ಸೋಮವಾರ, ಮೇ 23, 2022
21 °C

ಈರುಳ್ಳಿ ದರ ಗಗನಕ್ಕೆ: ಗ್ರಾಹಕ ಕಂಗಾಲು

ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಈರುಳ್ಳಿ ದರ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ವಾರದಿಂದ ಸುರಿಯುತ್ತಿರುವ ಮಳೆಯಿಂದ ಬಹುತೇಕ ಈರುಳ್ಳಿ ಬೆಳೆ ನೆಲಕಚ್ಚಿದೆ. ಇದರಿಂದ ಮಾರುಕಟ್ಟೆಗೆ ಸ್ಥಳೀಯವಾಗಿ ಪೂರೈಕೆಯಾಗುವ ಈರುಳ್ಳಿ ಪ್ರಮಾಣ ಕಡಿಮೆ ಆಗಿದೆ. ಇದರಿಂದ ಈರುಳ್ಳಿ ಬೆಲೆ ಈ ಬಾರಿ ದಾಖಲೆ ಏರಿಕೆ ಕಂಡಿದೆ.

ಒಂದು ಕೆ.ಜಿ ಈರುಳ್ಳಿ ದರ ₹ 80 ರಿಂದ ₹ 100ರ ಗಡಿ ದಾಟಿದೆ.

ಜಿಲ್ಲೆಯ ಜಗಳೂರು, ನ್ಯಾಮತಿ ಹಾಗೂ ಪಕ್ಕದ ಹರಪನಹಳ್ಳಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಆದರೆ, ಇಳುವರಿ ಕುಸಿತ ರೈತರಿಗೆ ಹೊಡೆತ ನೀಡಿದೆ. ವಿವಿಧ ಜಿಲ್ಲೆಗಳಿಂದ ಆವಕವಾಗುತ್ತಿದ್ದ ಈರುಳ್ಳಿ ಪೂರೈಕೆಯ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ದರ ಗಗನಕ್ಕೆ ಏರಿದೆ.

ಚಿಕ್ಕ ಗಾತ್ರದ ಈರುಳ್ಳಿ ಕೆ.ಜಿಗೆ ₹ 50 ರಿಂದ ₹ 60 ಹಾಗೂ ಉತ್ತಮ ಗಾತ್ರದ ಗೆಡ್ಡೆ ಕೆ.ಜಿಗೆ ₹ 80ರಿಂದ ₹ 100ರಂತೆ ಮಾರಾಟವಾಗುತ್ತಿದೆ. 

ಮಾರುಕಟ್ಟೆಯಲ್ಲಿ ಬೆಲೆ ಕೇಳಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ದಸರಾ ಹಬ್ಬ ಇರುವ ಕಾರಣ ಹತ್ತಿರದ ಬಂಧುಗಳು, ಸ್ನೇಹಿತರು ಬಂದಿರುವ ಕಾರಣ ಅಡುಗೆಗೆ ಈರುಳ್ಳಿ ಬೇಕೆ ಬೇಕು. ಮೊದಲು 5 ಕೆ.ಜಿ., 10 ಕೆ.ಜಿ ಖರೀದಿಸುತ್ತಿದ್ದವರೂ ಅನಿವಾರ್ಯವಾಗಿ ಒಂದು ಕೆ.ಜಿ. ಖರೀದಿಸುತ್ತಿದ್ದಾರೆ. 

ಗುರುವಾರ ಮಾರುಕಟ್ಟೆಗೆ 600 ಕ್ವಿಂಟಲ್‌ ಈರುಳ್ಳಿ ಆವಕವಾಗಿದ್ದು, ಗರಿಷ್ಠ ದರ ಕ್ವಿಂಟಲ್‌ಗೆ ₹ 4500 ಇತ್ತು.

‘ಮಾರುಕಟ್ಟೆಗೆ ಈರುಳ್ಳಿ ಆವಕ ಬರುತ್ತಿಲ್ಲ. ಆವಕ ಹೆಚ್ಚಾದರೆ ಈರುಳ್ಳಿ ಸೇರಿ ತರಕಾರಿ ಬೆಲೆ ಇಳಿಕೆಯಾಗಬಹುದು’ ಎಂದು ವ್ಯಾಪಾರಿ ಶಬ್ಬೀರ್‌ ಹೇಳಿದರು.

‘ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಕಾರಣ ಈರುಳ್ಳಿ ಇಳುವರಿ ಕಡಿಮೆಯಾಗಿದೆ. ಇದರಿಂದ ಬೆಲೆ ದಿಢೀರ್ ಹೆಚ್ಚಳವಾಗಿದೆ. ನಾವೂ ಹೆಚ್ಚಿಗೆ ದರ ನೀಡಿ ಖರೀದಿಸಬೇಕು’ ಎಂದರು ವ್ಯಾಪಾರಿ ಶ್ರೀನಿವಾಸ.

‘ದಸರಾ ಹಬ್ಬ ಇದೆ. ಈರುಳ್ಳಿ ಬೆಲೆ ಏರಿಕೆಯಾಗಿದೆ. ಎಲ್ಲಿ ಕೇಳಿದರೂ ಬೆಲೆ ಹೆಚ್ಚು. ಏನು ಮಾಡುವುದು ಎಂದು ಅನಿವಾರ್ಯವಾಗಿ ಸ್ವಲ್ಪ ಕಡಿಮೆ ಮಾಡಿ ಖರೀದಿಸಿದ್ದೇನೆ’ ಎಂದು ವಿನೋಬನಗರದ ಶಂಕರ ಹೇಳಿದರು.

‘ರಾಜ್ಯದಲ್ಲಿ ಈರುಳ್ಳಿ ಕೊಯ್ಲು ಸಂದರ್ಭದಲ್ಲೇ ಬಿಡದೆ ಮಳೆ ಸುರಿಯಿತು. ಇದರಿಂದ ಬೆಳೆ ಸಂಪೂರ್ಣ ಕೊಳೆತುಹೋಯಿತು. ಅಲ್ಲದೇ ಹೈಬ್ರಿಡ್ ಈರುಳ್ಳಿ ರಾತ್ರಿ ಕಿತ್ತುಹಾಕಿದರೆ ಬೆಳಿಗ್ಗೆ ಮೊಳಕೆ ಒಡೆಯುತ್ತದೆ. ಇವು ಬೇಗ ಕೊಳೆಯುತ್ತವೆ’ ಎಂದು ಎಪಿಎಂಸಿ ನಿರ್ದೇಶಕ, ವ‌ರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜ್ ವಿವರಿಸಿದರು.

‘20 ಎಕರೆಯಲ್ಲಿ ಈರುಳ್ಳಿ ಹಾಕಿದ್ದೆ. 4 ಎಕರೆಯ ‌ಈರುಳ್ಳಿ ಬೆಳೆ ಕಿತ್ತಿದ್ದೆ. ಎಲ್ಲವೂ ಮಳೆಯಿಂದ ‌ಕೊಳೆತುಹೋಗಿದೆ. ಮತ್ತೆ ಮಳೆ ಬಂದರೆ ಉಳಿದ ಎಕರೆಯ ಬೆಳೆಯೂ ಹಾಳಾಗುತ್ತದೆ’ ಎಂದು ಜಗಳೂರಿನ ರೈತ ಜಗನ್ನಾಥ ಬೇಸರಿಸಿದರು.  

‘ಮಳೆಯಿಂದ ಈರುಳ್ಳಿ ಬೆಳೆ ನಷ್ಟವಾಗಿದೆ. ಇದರಿಂದ ಮಾರುಕಟ್ಟೆಗೆ ಬರುತ್ತಿರುವ ಆವಕ ಕಡಿಮೆಯಾಗಿದೆ. ಎಲ್ಲ ತರಕಾರಿ ಬೆಳೆಗಳ ಸ್ಥಿತಿಯೂ ಇದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಕೆ.ಸಿ. ದೊರೆಸ್ವಾಮಿ ತಿಳಿಸಿದರು.

ಕೊಳೆತ ಈರುಳ್ಳಿಗೂ ಬೇಡಿಕೆ

‘ಸ್ವಲ್ಪ ಕೊಳೆತ ಈರುಳ್ಳಿಯನ್ನೂ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ. ಯಾವುದನ್ನೂ ಬಿಡುತ್ತಿಲ್ಲ. ಅಷ್ಟೊಂದು ಕೊರತೆಯಾಗಿದೆ. ಎಲ್ಲೂ ಇಳುವರಿ ಇಲ್ಲ. ಬಂದ ಬೆಳೆಯೂ ಮಳೆಗೆ ಸಿಕ್ಕಿ ಕೊಳೆತಿದೆ. ಮನೆ ಮನೆಗೆ ಕೇಳಿಕೊಂಡು ಬಂದು ಖರೀದಿಸುತ್ತಿದ್ದಾರೆ. ರಾಣೆಬೆನ್ನೂರು, ಹಾವೇರಿ, ಶಿವಮೊಗ್ಗ ಸೇರಿ ಬೇರೆ ಜಿಲ್ಲೆಗಳ ವ್ಯಾಪಾರಿಗಳು ಬಂದು ಖರೀದಿಸುತ್ತಿದ್ದಾರೆ’ ಎಂದು ನ್ಯಾಮತಿಯ ರೈತ ಡೇರಿ ಶಿವರಾಜ್ ‘ಪ್ರಜಾವಾಣಿ’ಗೆ‌ ತಿಳಿಸಿದರು.

‘ಮಳೆಯಿಂದ ಶೇ 90ರಷ್ಟು ಈರುಳ್ಳಿ ಬೆಳೆ ಹಾಳಾಗಿದೆ. ಶೇ 80ರಷ್ಟು ಇಳುವರಿ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆಯಾಗಿದೆ. ಚಿಕ್ಕ ಗಾತ್ರದ ಈರುಳ್ಳಿಯನ್ನು ಕೆ.ಜಿಗೆ ₹ 20ರಂತೆ, ದೊಡ್ಡ ಗಾತ್ರದ ಈರುಳ್ಳಿಯನ್ನು ₹ 40ರಂತೆ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ. ಆದರೆ ಇದರಲ್ಲಿ ರೈತರಿಗೆ ಲಾಭ ಇಲ್ಲ. ಅನಿವಾರ್ಯವಾಗಿ ಮಾರಾಟ ಮಾಡುತ್ತಿದ್ದೇವೆ’ ಎಂದು ಅವರು ಬೇಸರದಿಂದಲೇ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು