ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಅಪೌಷ್ಟಿಕ ಮಕ್ಕಳ ಆರೈಕೆಗೆ ಪುನರ್‌ವಸತಿ ಕೇಂದ್ರ

ವೈದ್ಯೆ ಡಾ.ನಿರ್ಮಲಾ ಕೇಸರಿ 1979ರಲ್ಲಿಯೇ ಆರಂಭಿಸಿದ್ದ ರಾಜ್ಯದ ಮೊದಲ ಕೇಂದ್ರ
Last Updated 16 ಅಕ್ಟೋಬರ್ 2021, 2:43 IST
ಅಕ್ಷರ ಗಾತ್ರ

ದಾವಣಗೆರೆ: ಬಡತನ, ಅನಕ್ಷರತೆ ನಾನಾ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೈಕೆಗಾಗಿ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿದೆ ಡಾ.ನಿರ್ಮಲಾ ಕೇಸರಿ ಅಪೌಷ್ಟಿಕ ಮಕ್ಕಳ ಪುನರ್‌ವಸತಿ ಕೇಂದ್ರ.

ಮಕ್ಕಳಲ್ಲಿ ಅಪೌಷ್ಟಿಕ ಸಮಸ್ಯೆ ನಿವಾರಿಸಲು ಸರ್ಕಾರ ಕಾರ್ಯಕ್ರಮ ರೂಪಿಸುವುದಕ್ಕೆ ಮುಂಚಿನಿಂದಲೇ ಜಿಲ್ಲೆಯಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಮೊದಲ ಮಕ್ಕಳ ತಜ್ಞೆ ಡಾ.ನಿರ್ಮಲಾ ಕೇಸರಿ ಅವರು 1979ರಲ್ಲಿಯೇ ಕೇಂದ್ರವನ್ನು ಆರಂಭಿಸಿದ್ದರು. ಈ ಕೇಂದ್ರದಲ್ಲಿನ ಮಕ್ಕಳ ಲಾಲನೆ–ಪಾಲನೆಯ ರೀತಿ ಇತರೆ ಕೇಂದ್ರಗಳು ಮತ್ತು ಪೋಷಕರಿಗೆ
ಮಾದರಿಯಾಗಿದೆ.

6 ತಿಂಗಳ ಮೇಲಿನ 5 ವರ್ಷದ ಒಳಗಿನ ತೀವ್ರ ಮತ್ತು ಸಾಧಾರಣ ಅಪೌಷ್ಟಿಕ ಮಕ್ಕಳನ್ನು ಇಲ್ಲಿ ದಾಖಲಿಸಬಹುದಾಗಿದೆ. ಇದಕ್ಕಾಗಿ 10 ಬೆಡ್‌ಗಳ ವ್ಯವಸ್ಥೆ ಇದ್ದು, 2ರಿಂದ 4 ವಾರಗಳ ಕಾಲ ಮಗುವಿನ ಆರೈಕೆ ಮಾಡಲಾಗುತ್ತದೆ. ಇದಕ್ಕಾಗಿ ವೈದ್ಯಾಧಿಕಾರಿ, ಮಕ್ಕಳ ತಜ್ಞ, ನಾಲ್ವರು ಸ್ಟಾಫ್ ನರ್ಸ್, ಆಪ್ತಸಮಾಲೋಚಕಿ, ಅಡುಗೆ ಹಾಗೂ ಸ್ವಚ್ಛತಾ ಸಿಬ್ಬಂದಿ ಇದ್ದಾರೆ. ಕೇಂದ್ರದ ನರ್ಸ್ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಮಕ್ಕಳಿಗೆ ಹಾಲು ಕೊಡುತ್ತಾರೆ. ನಂತರ ಮಕ್ಕಳ ತೂಕವನ್ನು ಪರೀಕ್ಷಿಸಿ ರಿಜಿಸ್ಟರ್‌ನಲ್ಲಿ ದಾಖಲಿಸುತ್ತಾರೆ. ಮಕ್ಕಳ ಬೆಳವಣಿಗೆಗೆ ಪೂರಕವಾದ ಔಷಧವನ್ನೂ ನೀಡುತ್ತಾರೆ. 8 ಗಂಟೆಗೆ ಬರುವ ಬ್ರೆಡ್ಡು, ಬಾಳೆಹಣ್ಣು, ಮೊಟ್ಟೆಯನ್ನು ತಾಯಿ ಮತ್ತು ಮಗು ಇಬ್ಬರಿಗೂ ವಿತರಿಸಲಾಗುತ್ತದೆ. ನಂತರ 10 ಗಂಟೆ ವೇಳೆಗೆ ಮಗುವಿಗೆ ತಿಂಡಿಯನ್ನು ಮಾಡಿಕೊಡಲಾಗುತ್ತದೆ. ಮಕ್ಕಳ ತಜ್ಞರೊಬ್ಬರು ನಿತ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ಪರಿಶೀಲಿಸುತ್ತಾರೆ.

ಕೇಂದ್ರದಲ್ಲಿ ಕುಡಿಯಲು ಶುದ್ಧ ನೀರು, ಸ್ನಾನಕ್ಕೆ ಬಿಸಿನೀರಿಗಾಗಿ ಗೀಜರ್, ಶೌಚಾಲಯ, ಮಕ್ಕಳಿಗೆ ಆಟವಾಡಲು ಆಟಿಕೆಗಳಿವೆ. ಕೇಂದ್ರದ ಒಳಭಾಗದಲ್ಲಿ ಉದ್ಯಾನವಿದ್ದು, ಹಣ್ಣು, ತರಕಾರಿ ಗಿಡಗಳನ್ನು ಬೆಳೆಯಲಾಗಿದೆ. ಮಗುವಿನ ಜತೆ ಉಳಿದುಕೊಳ್ಳುವ ತಾಯಂದಿರಿಗೆ ಪ್ರತಿದಿನ ಮಧ್ಯಾಹ್ನ 12 ಮತ್ತು ಸಂಜೆ 6 ಗಂಟೆಗೆ ಊಟ ನೀಡಲಾಗುತ್ತದೆ. ಮಕ್ಕಳಲ್ಲಿ ಅಪೌಷ್ಟಿಕ ಸಮಸ್ಯೆಗೆ ಕಾರಣ, ಅನುಸರಿಸಬೇಕಾದ ಆಹಾರ ಕ್ರಮ, ಸ್ವಚ್ಛತೆ ಕಾಪಾಡಿಕೊಳ್ಳುವ ಬಗೆ, ಕುಟುಂಬ ಯೋಜನೆ, ಎದೆ ಹಾಲಿನ ಮಹತ್ವ, ಲಸಿಕೆ ಮುಂತಾದ ವಿಷಯಗಳ ಬಗ್ಗೆ ಕೇಂದ್ರದ ಡಯಟ್‌ ಕೌನ್ಸಿಲರ್‌ ಪ್ರತಿಭಾ ಅವರು ತಾಯಂದಿರಿಗೆ ಪಾಠ ಮಾಡುತ್ತಾರೆ. ಕಳೆದ ಮೂರು ವರ್ಷಗಳಲ್ಲಿ 400ಕ್ಕೂ ಹೆಚ್ಚು ಮಕ್ಕಳು ಕೇಂದ್ರದಲ್ಲಿ ದಾಖಲಾಗಿದ್ದು, ಶೇ 90ರಷ್ಟು ಮಕ್ಕಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

***

ಎತ್ತರಕ್ಕೆ ತಕ್ಕಷ್ಟು ತೂಕವಿಲ್ಲದ, ಮಗುವಿನ ಎಡಗೈ ತೋಳಿನ ಸುತ್ತಳತೆ 11.5 ಸೆ.ಮೀ.ಗಿಂತ ಕಡಿಮೆ ಇರುವ, ಕೈ, ಕಾಲು ಊದಿಕೊಂಡಿರುವ ಮಕ್ಕಳನ್ನು ತಪ್ಪದೇ ಕರೆತರಬೇಕು.

- ಡಾ.ಲೋಹಿತ್‌, ಮಕ್ಕಳ ತಜ್ಞ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ

ಕನಿಷ್ಠ14 ದಿನಗಳು ಇರಬೇಕಾಗುತ್ತದೆ ಎಂದು ಅನೇಕ ತಾಯಂದಿರು ಇಲ್ಲಿರಲು ನಿರಾಕರಿಸುತ್ತಾರೆ. ಆದಕಾರಣ ತಾಯಂದಿರಿಗೆ ದಿನಕ್ಕೆ ₹ 275 ಕೂಲಿಭತ್ಯೆ ಭರಿಸಲಾಗುತ್ತದೆ.

- ಡಾ.ಪ್ರಶಾಂತಕುಮಾರಿ, ವೈದ್ಯಾಧಿಕಾರಿ, ಅಪೌಷ್ಟಿಕ ಮಕ್ಕಳ ಪುನರ್‌ವಸತಿ ಕೇಂದ್ರ

ಡಾ.ನಿರ್ಮಲಾ ಕೇಸರಿ ಅವರು ತಿಂಗಳಿಗೊಮ್ಮೆ ಹಳ್ಳಿಗಳಲ್ಲಿ ಕ್ಯಾಂಪ್‌ ಮಾಡಿ ಮಕ್ಕಳನ್ನು ಕೇಂದ್ರಕ್ಕೆ ಕರೆತಂದು ಆರೈಕೆ ಮಾಡುತ್ತಿದ್ದರು.

- ಡಾ.ಸಿ.ಆರ್. ಬಾಣಾಪುರಮಠ, ಮಕ್ಕಳ ತಜ್ಞ, ದಾವಣಗೆರೆ

ನನ್ನ ಮಗನಿಗೆ ರಕ್ತ ಕಡಿಮೆಯಾಗಿ ಕೂರಲು, ನಿಲ್ಲಲು ಆಗುತ್ತಿರಲಿಲ್ಲ. ಈಗ ಚೇತರಿಸಿಕೊಂಡಿದ್ದಾನೆ. ನನ್ನಂತೆ ಇತರ ತಾಯಂದಿರೂ ಕೇಂದ್ರದ ಸದುಪಯೋಗಪಡಿಸಿಕೊಳ್ಳಬೇಕು.

- ಶೃತಿ, ಪೋಷಕಿ, ದಾವಣಗೆರೆ ನಿವಾಸಿ

ಅಪೌಷ್ಟಿಕ ಮಕ್ಕಳಿಗೆ ಸಂಜೀವಿನಿ ‘ದಾವಣಗೆರೆ ಮಿಕ್ಸ್‌’

ಅಪೌಷ್ಟಿಕ ಸಮಸ್ಯೆಯಿಂದ ಬಳಲುವ ಮಗುವಿಗೆ ಕೇಂದ್ರದಲ್ಲಿ ನೀಡುವ ಆಹಾರ ವಿಶಿಷ್ಟವಾದುದು. ಅಡುಗೆ ಸಿಬ್ಬಂದಿ ಸರೋಜಮ್ಮ ಬೆಳಿಗ್ಗೆ 9ಕ್ಕೆ ಬಂದ ಕೂಡಲೇ ಶೇಂಗಾಬೀಜ, ಹುರಿಗಡಲೆಯನ್ನು ಹುರಿದು ಪುಡಿ ಮಾಡಿಕೊಳ್ತಾರೆ. ಇದಕ್ಕೆ ಹುರಿದ ಒಡ್ಡರಾಗಿಹಿಟ್ಟು ಸೇರಿಸಿ, ತುಪ್ಪ ಹಾಕಿ, ಬೆಲ್ಲದ ಪಾಕದಿಂದ ಪ್ರಮಾಣಾನುಸಾರ ಉಂಡೆಗಳನ್ನು ಕಟ್ಟಿ ಮಕ್ಕಳಿಗೆ ತಿನ್ನಲು ಕೊಡ್ತಾರೆ. ಇದು ‘ದಾವಣಗೆರೆ ಮಿಕ್ಸ್’ ಎಂದೇ ಹೆಸರುವಾಸಿಯಾಗಿದೆ.

11 ಗಂಟೆಗೆ ನೀಡುವ ಪಾಯಸವನ್ನು ಮಕ್ಕಳು ಚಪ್ಪರಿಸಿಕೊಂಡು ಕುಡಿಯುತ್ತಾರೆ. ಹೆಸರುಬೇಳೆ, ಸೋಯಾಬೀನ್, ಅಕ್ಕಿಹಿಟ್ಟು, ಹಾಲು, ತುಪ್ಪ, ಬೆಲ್ಲವನ್ನು ಬಳಸಿ ತಯಾರಿಸುವ ಈ ಪಾಯಸ ಮಕ್ಕಳಿಗೆ ಪುಷ್ಟಿದಾಯಕ. ಅಪೌಷ್ಟಿಕ ಮಕ್ಕಳಿಗೆ ಸಂಜೀವಿನಿಯಾಗಿರುವ ಈ ಎರಡೂ ಆಹಾರವನ್ನು ಪರಿಚಯಿಸಿದ್ದು ಡಾ.ನಿರ್ಮಲಾ ಕೇಸರಿ ಅವರೇ. ಅವರ ಸೂಚನೆ ಮೇರೆಗೆ ಅಡುಗೆ ಸಿಬ್ಬಂದಿ ಸರೋಜಮ್ಮ ಸುಮಾರು 40 ವರ್ಷಗಳಿಂದ ಕೇಂದ್ರದಲ್ಲಿನ ಮಕ್ಕಳಿಗೆ ಈ ಆಹಾರವನ್ನು ಉಣಬಡಿಸ್ತಿದ್ದಾರೆ.

ತಾಯಂದಿರಿಗೇ ತಾಯಿಯಾಗಿದ್ದ ಡಾ.ನಿರ್ಮಲಾ ಕೇಸರಿ

ಗ್ರಾಮೀಣ ಹಾಗೂ ನಗರಪ್ರದೇಶಗಳ ಮಕ್ಕಳಲ್ಲಿ ಅಪೌಷ್ಟಿಕ ಸಮಸ್ಯೆ ನಿವಾರಣೆಗೆ ಕೇಂದ್ರವನ್ನು ಆರಂಭಿಸಿದ ಡಾ.ನಿರ್ಮಲಾ ಕೇಸರಿ ತಾಯಂದಿರಿಗೇ ತಾಯಿಯಾಗಿದ್ದರು. ಹಾವೇರಿ ಜಿಲ್ಲೆಯ ಹಿರೇಕೆರೂರಿನ ಸೋಮನಹಳ್ಳಿಯವರಾದ ವೈದ್ಯೆ ನಿರ್ಮಲಾ, 11 ವರ್ಷಗಳ ಕಾಲ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದರೂ ತಮ್ಮ ಸಾಮಾಜಿಕ ಕಾಳಜಿಯ ಕಾರಣ ದಾವಣಗೆರೆಗೆ ಬಂದು ಸೇವೆ ಆರಂಭಿಸಿದ್ದರು. ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಲೇ ಮಕ್ಕಳು ಮತ್ತು ತಾಯಂದಿರ ಆರೋಗ್ಯಕ್ಕಾಗಿ ಮಾಡಿದ ಕೆಲಸಗಳು ಹಲವು. ತಮ್ಮ ಸೇವೆಯಿಂದಾಗಿ 2005ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT