ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಲಲ್ಲಿ ಅಮರಾವತಿ ರೈಲ್ವೆ ಮೇಲ್ಸೇತುವೆ

ಹರಿಹರ: ಪಾದಚಾರಿಗಳಿಗೆ ಆತಂಕ l ಬೀದಿ ದೀಪಗಳಿಗೆ ವಿದ್ಯುತ್‌ ಕಲ್ಪಿಸಲು ಆಗ್ರಹ
Last Updated 4 ಜನವರಿ 2022, 4:00 IST
ಅಕ್ಷರ ಗಾತ್ರ

ಹರಿಹರ: ದಾವಣಗೆರೆ ಮಾರ್ಗದ ಹೊರವಲಯದ ಅಮರಾವತಿ ಬಳಿಯ ರೈಲ್ವೆ ಗೇಟಿನ ಮೇಲೆ ಎರಡು ವರ್ಷಗಳ ಹಿಂದೆ ರೈಲ್ವೆ ಮೇಲ್ಸೇತುವೆ (ಫ್ಲೈ ಓವರ್)ಯಲ್ಲಿ ರಾತ್ರಿ ವೇಳೆ ವಿದ್ಯುತ್ ದೀಪಗಳು ಬೆಳಗದೇ ಕತ್ತಲೆಯಲ್ಲಿ ಸಂಚರಿಸಬೇಕಿದೆ.

ದಿನಕ್ಕೆ 50 ಬಾರಿ ಗೇಟು ಹಾಕಿ ಕಿರಿ–ಕಿರಿ ಅನುಭವಿಸುತ್ತಿದ್ದ ಹರಿಹರ-ದಾವಣಗೆರೆ ಅವಳಿ ನಗರದ ಜನತೆಗೆ ಫ್ಲೈ ಓವರ್‌ನಿಂದ ಅನುಕೂಲವಾಯಿತು. ಸೇತುವೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವೂ ಆಯಿತು. ಬೀದಿದೀಪಗಳ ಕಂಬಗಳ ಅಳವಡಿಕೆ ಕಾರ್ಯವೂ ಮುಗಿಯಿತು. ಆದರೆ ಆ ದೀಪಗಳು ಮಾತ್ರ ಬೆಳಗಲೇ ಇಲ್ಲ.

ಈ ತಿಂಗಳು ಅಥವಾ ಮುಂದಿನ ತಿಂಗಳು ಬೆಳಗಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ. ಸಾಕಷ್ಟು ಸ್ವಯಂ ಬೆಳಕು ಬೀರುವ ಕಾರು, ಬಸ್ಸು ಸಂಚಾರಕ್ಕೆ ತೊಂದರೆ ಇಲ್ಲ. ಆದರೆ ಸಣ್ಣ ಬೆಳಕಿನ ದ್ವಿಚಕ್ರವಾಹನ, ಆಟೊ, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ.

ನಗರದಾಚೆಯ ಅಮರಾವತಿ, ಜೈಭೀಮ ನಗರ, ಆಂಜನೇಯ ಬಡಾವಣೆ, ಅಮರಾವತಿ ಕಾಲೊನಿ, ಕೆಎಚ್‌ಬಿ ಕಾಲೊನಿ, ದೊಗ್ಗಳ್ಳಿ ಪ್ರದೇಶಗಳ ಜನರು ಈ ಸೇತುವೆ ಮೂಲಕವೇ ಸಂಚರಿಸುತ್ತಾರೆ. ಈ ಪ್ರದೇಶಗಳ ಪೈಕಿ ಅಮರಾವತಿ, ಜೈ ಭೀಮನಗರ, ಆಂಜನೇಯ ಬಡಾವಣೆಯ ಮಹಿಳೆಯರೂ ಸೇರಿ ಹೆಚ್ಚಿನ ಕೂಲಿಕಾರರು ಹೋಟೆಲ್, ಅಂಗಡಿ, ಮನೆಗೆಲಸ ಸೇರಿ ಹತ್ತಾರು ಕೆಲಸಕಾರ್ಯಗಳಿಗೆ ಸಂಚರಿಸುತ್ತಾರೆ. ವಿದ್ಯಾರ್ಥಿಗಳು ಶಾಲಾ– ಕಾಲೇಜುಗಳಿಗೆ ಹೋಗಿ ಬರುತ್ತಾರೆ. ಉತ್ತಮ ಗಾಳಿ ಬರುತ್ತದೆ ಎಂದು ಬೆಳಗಿನ ಜಾವ ಹಾಗೂ ಸಂಜೆ ವಾಯುವಿಹಾರ ಮಾಡುವವರಿದ್ದಾರೆ. ಆದರೆ ಸಂಜೆಯ ನಂತರ ಮನೆಗೆ ವಾಪಸ್ ಬರುವವರು ಕಗ್ಗತ್ತಲ್ಲಿ ಸಂಚರಿಸಬೇಕಿದೆ. ಮಹಿಳೆಯರಿಗಂತೂ ಸೇತುವೆ ಹತ್ತಿ ಇಳಿಯುವವರೆಗೆ ಜೀವ ಕೈಯಲ್ಲಿರುತ್ತದೆ. ಆಗೊಮ್ಮೆ, ಈಗೊಮ್ಮೆ ಬಂದು ಹೋಗುವ ವಾಹನಗಳ ಬೆಳಕು ಬಿಟ್ಟರೆ ಇಲ್ಲಿ ಕತ್ತಲಿನ ಸಾಮ್ರಾಜ್ಯ.

ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಈ ಸೇತುವೆ ಮೇಲೆ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬುದು ನಾಗರಿಕರ ಆಗ್ರಹ.

ಕೋಟ್‌...

ಈಚೆಗೆ ರಾತ್ರಿ 8ರ ವೇಳೆಗೆ ಸೇತುವೆಯಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದಾಗ ರಸ್ತೆಯಲ್ಲಿ ಬಿದ್ದಿದ್ದ ಕಲ್ಲು, ಮಣ್ಣು ಕಾಣದೆ ಬಿದ್ದು ಗಾಯಗೊಂಡು ಎರಡು ತಿಂಗಳು ವಿಶ್ರಾಂತಿ ಪಡೆಯಬೇಕಾಯಿತು.

ಅಮರಾವತಿ ರೇವಣಸಿದ್ದಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ

ನನ್ನ ಮಗಳು ಕೆಲಸದಿಂದ ಮನೆಗೆ ಬರುವುದು ರಾತ್ರಿ 8ಕ್ಕೆ, ಕತ್ತಲಲ್ಲಿ ಆ ಸೇತುವೆ ದಾಟಿ ಮನೆಗೆ ಮಗಳು ತಲುಪವವರೆಗೂ ನನ್ನ ಜೀವಕ್ಕೆ ಸಮಾಧಾನ ಇರಲ್ಲ ಕಣ್ರಪ್ಪ. ಏನಾದ್ರೂ ಮಾಡಿ ಸೇತುವೆಗೆ ಲೈಟ್ ಹಾಕಿಸಿ.

ದುರ್ಗಪ್ಪ, ಜೈಭೀಮನಗರ ನಿವಾಸಿ

550 ಮೀಟರ್ ವಿಸ್ತಾರ

ಈ ಸೇತುವೆ ಬರೋಬ್ಬರಿ 550 ಮೀ ಉದ್ದವಿದೆ. ನಡೆದುಕೊಂಡು ಸಾಗಲು ಕನಿಷ್ಠ 15 ನಿಮಿಷ ಬೇಕಾಗುತ್ತದೆ. ಸಂಚಾರಕ್ಕೆ ಮುಕ್ತ ಮಾಡಿ ಕಂಬ, ಬೀದಿ ದೀಪ ಅಳವಡಿಸಿ ದೀಪ ಬೆಳಗುವಂತೆ ಮಾಡುವುದು ದೊಡ್ಡ ಕೆಲಸವಲ್ಲ. ಆದರೂ ಅದನ್ನು ಹಾಗೆ ಬಿಟ್ಟಿರುವುದು ಆಶ್ಚರ್ಯ ಮೂಡಿಸಿದೆ. ವಿದ್ಯುತ್ ಸಂಪರ್ಕಕಕ್ಕೆ ಬೆಸ್ಕಾಂಗೆ ಠೇವಣಿ ಪಾವತಿ ಮಾಡುವ ಜವಾಬ್ದಾರಿ ರೈಲ್ವೆ ಇಲಾಖೆಯದ್ದು. ಇದನ್ನು ಉಳಿಸಲು ಗುತ್ತಿಗೆದಾರರು ಹೀಗೆ ಮಾಡಿದ್ದಾರೆಯೇ ಎಂಬುದು ಜನರ ಪ್ರಶ್ನೆ.

20 ದಿನಗಳೊಳಗೆ ಕಾಮಗಾರಿ

‘ವಿದ್ಯುತ್ ಸಂಪರ್ಕ ಕೊಡಿಸುವ ಜವಾಬ್ದಾರಿ ಹೊತ್ತಿದ್ದ ಇಲಾಖೆಯ ವಿದ್ಯುತ್ ವಿಭಾಗದ ಸಿಬ್ಬಂದಿ ಮರಣ ಹೊಂದಿದ್ದರಿಂದ ಈ ಕೆಲಸ ಬಾಕಿ ಇದೆ. 15ರಿಂದ 20 ದಿನಗಳೊಳಗೆ ದೀಪಗಳು ಬೆಳಗುವಂತೆ ಮಾಡಿ ನಿರ್ವಹಣೆಗೆ ನಗರಸಭೆಯವರಿಗೆ ವಹಿಸಲಾಗುವುದು’ ಎಂದು ರೈಲ್ವೆ ನಿರ್ಮಾಣ ವಿಭಾಗದ ಎಇಇ ಮಂಜುನಾಥ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT