ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ತುರುಸು ಕಾಣದ ಮಧ್ಯ ಕರ್ನಾಟಕದ ಕಣ

ಸಿದ್ದೇಶ್ವರ ಎದುರು ಮಲ್ಲಿಕಾರ್ಜುನ ಆಪ್ತ ಮಂಜಪ್ಪ
Last Updated 30 ಏಪ್ರಿಲ್ 2019, 15:32 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಪ್ರಭಾವಳಿಯಡಿ ಜಿ.ಎಂ. ಸಿದ್ದೇಶ್ವರ. ಮಾಜಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಅವರ ‘ನೆರಳಿನ ಅಭ್ಯರ್ಥಿ’ ಎಂದೇ ಕರೆಸಿಕೊಳ್ಳುವ ಎಚ್‌.ಬಿ. ಮಂಜಪ್ಪ. ಬಿಜೆಪಿ ಹಾಗೂ ಕಾಂಗ್ರೆಸ್–ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಎಂದರೂ, ಅದರಲ್ಲಿ ಹಿಂದಿನ ತುರುಸಿಲ್ಲ.

ಮಂಜಪ್ಪ ಅವರಿಗೆ ಕಾಂಗ್ರೆಸ್‌ ಟಿಕೆಟ್ ಕೊಟ್ಟಿದ್ದು ಕೊನೆಯ ಕ್ಷಣದಲ್ಲಿ; ಅದೂ ಶಾಮನೂರು ಶಿವಶಂಕರಪ್ಪ ತಮಗೆ ನೀಡಲಾಗಿದ್ದ ಟಿಕೆಟ್‌ ಅನ್ನು ನಿರಾಕರಿಸಿದ ಮೇಲೆ. ಅಷ್ಟು ಹೊತ್ತಿಗಾಗಲೇ ಸಿದ್ದೇಶ್ವರ ಪ್ರಚಾರಕ್ಕಿಳಿದು ವಾರಗಳೇ ಉರುಳಿದ್ದವು. ಈಗ ಮಂಜಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರಚಾರದಲ್ಲಿ ನಿರತರಾಗಿದ್ದರೂ, ಸಿದ್ದೇಶ್ವರ ನೂರಾರು ಹಳ್ಳಿಗಳ ಮತದಾರರಿಗೆ ಕೈಮುಗಿದು ಬಂದಿದ್ದಾರೆ.

ನಾಯಕತ್ವದ ತಮ್ಮ ಕೊನೆಯ ದಿನಗಳಲ್ಲಿ ಕ್ರಿಕೆಟಿಗ ಸೌರವ್ ಗಂಗೂಲಿ ಫಾರ್ಮ್ ಕುರಿತು ಪ್ರಶ್ನಿಸುತ್ತಿದ್ದವರಿಗೆ ಸಮಜಾಯಿಷಿ ಕೊಡಲು ಸದಾ ಜೇಬಿನಲ್ಲಿ ಒಂದು ಚೀಟಿ ಇಟ್ಟುಕೊಂಡು, ತಮ್ಮ ರನ್ ಗಳಿಕೆಯ ಸರಾಸರಿ ಎಷ್ಟು ಎಂದು ಹೇಳುತ್ತಿದ್ದರು. ಸಿದ್ದೇಶ್ವರ ಅವರೂ ಹಾಗೆಯೇ. ಅವರು ಚೀಟಿಯನ್ನೇನೂ ಇಟ್ಟುಕೊಂಡಿಲ್ಲ. ಪ್ರಧಾನಿ ಜಾರಿಗೊಳಿಸಿರುವ ಉಜ್ವಲಾ, ಆಯುಷ್ಮಾನ್, ಸ್ವಚ್ಛ ಭಾರತ ಯೋಜನೆಗಳ ಜಿಲ್ಲಾ ಫಲಾನುಭವಿಗಳ ಸಂಖ್ಯೆಗಳನ್ನು ಲಕ್ಷಗಳಲ್ಲಿ ಪಟಪಟನೆ ಹೇಳುತ್ತಾರೆ. ಆದರೆ, ಮೈತ್ರಿ ಅಭ್ಯರ್ಥಿಯ ಪರವಾಗಿ ಮಾತನಾಡುವ ಕಾರ್ಯಕರ್ತರು, ‘ಇದು ಸುಳ್ಳು; ರಿಪೋರ್ಟ್ ಕಾರ್ಡ್ ಅಲ್ಲ’ ಎಂದು ಟೀಕಿಸುತ್ತಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಸಂಕಲ್ಪ ರ‍್ಯಾಲಿಯಲ್ಲಿ ನರೇಂದ್ರ ಮೋದಿ ಕೂಡ ಸಿದ್ದೇಶ್ವರ ಹೇಳುವ ಅಂಕಿ–ಅಂಶಗಳನ್ನೇ ಉಚ್ಚರಿಸಿದ್ದರು. ಕ್ಷೇತ್ರವನ್ನು ಸೌರಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ಅರುಹಿದ್ದರು. ಬಿಜೆಪಿ ಕಾರ್ಯಕರ್ತರೂ ಮೋದಿ ‘ಆಲದಮರ’ದ ನೆರಳಿನಲ್ಲೇ ಇವೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡೇ ಮೈತ್ರಿ ಅಭ್ಯರ್ಥಿಯನ್ನು ನಿರಾಕರಿಸುವಂತೆ ಮತದಾರರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ದಾವಣಗೆರೆಯಲ್ಲಿ ಮೈತ್ರಿ ಧರ್ಮ ಕೂಡ ಮೊದ ಮೊದಲು ಕುಂಟಿತ್ತು. ಜೆಡಿಎಸ್‌ನ ಎಚ್.ಎಸ್. ಶಿವಶಂಕರ್ ಪದೇ ಪದೇ ಕೆಮ್ಮುತ್ತಿದ್ದರು. ತಕರಾರುಗಳಿದ್ದರೂ, ಮೈತ್ರಿ ಧರ್ಮ ಪಾಲನೆ ಮಾಡುವುದಾಗಿ ಅವರು ಕಳೆದ ಶುಕ್ರವಾರವಷ್ಟೇ ಮಂಜಪ್ಪನವರ ಕೈ ಕುಲುಕಿದ್ದಾರೆ. ಚನ್ನಗಿರಿಯಲ್ಲಿ ಜೆಡಿಎಸ್ ಮುಖಂಡ ಹೊದಿಗೆರೆ ರಮೇಶ್ ಪ್ರಚಾರಕ್ಕೆ ಸಾಥ್ ನೀಡಿರುವುದು ಮಂಜಪ್ಪನವರಿಗೆ ಸಮಾಧಾನ ತಂದಿದೆ.

ಕಕ್ಕರಗೊಳ್ಳ, ಕೊಂಡಜ್ಜಿ, ಆವರಗೊಳ್ಳ, ಬುಳ್ಳಾಪುರದಂಥ ಊರುಗಳ ರೈತರದ್ದು ಬಿಸಿಯುಸಿರು. ಕೊನೆಭಾಗಕ್ಕೆ ಭದ್ರಾ ನೀರು ತಲುಪಿಲ್ಲವೆಂಬ ಅಳಲು. ವೃತ್ತಿಪರ ಶಿಕ್ಷಣಕ್ಕೆ ಹೆಸರಾಗಿ, ‘ಶಿಕ್ಷಣ ಕಾಶಿ’ ಎಂಬ ಗುಣವಿಶೇಷಣವಿದ್ದರೂ ದಾವಣಗೆರೆಯಲ್ಲಿ ಉದ್ಯೋಗಾ
ವಕಾಶಗಳು ಸೃಷ್ಟಿಯಾಗಿಲ್ಲ ಎಂಬ ದೂರೂ ಇದೆ. ತೋಳಹುಣಸೆಯಲ್ಲಿರುವ 100 ಎಕರೆ ಜಾಗ ಹಾಳುಬಿದ್ದಿದೆ. ಅಲ್ಲಿದ್ದ ಜವಳಿ ಉದ್ಯಮ ಮುಚ್ಚಿ ಹೋದದ್ದನ್ನು ನೆನಪಿಸಿಕೊಂಡು ಮುಖದ ಮೇಲೆ ಸಿಕ್ಕುಗಳನ್ನು ಮೂಡಿಸಿಕೊಳ್ಳುವವರಿದ್ದಾರೆ. ಈಗಲೂ ಜವಳಿ ಸಚಿವಾಲಯಕ್ಕೆ ಸೇರಿರುವ ಆ ಜಾಗ ಬಳಸಿಕೊಂಡು ಉದ್ಯೋಗಾವಕಾಶ ಸೃಷ್ಟಿ ಸಾಧ್ಯತೆಯ ಕಡೆಗೆ ಯಾರೂ ಮುಖ ಮಾಡುತ್ತಿಲ್ಲವೆಂಬ ಆರೋಪವಿದೆ. ನೂರಕ್ಕೂ ಹೆಚ್ಚು ಎಕರೆಗಳಲ್ಲಿ ಒಣಗಿರುವ ಭತ್ತದ ಪೈರುಗಳನ್ನು ಮತ ಕೇಳಲು ಹೋದವರಿಗೆ ರೈತರು ತೋರಿಸುತ್ತಿದ್ದಾರೆ.

ಎರಡು ದಶಕಗಳ ಕಾಲ ಶಾಮನೂರು ಕುಟುಂಬದವರೇ ಕಾಂಗ್ರೆಸ್‌ನ ಹುರಿಯಾಳು ಆಗುತ್ತಿದ್ದರು. ಸಿದ್ದೇಶ್ವರ ವಿರುದ್ಧ ಕಳೆದ ಮೂರು ಚುನಾವಣೆಗಳಲ್ಲೂ ಮಲ್ಲಿಕಾರ್ಜುನ ಸೋತಿದ್ದರು. ಈ ಬಾರಿ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಿಗೆ–ಅದೂ ಕುರುಬ ಸಮುದಾಯದವರಿಗೆ–ಟಿಕೆಟ್ ಕೊಡಲಾಗಿದ್ದು, ಮಲ್ಲಿಕಾರ್ಜುನ ಅವರನ್ನೇ ಚುನಾವಣಾ ಉಸ್ತುವಾರಿಯನ್ನಾಗಿ ಮಾಡಲಾಗಿದೆ.

ಮಂಜಪ್ಪ ತಾವು ತಳಮಟ್ಟದಿಂದ ಬಂದ ಜನಸೇವಕ ಎಂದು ಕರೆದುಕೊಂಡರೆ, ಸಿದ್ದೇಶ್ವರ ಹಳ್ಳಿ ಹಳ್ಳಿಗಳಲ್ಲೂ ಹೆಸರಿನ ಸಮೇತ ಮತದಾರರನ್ನು ಗುರುತಿಸುವಷ್ಟು ನೆನಪಿನ ಶಕ್ತಿ ತಮಗಿದೆ ಎನ್ನುತ್ತಿದ್ದಾರೆ. ಆರು ವಿಧಾನಸಭಾ ಕ್ಷೇತ್ರಗಳ ಶಾಸಕರ ಭರಪೂರ ಬೆಂಬಲವೂ ಅವರಿಗಿದೆ.

ದಾವಣಗೆರೆ ನಗರದ ಕಾಂಕ್ರೀಟ್ ಹಾಸಿಕೊಂಡ ಅಗಲವಾದ ರಸ್ತೆಗಳ ಮೇಲೆ ಸಿದ್ದೇಶ್ವರ ‘ಸ್ಮಾರ್ಟ್ ಸಿಟಿ’ ಕಾಮಗಾರಿಗಳ ಮಳೆ ಸುರಿಸುವುದಾಗಿ ಹೇಳಿದರೆ, ಭವ್ಯ ಗಾಜಿನಮನೆಯ ನಿರ್ಮಾಣವನ್ನು ಕಾಂಗ್ರೆಸ್‌ ತನ್ನ ಸಾಧನೆಯ ಖಾತೆಗೆ ಹಾಕಿಕೊಂಡಿದೆ. ಮತದಾರರ ಪೈಕಿ ಲಿಂಗಾಯತರದ್ದು ಪ್ರಾಬಲ್ಯ (ಹೀಗಾಗಿಯೇ ಇದುವರೆಗಿನ ಪೈಪೋಟಿ ಇದ್ದುದು ಆ ಸಮುದಾಯಗಳ ಅಭ್ಯರ್ಥಿಗಳ ನಡುವೆಯೇ. ಈ ಸಲ ಮಂಜಪ್ಪ ಇನ್ನೊಂದು ಸಮುದಾಯದ ಪ್ರತಿನಿಧಿಯಾಗಿ ಇಳಿದಿದ್ದಾರೆ). ಮುಸ್ಲಿಂ, ಪರಿಶಿಷ್ಟ ಜಾತಿ, ಕುರುಬರದ್ದು ನಂತರದ ಲೆಕ್ಕ. ಕುರುಬ ಸಮುದಾಯದ ಮತಗಳನ್ನು ಸೆಳೆಯುವ ವಿಶ್ವಾಸದಲ್ಲಿ ಮಂಜಪ್ಪ ಬೆಂಬಲಿಗರು ಇದ್ದರೆ, ಮೋದಿಗೆ ಹೊಸ ಮತದಾರರ ಜಾತಿ ಮೀರಿದ ಬೆಂಬಲವಿದೆ ಎಂದು ಬಿಜೆಪಿಯವರು ಎದೆ ಉಬ್ಬಿಸುತ್ತಾರೆ. ಲಿಂಗಾಯತರ ಮತಗಳು ನಿರ್ಣಾಯಕವಾಗುವ ಇಲ್ಲಿ ಸಿದ್ದೇಶ್ವರ ಸತತ ನಾಲ್ಕನೇ ಸಲ ಗೆಲ್ಲುವರೋ, ಮಂಜಪ್ಪ ಗೆಲ್ಲುವ ಮೂಲಕ ಕಾಂಗ್ರೆಸ್‌ನ ಹೊಸ ರಾಜಕೀಯಕ್ಕೆ ನಾಂದಿ ಹಾಡುವರೋ ಎಂಬ ಕುತೂಹಲವಿದೆ.

* ಮೂರು ಅವಧಿಗೆ ಕೆಲಸ ಮಾಡಿದ್ದೇನೆ. ಹಳ್ಳಿಗರಿಗೂ ನಾನು ಯಾರು ಎಂದು ಗೊತ್ತಿದೆ. ಜತೆಗೆ ಮೋದಿ ಅಲೆ ಇದೆ.

- ಜಿ.ಎಂ. ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ

* ನಾನು ತಳಮಟ್ಟದಿಂದ ಬೆಳೆದು ಬಂದವನು. ನನ್ನನ್ನು ಕೆಲಸಗಳಿಂದ ಜನ ಗುರುತಿಸುತ್ತಾರೆ. ಮೋದಿ ಅಲೆ ಎನ್ನುವುದೆಲ್ಲ ಹುಸಿ.

- ಎಚ್‌.ಬಿ. ಮಂಜಪ್ಪ, ಕಾಂಗ್ರೆಸ್‌ ಅಭ್ಯರ್ಥಿ

* ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಡುವವರನ್ನು ಆರಿಸಬೇಕು. ಸಂಸತ್‌ನಲ್ಲಿ ಜಿಲ್ಲೆಯ ಜನರ ಪ್ರತಿನಿಧಿಯಾಗುವ ಅರ್ಹತೆ ಇರಬೇಕು.

- ಅಖಿಲೇಶ್‌ ಎಂ. ಹಿರೇಮಠ, ವಿದ್ಯಾರ್ಥಿ

*ಬುದ್ಧಿವಂತ, ಪ್ರಾಮಾಣಿಕ ವ್ಯಕ್ತಿ ಗೆಲ್ಲಬೇಕು. ಸ್ಥಳೀಯ ಮಟ್ಟದಿಂದ ರಾಷ್ಟ್ರಮಟ್ಟದ ವರೆಗೆ ಛಾಪು ಮೂಡಿಸುವಂಥವರಾಗಿರಬೇಕು.

-ಅನುಷಾ ಸಿ. ಗೋಪಿ, ವಿದ್ಯಾರ್ಥಿನಿ‌

ಲೋಕಸಭೆ ಚುನಾವಣೆ, ದಾವಣಗೆರೆಕಣದ ಬಗ್ಗೆ ಇನ್ನಷ್ಟು...

ಪ್ರಜಾವಾಣಿ ವಿಶೇಷಸಂದರ್ಶನಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT