ಷಿ ಸಭೆಯಲ್ಲಿ ನಿರ್ಣಯ ಕೈಗೊಂಡು ಕಳುಹಿಸಿಕೊಡಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸೂಚಿಸಿದ್ದರು. ಅದರಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಾನು ಪ್ರಸ್ತಾಪಿಸಿದ್ದೆ. ಹಾಗಾಗಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಅದನ್ನು ಸರ್ಕಾರಕ್ಕೆ ಕಳುಹಿಸಬೇಕಿದೆ’ ಎಂದು ಜವಳಿ ಉದ್ಯಮಿ ಮಂಜುನಾಥ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ಉದ್ದಿಮೆ ಆರಂಭಿಸಲು ತಯಾರಿದ್ದಾರೆ. ಸರ್ಕಾರ 131 ಘಟಕಗಳ ಜವಳಿ ಪಾರ್ಕ್‌ ಎಂದು ಘೋಷಿಸಿ ಅವಕಾಶ ನೀಡಿದರೆ ಸುಮಾರು ₹ 400 ಕೋಟಿ ಹೂಡಿಕೆ ಹರಿದು ಬರಲಿದೆ. ಜತೆಗೆ ಸುಮಾರು 7 ಸಾವಿರ ಮಂದಿಗೆ ಉದ್ಯೋಗ ದೊರಕಲಿದೆ ಎಂಬುದು ಅವರ ವಿವರಣೆ.

ತೋಳಹುಣಸೆಯ ಈ ಜಮೀನನ್ನು ಜವಳಿ ಪಾರ್ಕ್‌ಗೆ ಪರಿಗಣಿಸುವಂತೆ ಸದಾನಂದ ಗೌಡರು ಕೇಂದ್ರ ಜವಳಿ ಸಚಿವೆ ಸ್ಮೃತಿ ಜುಬಿನ್‌ ಇರಾನಿ ಅವರಿಗೆ ಪತ್ರ ಬರೆದಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರೂ ಪತ್ರ ಬರೆದು ಜವಳಿ ಪಾರ್ಕ್‌ ದಾವಣಗೆರೆ ಜಿಲ್ಲೆಗೇ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇವರೆಲ್ಲರ ಆಗ್ರಹದಂತೆ ಇಲ್ಲಿಗೆ ಟೆಕ್ಸ್‌ಟೈಲ್‌ ಪಾರ್ಕ್‌ ಬಂದರೆ ಸ್ಥಳೀಯ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಜವಳಿ ಉದ್ಯಮ ಮತ್ತೆ ಬೆಳೆದರೆ ರಫ್ತುಕೇಂದ್ರವಾಗಿ ಹೆಸರು ಗಳಿಸುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಅವರು.

ತೋಳಹುಣಸೆಯ ಈ ಜಾಗವನ್ನು ಹರಾಜು ಮೂಲಕ ಮಾರಾಟ ಮಾಡಲು ಹಿಂದೆ ಒಮ್ಮೆ ಪ್ರಯತ್ನ ನಡೆದಿತ್ತು. ಸಂಸದರು ಸಹಿತ ಹಲವರು ಅದನ್ನು ವಿರೋಧಿಸಿದ್ದರಿಂದ ಈ ಜಮೀನು ಉಳಿದಿದೆ. ಇದೀಗ ಮೆಗಾ ಜವಳಿ ಪಾರ್ಕ್‌ ಬಗ್ಗೆ ಸರ್ಕಾರವೇ ಪ್ರಸ್ತಾಪಿಸಿರುವುದರಿಂದ ಈ ಜಮೀನಿನ ಕಡೆಗೆ ನೋಡುವಂತಾಗಿದೆ.

‘ಜವಳಿ ಪಾರ್ಕ್‌ ಆಗಬಹುದು ಮೆಗಾ ಪಾರ್ಕ್‌ ಕಷ್ಟ’

‘ತೋಳಹುಣಸೆಯಲ್ಲಿ 138 ಎಕರೆ ಜಮೀನು ಇರುವುದರಿಂದ ಅಲ್ಲಿಗೆ ಮೆಗಾ ಜವಳಿ ಪಾರ್ಕ್‌ ಮಂಜೂರು ಮಾಡಬೇಕು ಎಂದು ನಾನು ಜವಳಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಮನವಿ ಸಲ್ಲಿಸಿದೆ. ಅದಕ್ಕೆ ಅವರು ಮೆಗಾ ಜವಳಿ ಪಾರ್ಕ್‌ ಮಾಡಬೇಕಿದ್ದರೆ ಕನಿಷ್ಠ 1,200 ಎಕರೆ ಭೂಮಿ ಬೇಕಾಗುತ್ತದೆ ಎಂದು ತಿಳಿಸಿದರು. ಈ ಬಗ್ಗೆ 1,200 ಎಕರೆ ಭೂಮಿ ಗುರುತಿಸಿ ಸ್ವಾಧೀನ ಪಡಿಸಿ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ತೋಳಹುಣಸೆಯಲ್ಲಿ ಸಣ್ಣ ಜವಳಿ ಪಾರ್ಕ್‌ ಮಾಡುವ ಬಗ್ಗೆ ಚಿಂತನೆ ಇದೆ. ಅದು ರಾಜ್ಯ ಸರ್ಕಾರದ ಭೂಮಿ. ಹಾಗಾಗಿ ರಾಜ್ಯದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಜತೆಗೂ ಮಾತನಾಡಿದ್ದೇನೆ’ ಎಂದು ವಿವರಿಸಿದರು.

ದೊಡ್ಡ ‍ಪ್ರಮಾಣದಲ್ಲಿ ಸರ್ಕಾರಿ ಭೂಮಿ ಇಲ್ಲ. ಇದ್ದಿದ್ದರೆ ಏರ್‌ಪೋರ್ಟ್ ಸಹಿತ ಹಲವು ಯೋಜನೆಗಳನ್ನು ತರಲು ಸಾಧ್ಯವಾಗುತ್ತಿತ್ತು. ಜಿಲ್ಲಾಡಳಿತ ಜಮೀನು ಒದಗಿಸಲು ಶಕ್ತವಾದರೆ ಖಂಡಿತ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ದಾವಣಗೆರೆಯಲ್ಲಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು