ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಸಿ, ಸಿಎಎ ರದ್ಧತಿಗೆ ಆಗ್ರಹಿಸಿ ಪ್ರತಿಭಟನೆ

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ
Last Updated 18 ಡಿಸೆಂಬರ್ 2019, 14:59 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ರದ್ಧತಿಗೆ ಒತ್ತಾಯಿಸಿ ಮುಸ್ಲಿಂ ಸಮಾಜ, ತಂಜೀಮ್ ಕಮಿಟಿ, ಕಾಂಗ್ರೆಸ್, ಕೋಮು ಸೌಹಾರ್ದ ವೇದಿಕೆ, ಸಿಪಿಐ, ಜೆಡಿಎಸ್ ಮುಖಂಡರು ಬುಧವಾರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಅಸಾಂವಿಧಾನಿಕ. ದೇಶದ ಅಭದ್ರತೆ ಮತ್ತು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ. ದೇಶವಾಸಿಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸುವ, ಕೋಮು ಸೌಹಾರ್ದ ನಾಶ ಮಾಡುವ, ಕೋಮು ವಿಷ ಬೀಜ ಬಿತ್ತುವ ಹಾಗೂ ಮಾನವೀಯತೆಗೆ ವಿರುದ್ಧವಾಗಿವೆ. ಹಾಗಾಗಿ ಕೂಡಲೇ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ತು ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಮಾತನಾಡಿ, ‘ಕೇಂದ್ರ ಸರ್ಕಾರ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮಸೂದೆ ಮಂಡನೆ ಮಾಡುವ ಸಂದರ್ಭದಲ್ಲಿ ಭಾರತದಲ್ಲಿನ ಮುಸ್ಲಿಂ ಸಮುದಾಯದವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದಿತ್ತು. ಆದರೆ, ಆ ರೀತಿ ಮಾಡದೆ ದೇಶದ್ಯಾಂತ ವಿನಾಕಾರಣ ಗೊಂದಲಕ್ಕೆ ಕಾರಣವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಂಶಪಾರ್ಯಂಪರ್ಯವಾಗಿ ಭಾರತದಲ್ಲೇ ಹುಟ್ಟಿ, ಬೆಳೆದವರು ತಮ್ಮ ಪೌರತ್ವ ರುಜುವಾತುಪಡಿಸಬೇಕು ಎನ್ನುವ ಮಾತೇ ಸರಿ ಅಲ್ಲ. ಪೌರತ್ವ ರುಜುವಾತುಪಡಿಸಲು ಅಗತ್ಯ ದಾಖಲೆಗಳಿಗೆ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಇಲ್ಲಿಯೇ ಹುಟ್ಟಿ ಬೆಳೆದವರು ಪೌರತ್ವದ ದಾಖಲೆ ತೋರಿಸಬೇಕು ಎನ್ನುವ ಅಂಶ ಬಹಳ ನೋವಿನ ವಿಚಾರ. ಹಾಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ‌ಯಲ್ಲಿ ತಿದ್ದುಪಡಿಯನ್ನಾದರೂ ತರಬೇಕು ಇಲ್ಲವೇ ತಕ್ಷಣವೇ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಮಾತನಾಡಿ,‘ಆರ್ಥಿಕ ಕುಸಿತ, ಜಿಡಿಪಿ ದರ ಇಳಿಕೆ, ಬೆಲೆ ಏರಿಕೆ ಮುಂತಾದ ಜ್ವಲಂತ ಸಮಸ್ಯೆಗಳಿಂದ ಜನರು ತೀವ್ರ ತೊಂದರೆಯಲ್ಲಿ ಇದ್ದಾರೆ. ಅಂತಹ ಸಮಸ್ಯೆಗಳನ್ನು ಬಗೆಹರಿಸುವ ಬದಲಿಗೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯಂತಹ ಅಸಾಂವಿಧಾನಿಕ, ಮಾನವೀಯ ವಿರೋಧ ಕಾಯ್ದೆಗೆ ಆಸಕ್ತಿ ತೋರುತ್ತಿದೆ. ತನ್ನ ವೈಫಲ್ಯವನ್ನ ಮರೆಮಾಚಲು, ದೇಶದ ಜನರ ಬೇರೆಡೆಗೆ ಸೆಳೆಯಲು ಇಂತಹ ಕಾಯ್ದೆ, ಕಾನೂನು ಬಗ್ಗೆ ಮಾತನಾಡುತ್ತಿದೆ. ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಹ ಈ ಕಾಯ್ದೆಗಳನ್ನು ಕೂಡಲೇ ರದ್ಧುಪಡಿಸಬೇಕು’ ಎಂದು ಒತ್ತಾಯಿಸಿದರು.

ತಂಜೀಮ್ ಕಮಿಟಿ ಮಾಜಿ ಅಧ್ಯಕ್ಷ ಸಾದಿಕ್ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯರಾದ ಕೆ. ಅಬ್ದುಲ್ ಲತೀಫ್, ಸೈಯದ್ ಚಾರ್ಲಿ, ಮಾಜಿ ಸದಸ್ಯ ಕೋಳಿ ಇಬ್ರಾಹಿಂ, ಜಿಲ್ಲಾ ವಕ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಸಿರಾಜ್, ತಂಜೀಮ್ ಕಮಿಟಿ ಮಾಜಿ ಅಧ್ಯಕ್ಷ ಸೈಯದ್ ಸೈಪುಲ್ಲಾ, ಸಿಪಿಐ ಮುಖಂಡ ಆವರಗೆರೆ ವಾಸು, ಅನೀಸ್ ಪಾಷಾ, ರಜ್ವಿಖಾನ್, ಆಲ್ಲಾವಲಿ ಗಾಜಿಖಾನ್, ಉಷಾ ಕೈಲಾಸದ್, ಲಾರಿ ಮಾಲಿಕರ ಸಂಘದ ಅಧ್ಯಕ್ಷ ಸೈಯದ್ ಸೈಪುಲ್ಲಾ. ಸೈಯದ್ ರಹಮತುಲ್ಲಾ, ಎಚ್.ಕೆ. ಮುಷರಫ್, ಡಿ. ಸೈಯದ್ ರಿಯಾಜ್, ಬಿ. ದಾದಾಪೀರ್(ತಾಜ್) ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT