ಶನಿವಾರ, ಮೇ 8, 2021
19 °C

ಮೈಸೂರು ಸಿಲ್ಕ್‌ ಶೋರೂಂ ಎತ್ತಂಗಡಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮೈಸೂರು, ಬೆಂಗಳೂರು ಬಿಟ್ಟರೆ ದಾವಣಗೆರೆಯಲ್ಲಿ ಮಾತ್ರ ಮೈಸೂರು ಸಿಲ್ಕ್‌ ಶೋರೂಂ ಇದೆ. ಲಾಭದಲ್ಲಿ ನಡೆಯುತ್ತಿರುವಾಗಲೇ ಈ ಮಳಿಗೆಯನ್ನು ಎತ್ತಂಗಡಿ ಮಾಡಲು ನಿರ್ಧರಿಸಿರುವುದು ಖಂಡನೀಯ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್‌ ವಿರೋಧ ವ್ಯಕ್ತಪಡಿಸಿದರು.

‘ನಾಲ್ವಡಿ ಕೃಷ್ಣರಾಜ ಒಡೆಯರು 1912ರಲ್ಲಿ ಮೈಸೂರಿನಲ್ಲಿ ರೇಷ್ಮೆ ನೆಯ್ಗೆ ಕಾರ್ಖಾನೆಯನ್ನು ಸ್ಥಾಪಿಸಿದ್ದರು. 2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಕೆಎಸ್‌ಐಸಿ ಅಧ್ಯಕ್ಷನಾಗಿದ್ದ ನಾನು ಆಗಿನ ಸಚಿವ ಶಾಮನೂರು ಶಿವಶಂಕರಪ್ಪ ಮತ್ತು ಶಾಸಕರಾಗಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಸಹಕಾರದಲ್ಲಿ ದಾವಣಗೆರೆಯಲ್ಲಿ ಮಳಿಗೆ ಆರಂಭಿಸಿದ್ದೆ. ಸಿದ್ದರಾಮಯ್ಯ ಅವರೇ ಉದ್ಘಾಟಿಸಿದ್ದರು. ಅಲ್ಲಿಂದ 2020ರ ಮಾರ್ಚ್‌ 31ರ ವರೆಗೆ ಲಾಭದಾಯಕ ವ್ಯಾಪಾರ ಮಾಡಿಕೊಂಡು ಬಂದಿದೆ. ಈಗ ಏಕಾಏಕಿ ಮುಚ್ಚಲು ಕೆಎಸ್‌ಐಸಿ ಹೊರಟಿರುವುದು ಸರಿಯಲ್ಲ ಎಂದು ತಿಳಿಸಿದರು.

ಮಳಿಗೆ ಮುಚ್ಚಲು ಪ್ರಯತ್ನಿಸಿದರೆ ಮಳಿಗೆಯ ಮುಂದೆಯೇ ಮಹಿಳಾ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮಹಿಳಾ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್‌ ಎಚ್ಚರಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಹೊಸ ಯೋಜನೆ ಆರಂಭಿಸಿಲ್ಲ. ಆದರೆ ಸರ್ಕಾರಿ ಸ್ವಾಮ್ಯದಲ್ಲಿರುವುದನ್ನು ಮಾರಾಟ ಮಾಡುವುದು, ಮುಚ್ಚುವುದೇ ಅವರ ಸಾಧನೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ ಟೀಕಿಸಿದರು.

ಮಳಿಗೆ ಮುಚ್ಚುವ ಮೂಲಕ ಅಲ್ಲಿರುವ ಉದ್ಯೋಗಿಗಳನ್ನು ನಿರುದ್ಯೋಗಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಪಾಲಿಕೆ ಸದಸ್ಯ ಕೆ. ಚಮನ್‌ ಸಾಬ್‌, ಮಳಿಗೆಗಳನ್ನು ಹೆಚ್ಚು ಮಾಡಲು ಪ್ರಯತ್ನಿಸುವುದು ಬಿಟ್ಟು ಮುಚ್ಚಲು ಹೊರಡುವುದು ಸರಿಯಾದುದಲ್ಲ ಎಂದು ಕಾಂಗ್ರೆಸ್‌ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ ತಿಳಿಸಿದರು. ಸರ್ಕಾರ ನಾಚಿಕೆಗೇಡಿನ ಕ್ರಮ ಕೈಗೊಳ್ಳುತ್ತಿದೆ ಎಂದು ಸಯ್ಯದ್‌ ಚಾರ್ಲಿ ಟೀಕಿಸಿದರು.

ಮಹಿಳೆಯರು ಯಾವುದೇ ಪೂಜೆಗೆ ರೇಷ್ಮೆ ಸೀರೆ ಉಡುತ್ತಾರೆ. ಮೈಸೂರಿಗೆ ಹೋಗಿ ಬರುವ ವೆಚ್ಚದಲ್ಲಿ ಇಲ್ಲಿ ಸೀರೆಯೇ ಸಿಗುತ್ತಿತ್ತು. ಲಾಭದಲ್ಲಿ ಇರುವ ಮಳಿಗೆ ಮುಚ್ಚಬಾರದು ಎಂದು ಮಹಿಳಾ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಷ್ಮಾ ಪಾಟೀಲ್, ದಾವಣಗೆರೆ ದಕ್ಷಿಣ ಅಧ್ಯಕ್ಷೆ ಶುಭಮಂಗಳ ಆಗ್ರಹಿಸಿದರು.

ಉತ್ತರ ಕ್ಷೇತ್ರದ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಾಜೇಶ್ವರಿ ಅವರೂ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು