ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಬೆಳೆಗೆ ಭದ್ರಾ ನೀರು ಬಿಡಿ: ಶಾಸಕ ರವೀಂದ್ರನಾಥ ಮನವಿ

ಜಲಸಂಪನ್ಮೂಲ ಇಲಾಖೆಗೆ ಮನವಿ
Last Updated 7 ಆಗಸ್ಟ್ 2019, 13:36 IST
ಅಕ್ಷರ ಗಾತ್ರ

ದಾವಣಗೆರೆ: ಅಚ್ಚುಕಟ್ಟೆ ಪ್ರದೇಶದಲ್ಲಿ ಮಳೆಗಾಲದ ಬೆಳೆ ಬೆಳೆಯಲು ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ ಅವರು ಜಲಸಂಪನ್ಮೂಲ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಬುಧವಾರ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ ರವೀಂದ್ರನಾಥ ಅವರು, ಮಳೆಗಾಲದ ಬೆಳೆ ಬೆಳೆಯಲು ಕಾಲುವೆಗೆ ನೀರು ಹರಿಸಬೇಕಾಗಿರುವ ಅಗತ್ಯದ ಕುರಿತು ಮನವರಿಕೆ ಮಾಡಿಕೊಟ್ಟರು.

‘ಭದ್ರಾ ಜಲಾಶಯದ ನೀರಿನ ಮಟ್ಟವು 156 ಅಡಿಗಳಿಗೆ ತಲುಪಿದೆ. ಜಲಾನಯನ ಪ್ರದೇಶಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, 45 ಸಾವಿರಕ್ಕೂ ಹೆಚ್ಚು ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ದಾವಣಗೆರೆ, ಹರಿಹರ, ಹರಪನಹಳ್ಳಿ, ಹೊನ್ನಾಳಿ, ಚನ್ನಗಿರಿ ಹಾಗೂ ಭದ್ರಾವತಿ ಭಾಗದ ರೈತರು ಕಾಲುವೆ ನೀರಿಗಾಗಿ ಕಾಯುತ್ತಿದ್ದಾರೆ. ಮಳೆ ನೀರು ಹಾಗೂ ಕೊಳವೆಬಾವಿಯ ನೀರಿನಿಂದ ಭತ್ತ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ಕೂಡಲೇ ಎಡ ಹಾಗೂ ಬಲ ಕಾಲುವೆಗಳಿಗೆ ನೀರು ಹರಿಸಲು ಆದೇಶಿಸಬೇಕು’ ಎಂದು ಮನವಿ ಮಾಡಿದರು.

‘ಹರಪನಹಳ್ಳಿ, ಹರಿಹರ, ದಾವಣಗೆರೆಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಕಳೆದ ವರ್ಷ ಬೇಸಿಗೆ ಬೆಳೆಯನ್ನು ಬೆಳೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಮಳೆಗಾಲದಲ್ಲಾದರೂ ಬೆಳೆ ಬೆಳೆಯಲು ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು. ಈಗ ನೀರು ಕೊಟ್ಟರೆ ನಾಟಿ ಮಾಡಲು ಅವಕಾಶವಿದೆ. ಭತ್ತ ನಾಟಿ ವಿಳಂಬವಾಗಿದ್ದರಿಂದ ಇಳುವರಿ ಕಡಿಮೆ ಬಂದರೂ ಕೊನೆ ಪಕ್ಷ ಊಟಕ್ಕೆ ಬೇಕಾಗುವಷ್ಟು ಭತ್ತವನ್ನು ಬೆಳೆದುಕೊಳ್ಳಬಹುದಾಗಿದೆ. ಜಾನುವಾರಿಗೆ ಅಗತ್ಯ ಮೇವನ್ನಾದರೂ ಬೆಳೆದುಕೊಳ್ಳಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಕಾಲುವೆಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೂ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು. ನೀರು ಬಿಡುಗಡೆ ಮಾಡುವಂತೆ ಅವರು ಆದೇಶಿಸುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ರವೀಂದ್ರನಾಥ ತಿಳಿಸಿದರು.

ಈ ವೇಳೆ ಹರಿಹರದ ಮಾಜಿ ಶಾಸಕ ಬಿ.ಪಿ. ಹರೀಶ್‌, ರೈತ ಮುಖಂಡ ಶಾಮನೂರು ಲಿಂಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT