ಜಗಳೂರು: ಬರಗಾಲದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗ
ದಂತೆ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಅವರು ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಅಂತರ್ಜಲದ ಮಟ್ಟ ಕುಸಿತ ಕಾಣುತ್ತಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದು. ಆದ್ದರಿಂದ ಅಧಿಕಾರಿಗಳು ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ಮುಂಜಾಗ್ರತೆಯಾಗಿ ಕೊಳವೆಬಾವಿ ಕೊರೆಸಲು ಕ್ರಮಕೈಗೊಳ್ಳಬೇಕು. ಖಾಸಗಿ ಕೊಳವೆ ಬಾವಿಗಳಿಂದ ಟ್ಯಾಂಕರ್‌ಗಳ ಮೂಲಕ ನೀರಿನ ಪೂರೈಕೆಗೆ ಸನ್ನದ್ಧರಾಗಬೇಕು. ಜಲಜೀವನ್ ಮಿಷನ್ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಹಿಂಗಾರು ಹಂಗಾಮಿನಲ್ಲಿ 4,000 ಕ್ವಿಂಟಲ್ ಕಡಲೆ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, ಈಗಾಗಲೇ 750 ಕ್ವಿಂಟಲ್ ದಾಸ್ತಾನು ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ಬೇಡಿಕೆಗೆ ತಕ್ಕಷ್ಟು ಬಿತ್ತನೆ ಬೀಜ ಲಭ್ಯವಾಗಲಿದೆ. 2,900 ಕ್ವಿಂಟಲ್ ರಸಗೊಬ್ಬರ ದಾಸ್ತಾನಿದ್ದು, ಇದು ಹಿಂಗಾರಿನ ಬೇಡಿಕೆಗಿಂತ ಅಧಿಕ ಎಂದು ಕೃಷಿ ಇಲಾಖೆಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಮಾಹಿತಿ ನೀಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ಅನುಮೋದನೆಗೊಂಡ ಒಟ್ಟು 167 ಕಾಮಗಾರಿಗಳಲ್ಲಿ 29 ಕಾಮಗಾರಿಗಳು ಪೂರ್ಣಗೊಂಡಿದ್ದು, 62 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ, 20 ಕಾಮಗಾರಿಗಳ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾದಿಕ್ ಉಲ್ಲಾ ಮಾಹಿತಿ ನೀಡಿದರು.
ಇಓ ಕರಿಬಸಪ್ಪ, ತಹಶೀಲ್ದಾರ್ ಮಂಜಾನಂದ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಉಪಸ್ಥಿತರಿದ್ದರು.
ಹಾಸ್ಟೆಲ್‌ಗೆ ₹1.90 ಲಕ್ಷ ಬಾಡಿಗೆ
ಪಟ್ಟಣದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತ ಇಲಾಖೆಯ ಹಾಸ್ಟೆಲ್‌ಗೆ ಪ್ರತಿ ತಿಂಗಳು ₹1.90 ಲಕ್ಷ ಬಾಡಿಗೆ ನೀಡಲಾಗುತ್ತಿದೆ. ವಾಸ್ತು ಕಾರಣಕ್ಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ತೆರಳದಂತೆ ಮಾಲೀಕರು ಎರಡು ಕೊಠಡಿಗೆ ಬೀಗ ಹಾಕಿದ್ದಾರೆ ಎಂಬ ದೂರು ಇದೆ. ಕೂಡಲೇ ಕಟ್ಟಡವನ್ನು ಬದಲಿಸಬೇಕು. ಹಾಸ್ಟೆಲ್‌ನಲ್ಲಿ ಹೆಣ್ಣುಮಕ್ಕಳಿಗೆ ಏನಾದರೂ ತೊಂದರೆಯಾದಲ್ಲಿ ಪ್ರಾಂಶುಪಾಲರು ಹೊಣೆ ಹೊರಬೇಕಾಗುತ್ತದೆ ಎಂದು ಶಾಸಕ ದೇವೇಂದ್ರಪ್ಪ ಎಚ್ಚರಿಕೆ ನೀಡಿದರು.
ಸಮಾಜಕಲ್ಯಾಣ ಇಲಾಖೆ, ಬಿಸಿಎಂ, ಪರಿಶಿಷ್ಟ ಕಲ್ಯಾಣ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಲಕ್ಷಾಂತರ ರೂಪಾಯಿ ಪೋಲಾಗುತ್ತಿದೆ. ನೂತನ ಪಟ್ಟಣ ಪಂಚಾಯಿತಿ ಕಟ್ಟಡಕ್ಕೆ ಕೂಡಲೇ ಸ್ಥಳಾಂತರಿಸಬೇಕು. ವಿಳಂಬ ಮಾಡಿದಲ್ಲಿ ಅಧಿಕಾರಿಗಳ ವೇತನ ತಡೆಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.