ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವರಿಂದ ಅಧಿಕಾರಿಗಳ ದುರ್ಬಳಕೆ: ಆರೋಪ

Published 1 ಮೇ 2024, 6:21 IST
Last Updated 1 ಮೇ 2024, 6:21 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಬಿಜೆಪಿಯ ರಾಜ್ಯ ಕಾನೂನು ಪ್ರಕೋಷ್ಠದ ಅಧ್ಯಕ್ಷ ವಸಂತ್‌ಕುಮಾರ್ ಆರೋಪಿಸಿದರು.

‘ಲೋಕಸಭಾ ಚುನಾವಣೆ ನೀತಿ ಸಂಹಿತೆ ಇದ್ದಾಗ್ಯೂ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಇತ್ತೀಚೆಗೆ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಏ.21ರಂದು ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮುಖ್ಯಮಂತ್ರಿ ಹಾಗೂ ಕೆಲ ಸಚಿವರ ಭಾವಚಿತ್ರಗಳುಳ್ಳ ಆರೋಗ್ಯ ಕಾರ್ಡನ್ನು ಫಲಾನುಭವಿಗಳಿಗೆ ನೀಡಿದ್ದು ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ಬಗ್ಗೆ ನಮ್ಮ ಪ್ರಕೋಷ್ಠದಿಂದ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಚುನಾವಣೆ ವೇಳೆ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆಸದಂತೆ ಚುನಾವಣಾ ಆಯೋಗದ ಸೂಚನೆ ಇದೆ. ಆದರೂ ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಕೆಲವು ಬಾರಿ ಸಚಿವರ ಮನೆಗೆ ಹೋಗಿ ಬಂದಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.

‘ಕಾಂಗ್ರೆಸ್‌ನ ಕೆಲ ಮುಖಂಡರು ಹಸ್ತಕ್ಕೆ ಮತ ನೀಡದಿದ್ದಲ್ಲಿ ಗ್ಯಾರಂಟಿ ಯೋಜನೆಗಳನ್ನು ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಜನರು ಇದಕ್ಕೆಲ್ಲ ಬಗ್ಗುವುದಿಲ್ಲ’ ಎಂದು ತಿಳಿಸಿದರು.

‘ವಕೀಲರಿಗೆ ಆರೋಗ್ಯ ವಿಮೆ ಜಾರಿ ಮಾಡಿರುವ ನರೇಂದ್ರ ಮೋದಿ ₹100 ಕೊಟಿ ತೆಗೆದಿರಿಸಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ವಕೀಲರಿಗೆ ಭತ್ಯೆ ಜಾರಿಗೊಳಿಸಿದರು. ರೈತರ ₹ 25 ಸಾವಿರ ಕೋಟಿ ಸಾಲಮನ್ನಾ ಮಾಡಿದರು. ದೇಶದ ಭದ್ರತೆ, ಸಮಗ್ರತೆಗೆ ಒಂದೇ ಸರ್ಕಾರ ಇರಬೇಕು. ಈ ದಿಸೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕಾನೂನು ಘಟಕದಿಂದ ಪ್ರಚಾರ ಕಾರ್ಯ ಮಾಡಲಾಗಿದೆ’ ಎಂದು ಜೆಡಿಎಸ್‌ನ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಬಿ.ರಂಗನಾಥ್ ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಯಾರನ್ನೂ ಪ್ರಧಾನಿ ಮಾಡುವ ಉದ್ದೇಶವಿಲ್ಲ. ಬದಲಾಗಿ ಕನಿಷ್ಟ 55 ಸ್ಥಾನನ್ನಾದರೂ ಗಳಿಸಿ ವಿರೋಧ ಪಕ್ಷದ ಸ್ಥಾನ ಉಳಿಸಿಕೊಳ್ಳಲು ತೀರ್ಮಾನ ಮಾಡಿದಂತಿದೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ, ಲೂಟಿ ಹೆಚ್ಚಿದೆ ಎಂದು ಟೀಕಿಸಿದರು.

ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಎ.ಸಿ.ರಾಘವೇಂದ್ರ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡುವ ರೀತಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಕಾರ್ಡ್‌ಗಳನ್ನು ನೀಡಿದ ಜಿಲ್ಲಾ ಕಾರ್ಮಿಕಾಧಿಕಾರಿ ಇಬ್ರಾಹಿಂ ಸಾಬ್ ಅವರನ್ನು ಸಸ್ಪೆಂಡ್ ಮಾಡಬೇಕು. ಈ ಸಂಬಂಧ ಚುನಾವಣಾಧಿಕಾರಿಗೆ ದೂರು ನೀಡಿದ್ದರೂ ಇದುವರೆಗೆ ಕ್ರಮವಾಗಿಲ್ಲ’ ಎಂದರು.

ಮುಖಂಡರಾದ ಕೊಳೇನಹಳ್ಳಿ ಸತೀಶ್, ಎಚ್.ಎಸ್. ಲಿಂಗರಾಜ್, ಕಾಕನೂರು ಮಂಜಣಣ್ಣ, ಎಸ್. ದಿವಾಕರ್, ಎಚ್.ಎಸ್. ಯೋಗೇಶ್, ಎಚ್.ಬಿ. ವಿಶ್ವನಾಥ್, ರಾಜೇಶ್ ಭೀಮಾನಂದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT