ಸೋಮವಾರ, ಜೂನ್ 27, 2022
28 °C
ಜಿಲ್ಲೆಯಲ್ಲಿ ಇದ್ದಾರೆ 12 ಸಾವಿರ ಅಲೆಮಾರಿಗಳು

ಲಾಕ್‌ಡೌನ್‌ನಿಂದಾಗಿ ಸಂಕಷ್ಟ- ಅಲೆಮಾರಿಗಳಿಗೆ ಸಿಗದ ವಿಶೇಷ ಪ್ಯಾಕೇಜ್

ಡಿ.ಕೆ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾದಿಂದಾಗಿ ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು ಜನರು ಸಂಕಷ್ಟದಲ್ಲಿದ್ದಾರೆ.

ಸುಡುಗಾಡು ಸಿದ್ಧ, ಹಂದಿ ಜೋಗಿ, ಹಕ್ಕಿಪಿಕ್ಕಿ, ರಾಜಗೊಂಡ, ದಕ್ಕಲಿಗರು, ಶಿಳ್ಳೆಕ್ಯಾತ, ಗೊಂಡಬಾಳಿ ಸೇರಿ 15ಕ್ಕೂ ಹೆಚ್ಚು ಸಮುದಾಯದವರು ಇದ್ದು, ಇವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ದಾವಣಗೆರೆ ನಗರದಲ್ಲಿ 6 ಸಾವಿರ ಹಾಗೂ ಜಿಲ್ಲೆಯಲ್ಲಿ ಅಂದಾಜು 10 ಸಾವಿರದಿಂದ 12 ಸಾವಿರ ಅಲೆಮಾರಿ ಜನರಿದ್ದಾರೆ.

ಇವರಿಗೆ ಒಪ್ಪತ್ತಿನ ಊಟವಿಲ್ಲದೇ ಪರದಾಡುತ್ತಿದ್ದಾರೆ. ರಸ್ತೆ ಬದಿ ಹಾಗೂ ದೇವಸ್ಥಾನಗಳ ಅಕ್ಕಪಕ್ಕದ ಜಾಗ, ಊರಿನ ಪಾಳು ಜಾಗಗಳಲ್ಲಿ ಟೆಂಟ್‌ಗಳು, ಗುಡಾರ ಹಾಗೂ ಗುಡಿಸಲುಗಳನ್ನು ಹಾಕಿಕೊಂಡು ಬದುಕುತ್ತಿದ್ದಾರೆ. ಕೆಲವರು ತಲೆಪಿನ್ನು, ಟೇಪು, ಬಾಚಣಿಕೆಗಳು, ಪ್ಲಾಸ್ಟಿಕ್ ಸಾಮಾನುಗಳನ್ನು ಮಾರಾಟ ಮಾಡಿ ಜೀವನ ನಡೆಸಿದರೆ, ಕೆಲವರು ಕೊಡೆ, ಬೀಗ ರಿಪೇರಿ ಮಾಡುತ್ತಿದ್ದಾರೆ.  ಗ್ರಾಮೀಣ ಭಾಗಗಳಲ್ಲಿ ಕೂಲಿ, ಕೆಲವರು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ವಾಸಿಸಲು ಸ್ವಂತ ಮನೆಯೂ ಇಲ್ಲ; ಜಮೀನು ಇಲ್ಲ.

‘ಕೋವಿಡ್‌ನಿಂದಾಗಿ ಊಟಕ್ಕೆ ಆಹಾರದ ಸಾಮಗ್ರಿಗಳು ಇಲ್ಲದೇ ಬದುಕು ಸಾಗಿಸಲು ಇವರು ತುಂಬಾ ಸಂಕಷ್ಟ ಪಡುತ್ತಿದ್ದಾರೆ. ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಅಲೆಮಾರಿಗಳ ಸಮಾವೇಶದಲ್ಲಿ ರಾಜ್ಯದಲ್ಲಿ ಆಯೋಗ ರಚನೆ ಮತ್ತು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶ್ವಾಸನೆ ನೀಡಿದ್ದರೂ ಇನ್ನೂ ಈಡೇರಿಲ್ಲ’ ಎನ್ನುತ್ತಾರೆ ಅಲೆಮಾರಿ ಸಮುದಾಯಗಳ ಮುಖಂಡ ಡಿ.ತಿಪ್ಪಣ್ಣ.

‘ಲಾಕ್‌ಡೌನ್ ಸಂದರ್ಭ ಹಸಿವು ನೀಗಿಸಲಿಕ್ಕಾದರೂ ಅಲೆಮಾರಿಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಸಂಕಷ್ಟಕ್ಕೆ ಒಳಗಾದ ಕೆಲವು ಸಮುದಾಯಗಳಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ. ಅದರಲ್ಲಿ ಅಲೆಮಾರಿಗಳನ್ನು ಕಡೆಗಣಿಸಲಾಗಿದೆ. ಈ ಸಮುದಾಯಗಳು ಈ ದೇಶದ (ನೆಲದ) ಮೂಲನಿವಾಸಿಗಳು. ಲಾಕ್‌ಡೌನ್ ಸಂದರ್ಭ ಅಲೆಮಾರಿ ಕುಟುಂಬಗಳಿಗೆ ₹10 ಸಾವಿರ ಜೊತೆಗೆ ಆಹಾರ ಸಾಮಗ್ರಿಗಳ ವಿಶೇಷ ಪ್ಯಾಕೇಜ್ ಘೋಷಿಸಬೇಕು’ ಎಂಬುದು ತಿಪ್ಪಣ್ಣ ಅವರ ಆಗ್ರಹ.

‘ಅಲೆಮಾರಿಗಳಿಗೆ ಆಧಾರ್ ಕಾರ್ಡ್, ಪಡಿತರ ಚೀಟಿಯೂ ಇರುವುದಿಲ್ಲ. ಇದರಿಂದಾಗಿ ಅವರನ್ನು ಗುರುತಿಸುವುದು ಕಷ್ಟವಾಗಿದೆ. ಸೂಕ್ತ ಸೌಲಭ್ಯ ನೀಡಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಾಮ ನಿರ್ದೇಶಿತ ಸದಸ್ಯ ರಮೇಶ್ ಸಿ.ದಾಸರ್ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು