ಬುಧವಾರ, ಮೇ 25, 2022
29 °C
ಕೃಷಿ ಇಲಾಖೆಯಿಂದ ರಾಗಿ ಬೆಳೆ ಕ್ಷೇತ್ರೋತ್ಸವ

ಅರಸಾಪುರ: ‘ಬೆಳೆ ಪರಿವರ್ತನೆಗೆ ಒತ್ತು ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ವಿಜ್ಞಾನಿಗಳ ಸಲಹೆಯಂತೆ ಕೊನೆಭಾಗದ ರೈತರು ಒಂದೇ ಬೆಳೆಗೆ ಅಂಟಿಕೊಳ್ಳದೇ ಬೆಳೆ ಪರಿವರ್ತನೆ ಮಾಡುವುದು ಉತ್ತಮ. ಕೃಷಿ ಇಲಾಖೆಯೂ ಭತ್ತದ ಬೆಳೆ ಹೊರತುಪಡಿಸಿ ಬೇರೆ ಬೇರೆ ಬೆಳೆಗಳನ್ನೂ ಬೆಳೆಯುವ ಬಗ್ಗೆ ರೈತರಿಗೆ ತರಬೇತಿ ನೀಡಬೇಕು’ ಎಂದು ಶಾಸಕ ಎಸ್‌.ಎ.ರವೀಂದ್ರನಾಥ್‌ ಸಲಹೆ ನೀಡಿದರು. 

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೃಷಿ ಇಲಾಖೆಯಿಂದ ಅರಸಾಪುರ ಗ್ರಾಮದಲ್ಲಿ ಪ್ರಗತಿಪರ ರೈತ ಮಂಜನಾಯ್ಕ ಅವರ ಜಮೀನಿನಲ್ಲಿ ಹಮ್ಮಿಕೊಂಡಿದ್ದ ರಾಗಿ ಬೆಳೆಯ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದ ಬೇರೆ ಭಾಗದ ರೈತರು ಇಲ್ಲಿಗೆ ಬಂದು ನೋಡುವಂತೆ ರಾಗಿ, ಜೋಳ ಹಾಗೂ ಇನ್ನಿತರೆ ಸಿರಿಧಾನ್ಯ ಬೆಳೆಗಳನ್ನು ಬೆಳೆಯಬೇಕು’ ಎಂದು ಸಲಹೆ ನೀಡಿದರು.

ರಾಗಿ ಬೆಳೆಗಾರರ ಅಪೇಕ್ಷೆಯಂತೆ ಬೆಂಬಲ ಬೆಲೆಯಡಿ ಪ್ರತಿ ರೈತರಿಗೆ 20 ಕ್ವಿಂಟಲ್ ಬದಲಿಗೆ 50 ಕ್ವಿಂಟಲ್‌ವರೆಗೆ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್‌, ‘ಈ ಭಾಗದ ರೈತರು ಭತ್ತದ ಬೆಳೆಯ ಬದಲಾಗಿ ಸುಮಾರು 250 ಎಕರೆಯಷ್ಟು ಕ್ಷೇತ್ರವನ್ನು ರಾಗಿ ಬೆಳೆಯಾಗಿ ಪರಿವರ್ತನೆ ಮಾಡಿರುವುದು ಶ್ಲಾಘನೀಯ’ ಎಂದರು. ರಾಗಿ ಬೆಳೆಗೆ ಸಂಬಂಧಿಸಿದಂತೆ ನೀರು ನಿರ್ವಹಣೆ, ಸಮಗ್ರ ಪೋಷಕಾಂಶ, ರೋಗ–ಕೀಟ ನಿರ್ವಹಣೆ ಮತ್ತು ಖರ್ಚು ಕಡಿಮೆ ಮಾಡುವ ಬಗ್ಗೆ ತಾಂತ್ರಿಕ ಮಾಹಿತಿಯನ್ನು ನೀಡಿದರು.

ಕೃಷಿ ಇಲಾಖೆ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ, ‘ಶಾಸಕ ಆಶಯದಂತೆ ಸರ್ಕಾರದ ಯೋಜನೆಗಳನ್ನು ಮತ್ತು ಸವಲತ್ತುಗಳನ್ನು ಕೋವಿಡ್‌ ನಡುವೆಯೂ ರೈತರ ಮನೆ ಬಾಗಿಲಿಗೆ ತಂದು ವಿತರಣೆ ಮಾಡಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರಾಗಿ ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಅಗತ್ಯ ಪರಿಕರಗಳನ್ನು ವಿತರಿಸಲಾಗುವುದು’ ಎಂದರು. 

ಫಲಾನುಭವಿಗಳಿಗೆ ತುಂತುರು ನೀರಾವರಿ ಘಟಕಗಳ ಉಪಕರಣಗಳನ್ನು ಮತ್ತು ಸಾವಯವ ಗೊಬ್ಬರ, ದ್ರವರೂಪದ ಗೊಬ್ಬರ, ಕೀಟನಾಶಕ ಮತ್ತು ರೋಗನಾಶಕಗಳನ್ನು ಶಾಸಕರು ಇದೇ ಸಂದರ್ಭದಲ್ಲಿ ವಿತರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾಬಾಯಿ ಸೇವ್ಯಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಶಾಂತಿಬಾಯಿ ಹನುಮಂತನಾಯ್ಕ, ಸತ್ಯಬಾಬು, ರೂಪಾ ಧನ್ಯಕುಮಾರ್, ಮಂಜಿಬಾಯಿ ಪಾಪಾನಾಯ್ಕ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಜಿ.ಎಚ್. ರವಿಕುಮಾರ್, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ಧನಗೌಡ ಎಚ್.ಕೆ., ಕೃಷಿ ಅಧಿಕಾರಿಗಳಾದ ದಿವ್ಯಾ ಜಿ.ಎಂ., ಲಾವಣ್ಯ ಟಿ.ಎನ್., ಸಹಾಯಕ ಕೃಷಿ ಅಧಿಕಾರಿ ವಸಂತ್ ಕುಮಾರ್ ಕೆ., ಆತ್ಮ ಸಿಬ್ಬಂದಿ ವೆಂಕಟೇಶ್ ಬಿ.ಎಸ್. ಹಾಗೂ ರೈತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು