ಶುಕ್ರವಾರ, ಸೆಪ್ಟೆಂಬರ್ 24, 2021
23 °C

ದಾವಣಗೆರೆ: ಕೊರೊನಾ ಕಾಲದಲ್ಲಿ ‘ಕರ’ ಭಾರ

ಡಿ.ಕೆ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್ ಎರಡು ಅಲೆಗಳಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿ ನಿತ್ಯ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ವ್ಯಾಪಾರ ವಹಿವಾಟುಗಳಿಲ್ಲದೇ ಆದಾಯಕ್ಕೂ ಕುತ್ತು ಬಿದ್ದಿದೆ. ಇದರ ನಡುವೆಯೇ ದಾವಣಗೆರೆ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಿಸಿರುವುದರಿಂದ ನಾಗರಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ನಿಯಮಾನುಸಾರ ಸ್ವಯಂಘೋಷಿತ ಆಸ್ತಿ ತೆರಿಗೆ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಶೇ 15ರಿಂದ ಶೇ 30ರ ಮಿತಿಯೊಳಗೆ ಹೆಚ್ಚಿಸಲು ಅವಕಾಶವಿದೆ. ಕಳೆದ ವರ್ಷವೇ ತೆರಿಗೆಯನ್ನು ಹೆಚ್ಚಿಸಲಾಗಿದೆ. ಇನ್ನೂ ಎರಡು ವರ್ಷ ತೆರಿಗೆ ಹೆಚ್ಚಿಸುವ ಹಾಗಿಲ್ಲ. ಆದರೆ, ಪ್ರಸ್ತುತ ಮನೆಗಳಿಗೆ ಶೇ 15 ಹಾಗೂ ವಾಣಿಜ್ಯ ಮಳಿಗೆಗಳ ತೆರಿಗೆಯನ್ನು ಶೇ 24ರಷ್ಟು ಹೆಚ್ಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿವೆ. ನಿವೇಶನಗಳ ತೆರಿಗೆಯನ್ನು ಶೇ 0.2ರಿಂದ 0.5ರಷ್ಟು ಹೆಚ್ಚಿಸಲಾಗಿದೆ.

ನಗರಪಾಲಿಕೆಯ ಬಳಿ ತೆರಿಗೆ ಪಾವತಿಸಲು ಹೋದ ಮಂದಿಗೆ ಚಲನ್ ನೋಡಿದಾಗ ದಿಗಿಲು ಹುಟ್ಟಿಸುತ್ತಿದೆ. ತೆರಿಗೆ ಲೆಕ್ಕ ಹಾಕುವುದಕ್ಕಾಗಿಯೇ ಅಲ್ಲಿನ ಪುಟ್ಟಣ್ಣ ಕಣಗಾಲ್ ರಂಗಮಂಟಪದ ಬಳಿ ಜನ ಬರುವುದನ್ನೇ ಕಾಯುತ್ತಾ ಕುಳಿತಿರುತ್ತಾರೆ. ಕಳೆದ ವರ್ಷ ಕಂದಾಯ ಕಟ್ಟಿದ ಚೀಟಿ ತೋರಿಸಿದರೆ ಸಾಕು, ಈ ವರ್ಷ ಎಷ್ಟಾಗಿದೆ ಎಂಬುದನ್ನು ಲೆಕ್ಕ ಹಾಕಿ ಹೇಳುತ್ತಾರೆ. ಎಷ್ಟೋ ಮಂದಿ ತೆರಿಗೆ ಕಟ್ಟಲು ಹಣ ಸಾಲದೇ ವಾಪಸ್ ಹೋದ ನಿದರ್ಶನಗಳೂ ಇವೆ.

ತೆರಿಗೆ ಕಟ್ಟಲು ಹರಸಾಹಸ: ನಗರಪಾಲಿಕೆಯಲ್ಲಿ ತೆರಿಗೆ ಕಟ್ಟಲು ಬ್ಯಾಂಕ್‌ ಕೌಂಟರ್‌ ಬಳಿ ಸಾರ್ವಜನಿಕರು, ಯುವಕರು, ವೃದ್ಧರು ಎನ್ನದೇ ಎಲ್ಲರೂ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಕೊರೊನಾ ಕಾರಣದಿಂದಾಗಿ ಅಂತರ ಕಾಯ್ದುಕೊಳ್ಳಲು ಸಾಲಾಗಿ ಕುರ್ಚಿಗಳನ್ನು ಇಡಲಾಗಿದೆ. ಆದರೂ ಜನಸಂದಣಿ ತಪ್ಪಿಲ್ಲ. ತೆರಿಗೆ ಲೆಕ್ಕಹಾಕಲು ಪಾಲಿಕೆಯ ಬಲಭಾಗದಲ್ಲಿ ತೆರೆದಿರುವ ಕೌಂಟರ್‌ಗಳಲ್ಲಿ ಹೆಚ್ಚಿನ ಜನ ಸೇರಿರುತ್ತಾರೆ. ಮಾಸ್ಕ್ ಹಾಕಿರುವುದನ್ನು ಬಿಟ್ಟರೆ ಅಂತರ ಕಾಯ್ದುಕೊಳ್ಳುತ್ತಿಲ್ಲ. 

‘2020–21ನೇ ಸಾಲಿನ ಆಸ್ತಿ ತೆರಿಗೆ ಯಥಾಸ್ಥಿತಿಯಲ್ಲಿರುವಂತೆ ನೋಡಿಕೊಂಡು ಹೊಸ ಮಾರ್ಗಸೂಚಿ ಬೆಲೆಗೆ ಆಸ್ತಿ ತೆರಿಗೆ ನಿಗದಿಪಡಿಸಬೇಕು ಎಂದು ಸರ್ಕಾರ ಹೇಳಿದೆ. ಆ ಪ್ರಕಾರ ನಿಗದಿ ಮಾಡಿದ್ದೇವೆ. ಖಾಲಿ ನಿವೇಶನಕ್ಕೆ ಶೇ 0.2ಕ್ಕಿಂತ ಕಡಿಮೆ ಇರುವಂತೆ ಶೇ 0.5ಕ್ಕೆ ಹೆಚ್ಚಿಲ್ಲದಂತೆ ನಿಗದಿಪಡಿಸಿ ಎಂದು ಸರ್ಕಾರ ಸೂಚಿಸಿದೆ. ನಾವು ಖಾಲಿ ನಿವೇಶನಕ್ಕೆ ಶೇ 0.2 ನಿಗದಿಪಡಿಸಿದ್ದೇವೆ. ಖಾಲಿ ಜಾಗಕ್ಕೆ ಮಾರುಕಟ್ಟೆಯ ದರ ಹೆಚ್ಚಾಗಿರುವುದರಿಂದ ಕೆಲವು ಕಡೆ ಎರಡುಪಟ್ಟು ಹೆಚ್ಚಳವಾಗಿದೆ’ ಎಂದು ಪಾಲಿಕೆ ಕಂದಾಯ ಅಧಿಕಾರಿ ಕೆ.ನಾಗರಾಜ್ ಅವರೇ ಒಪ್ಪಿಕೊಳ್ಳುತ್ತಾರೆ.

ತೆರಿಗೆ ಲೆಕ್ಕ ಹಾಕಲು ನಾಲ್ಕು ಕೌಂಟರ್: ‘ಆಸ್ತಿ ತೆರಿಗೆಯನ್ನು ನೀವೇ ಲೆಕ್ಕ ಹಾಕಿ ಆನ್‌ಲೈನ್‌ನಲ್ಲಿ ಪಾವತಿಸಬಹುದು. ಆದರೆ, ಕೆಲವರು ಅನಕ್ಷರಸ್ಥರಾಗಿರುವುದರಿಂದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 4 ತೆರಿಗೆ ಕೌಂಟರ್‌ಗಳನ್ನು ತೆರೆಯಲಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ವ್ಯವಸ್ಥೆ ಮಾಡಿದ್ದೇವೆ. ಆಸ್ತಿ ಮಾಲೀಕರು ಅನುಭೋಗದಾರ ಲೆಕ್ಕಚಾರ ಹಾಕಿಸಿ ತೆರಿಗೆ ಪಾವತಿಸಬಹುದು’ ಎಂದು ಹೇಳುತ್ತಾರೆ.

ಮಹಾನಗರ ಪಾಲಿಕೆ, ಎಂಸಿಸಿ ‘ಬಿ’ ಬ್ಲಾಕ್, ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ಪಾಲಿಕೆ ವಲಯ ಕಚೇರಿಗಳಲ್ಲಿ ತೆರಿಗೆ ಪಾವತಿಸಲು ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೆ.ನಾಗರಾಜ್ ಹೇಳುತ್ತಾರೆ.

ತೆರಿಗೆ ಸರಳೀಕರಣಕ್ಕೆ ಇ–ಆಸ್ತಿ: ‘ಆಸ್ತಿ ತೆರಿಗೆಯನ್ನು ಸರಳೀಕರಣಗೊಳಿಸಲು ಇ–ಆಸ್ತಿ ಕಾರ್ಯಕ್ರಮ ಜಾರಿಗೆ ತರಲು ಮುಂದಾಗಿದೆ. ಇದು ಜಾರಿಗೆ ಬಂದರೆ ಎಲ್ಲಾ ಆಸ್ತಿಗಳನ್ನು ಕಂಪ್ಯೂಟರೀಕರಣ ಮಾಡಲಾಗುತ್ತದೆ. ಆಗ ಸಾರ್ವಜನಿಕರು ಆನ್‌ಲೈನ್‌ನಲ್ಲೇ ತೆರಿಗೆ ಪಾವತಿಸಲು ಅನುಕೂಲ ಮಾಡಿಕೊಡಲಾಗಿದೆ. ಈಗ ಆರಂಭಿಸಿದ್ದೇವೆ’ ಎಂದು ಕೆ.ನಾಗರಾಜ್ ಹೇಳುತ್ತಾರೆ.

‘ಜಲಸಿರಿ ಯೋಜನೆ’ಯಡಿ ನಾವೂ ಎಲ್ಲಾ ಮನೆಗಳಿಗೂ ನಳಗಳ ಸಂಪರ್ಕಗಳ ಮಾಹಿತಿಯನ್ನು ಪೂರ್ಣಪ್ರಮಾಣದಲ್ಲಿ ಅಪ್‌ಲೋಡ್ ಮಾಡಲಾಗುವುದು. ಆಗ ಸರಾಗವಾಗಿ ನೀರಿನ ಬಿಲ್ ಪಾವತಿಸಬಹುದು. ಇದು ಜಾರಿಗೆ ಬಂದರೆ ತೆರಿಗೆ ಪಾವತಿ ಸರಳವಾಗುವುದರ ಜೊತೆಗೆ ಪಾಲಿಕೆಯ ಆದಾಯ ಸೋರಿಕೆಯಾಗದಂತೆ ತಡೆಗಟ್ಟಬಹುದು’ ಎಂದು ಅವರು ಹೇಳುತ್ತಾರೆ.

ಆಗಸ್ಟ್ 31ರ ವರೆಗೂ ಶೇ 5 ವಿನಾಯಿತಿ: ‘ಆಸ್ತಿ ತೆರಿಗೆ ಪಾವತಿಸಲು ಜನರನ್ನು ಪ್ರೋತ್ಸಾಹಿಸಲು ಜುಲೈ 31ರ ವರೆಗೂ ಶೇ 5ರಷ್ಟು ವಿನಾಯಿತಿ ಮುಂದುವರಿಸಲಾಗಿತ್ತು. ಕೋವಿಡ್–ಲಾಕ್‌ಡೌನ್ ಕಾರಣಕ್ಕೆ ಆರ್ಥಿಕ ಚಟುವಟಿಕೆ ಕುಂಠಿತವಾಗಿರುವುದರಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ತಿ ತೆರಿಗೆ ಮೇಲಿನ ಶೇ 5ರಷ್ಟು ರಿಯಾಯಿತಿಯ ಕಾಲಾವಧಿಯನ್ನು ಸರ್ಕಾರ ಆಗಸ್ಟ್ 31ರವರೆಗೂ ವಿಸ್ತರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.