ಬುಧವಾರ, ಮೇ 25, 2022
29 °C

ಬಯಲುಶೌಚ ಮುಕ್ತ: ವಾಸ್ತವಕ್ಕೆ ದೂರ

ಡಿ.ಕೆ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮನೆಯಲ್ಲಿ ಶೌಚಾಲಯವಿದ್ದರೂ ಜನರು ಬಯಲಿಗೆ ಹೋಗುವುದು ತ‌ಪ್ಪಿಲ್ಲ. ಇಂದಿಗೂ ಕೆಲವು ಗ್ರಾಮಗಳಲ್ಲಿ ತಂಬಿಗೆ ಹಿಡಿದು ತೋಟಕ್ಕೆ ಹೋಗುವವರ ಸಂಖ್ಯೆ ಕಡಿಮೆಯೇನಿಲ್ಲ. ಬೈಕ್ ಏರಿ ಜಮೀನಿನಲ್ಲಿ ಶೌಚ ಮಾಡಿ ಮನೆಗೆ ಬರುವವರೂ ಇದ್ದಾರೆ. ಗ್ರಾಮೀಣ ಭಾಗಗಳಲ್ಲಿ ಈ ಪರಿಸ್ಥಿತಿಯಾದರೆ, ನಗರದ ಎಷ್ಟೋ ಕೊಳೆಗೇರಿಗಳಲ್ಲಿ ಶೌಚಾಲಯವಿಲ್ಲ.

ಜಿಲ್ಲೆಯಲ್ಲಿ ಶೇ 75–80ರಷ್ಟು ಶೌಚಾಲಯಗಳು ಮಾತ್ರ ಬಳಕೆಯಾಗುತ್ತಿದೆ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಿದ್ದಾರೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳು ಸೌದೆ ತುಂಬಲು, ಕುರಿ, ಮೇಕೆ, ಕೋಳಿಗಳನ್ನು ಕಟ್ಟಿ ಹಾಕಲು ಮನೆಯ ಸರಂಜಾಮುಗಳನ್ನು ಇಡಲು ಬಳಕೆಯಾಗುತ್ತಿವೆ.

2012ರ ಬೇಸ್‌ಲೈನ್ ಸರ್ವೆ ಪ್ರಕಾರ ಜಿಲ್ಲೆಯಲ್ಲಿ 2.82 ಲಕ್ಷ ಕುಟುಂಬಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 1.08 ಲಕ್ಷ ಕುಟುಂಬಗಳಿಗೆ ಮಾತ್ರ ಶೌಚಾಲಯ ಇದ್ದವು. ಉಳಿದ 1.74 ಲಕ್ಷ ಕುಟುಂಬಗಳಿಗೆ ಶೌಚಾಲಯವಿರಲಿಲ್ಲ. 2017ರ ವೇಳೆಗೆ ಈ ಎಲ್ಲಾ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದುವ ಮೂಲಕ ಬಹಿರ್ದೆಸೆ ಶೌಚಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಯಿತು.

‘ಹೆಚ್ಚುವರಿಯಾಗಿದ್ದ 11 ಸಾವಿರ ಕುಟುಂಬಗಳಿಗಾಗಿ 2021ರ ಜನವರಿ ವೇಳೆಗೆ ಶೌಚಾಲಯಗಳನ್ನು ನಿರ್ಮಿಸಲಾಯಿತು. ಸ್ವಚ್ಛ ಭಾರತ ಎರಡನೇ ಹಂತದಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಯಾದ ಶೌಚಾಲಯ ಹೊಂದಿಲ್ಲದೇ ಇರುವ 3,500 ಕುಟುಂಬಗಳಲ್ಲಿ 2,379 ಕುಟುಂಬಗಳಲ್ಲಿ ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿದ್ದು, 1,049 ನಿರ್ಮಾಣ ಹಂತದಲ್ಲಿವೆ. ಮಾರ್ಚ್ ಕೊನೆಯ ವೇಳೆಗೆ ಮುಗಿಯುವ ಗುರಿ ಇದ್ದು, ಇದು ಮುಗಿದರೆ ಜಿಲ್ಲೆಯಲ್ಲಿರುವ ಎಲ್ಲ ಕುಟುಂಬಗಳು ಶೌಚಾಲಯ ಹೊಂದುತ್ತವೆ. ಕುಟುಂಬಗಳು ಹೆಚ್ಚುತ್ತಾ ಹೋದಂತೆ ಶೌಚಾಲಯ ನಿರ್ಮಾಣಕ್ಕೂ ಅವಕಾಶ ನೀಡಲಾಗುತ್ತದೆ’ ಎನ್ನುತ್ತಾರೆ ಸ್ವಚ್ಛ ಭಾರತ್ ಮಿಷನ್‌ನ ಸಂಚಾಲಕ ಚಂದನ್.

‘ಶೌಚಾಲಯ ಬಳಕೆ ಕುರಿತು ಮಾಹಿತಿ, ಶಿಕ್ಷಣ ಹಾಗೂ ಸಂವಹನಗಳ (ಐಇಸಿ) ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಶೌಚಾಲಯ ನಿರ್ಮಾಣಕ್ಕಾಗಿ ಸಾಮಾನ್ಯ ವರ್ಗದವರಿಗೆ ₹12 ಸಾವಿರ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ 15 ಸಾವಿರ ನೀಡಲಾಗುತ್ತಿದೆ. 3 ಸಾವಿರ ಎಸ್‌ಸಿಟಿ ಟಿಪಿಎಸ್ ಹಣ ಬಳಕೆ ಮಾಡುವ ಉದ್ದೇಶದಿಂದ ಇದನ್ನು ನೀಡಲಾಗುತ್ತಿದೆ’ ಎಂದು ಹೇಳುತ್ತಾರೆ.

‘ವೈಯಕ್ತಿಕ ಶೌಚಾಲಯ ಹೊಂದಿಲ್ಲದೇ ಇರುವವರಿಗೆ ಸಮುದಾಯ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶವಿದ್ದು, ಶೌಚಾಲಯ ನಿರ್ವಹಣೆಯನ್ನು ಮನೆಯವರೇ ಮಾಡಬೇಕು. ಅಲ್ಲದೇ ಸರ್ಕಾರಿ ಜಾಗವಿರಬೇಕು. ಜಿಲ್ಲೆಯಲ್ಲಿ ಹೊನ್ನಾಳಿ ತಾಲ್ಲೂಕಿನ ಕಮ್ಮಾರಗಟ್ಟೆ, ದಾವಣಗೆರೆ ತಾಲ್ಲೂಕಿನ ಹೆಬ್ಬಾಳು, ಚನ್ನಗಿರಿಯ ನಲ್ಲೂರು, ಹರಿಹರದ ಭಾನುವಳ್ಳಿಗಳಲ್ಲಿ ಮಾತ್ರ ಸಮುದಾಯ ಶೌಚಾಲಯಗಳಿವೆ’ ಎಂದು ಮಾಹಿತಿ ನೀಡುತ್ತಾರೆ.

‘2016–19 ಅವಧಿಯಲ್ಲಿ ನಗರದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಗರದಲ್ಲಿ 3,669 ಶೌಚಾಲಯಗಳು ಇವೆ. 25 ಸಾರ್ವಜನಿಕ ಶೌಚಾಲಯಗಳು ಇವೆ’ ಎಂದು ನಗರಪಾಲಿಕೆ ತಾಂತ್ರಿಕ ಸಹಾಯಕ ಜಗದೀಶ್ ಮಾಹಿತಿ ನೀಡುತ್ತಾರೆ.

ಕಣ್ಣು, ಕಿವಿ ಇಲ್ಲದಂತೆ ವರ್ತಿಸುವ ಅಧಿಕಾರಿಗಳು: ‘ಮಟ್ಟಿಕಲ್ ಕೊಳೆಗೇರಿ ಪ್ರದೇಶಗಳಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರು ಶಾಲೆಗೆ ಸಿಸಿಟಿವಿ ಕ್ಯಾಮೆರಾ
ಅಳವಡಿಸಿದ್ದಾರೆ. ಹೀಗಾಗಿ ಅಲ್ಲಿನವರಿಗೆ ಶೌಚಕ್ಕೆ ಹೋಗಲು ತೊಂದರೆಯಾಗಿದೆ. ಅವರು ಶೌಚ ಮಾಡಬೇಕೆಂದರೆ ಜಗಳೂರು ಬಸ್‌ ನಿಲ್ದಾಣದ ಬಳಿಗೆ ಬರಬೇಕು. ಇದರಿಂದ ವೃದ್ಧರಿಗೆ ತೊಂದರೆಯಾಗಿದೆ. ನಗರದ ದನವಿನ ಓಣಿಯಲ್ಲಿ 34 ಕುಟುಂಬಗಳು ಇದ್ದು, ಯಾರೊಬ್ಬರಿಗೂ ವೈಯಕ್ತಿಕ ಶೌಚಾಲವಿಲ್ಲ. ಕತ್ತಲಾಗುತ್ತಿದ್ದಂತೆ ಶೌಚಕ್ಕೆ ಹೋಗಲು ಪಕ್ಕದಲ್ಲೇ ಇರುವ ಜಾಲಿ ಗಿಡಗಳನ್ನು ಆಶ್ರಯಿಸಿದ್ದಾರೆ. ಎಸ್‌ಸಿಎಸ್‌ಟಿ ಜಾಗೃತ ಸಮಿತಿಯ ಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಾರೆ’ ಎಂದು ಕಾರ್ಮಿಕ ಮುಖಂಡ ಆವರಗೆರೆ ವಾಸು ಆರೋಪಿಸುತ್ತಾರೆ.

‘ಚಿಕ್ಕನಹಳ್ಳಿ ಕೊಳೆಗೇರಿ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯವಿದ್ದರೂ ನೀರಿಲ್ಲ’ ಎನ್ನುತ್ತಾರೆ.

ಕೋಟ್‌...

ನಮ್ಮ ಮನೆಗಳಲ್ಲಿ ಶೌಚಾಲಯವನ್ನು ಸರ್ಕಾರದಿಂದ ಕಟ್ಟಿಸಿಕೊಟ್ಟಿಲ್ಲ. ರಾತ್ರಿಯಾಗುವುದನ್ನೇ ಕಾಯಬೇಕು. ಕೊಳೆಗೇರಿ ಪಕ್ಕದಲ್ಲಿಯೇ ಹುಡುಗುರು ಕ್ರಿಕೆಟ್ ಆಡುತ್ತಾರೆ. ಇದರಿಂದ ಮಹಿಳೆಯರು ಶೌಚಕ್ಕೆ ಹೋಗಲು ತೊಂದರೆಯಾಗಿದೆ.

ಚಂದ್ರಪ್ಪ, ದನವಿನ ಓಣಿ ನಿವಾಸಿ

ಬಯಲು ಶೌಚದಿಂದ ಏನೆಲ್ಲಾ ರೋಗ–ರುಜಿನೆಗಳು ಬರುತ್ತವೆ ಎಂದು ಎಲ್ಲರಿಗೂ ಗೊತ್ತಿದೆ. ಸರ್ಕಾರ ಕೂಡ ಅವರಿಗೆ ಶೌಚಾಲಯ ಕಟ್ಟಿಸಿಕೊಳ್ಳಲು ಅನುದಾನ ಕೊಟ್ಟಿದೆ. ಆದರೂ ಈ ಅಭ್ಯಾಸವನ್ನು ಕೆಲವರು ಬಿಡುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಬೇಕಾದರೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಅವರಿಗೆ ಎಚ್ಚರಿಕೆ ನೀಡಬೇಕು.

ಬಿ.ಆರ್. ಮಹಮದ್ ನೂರುಲ್ಲಾ, ತುಂಗಭದ್ರಾ ಬಡಾವಣೆ ನಿವಾಸಿ, ಹೊನ್ನಾಳಿ

ದಾಖಲೆಯಲ್ಲಿ ಮಾತ್ರ ಬಯಲುಶೌಚ ಮುಕ್ತ

ಡಿ. ಶ್ರೀನಿವಾಸ್

ಜಗಳೂರು: ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಬಯಲು ಶೌಚ ಪದ್ಧತಿ ಜೀವಂತವಾಗಿದೆ.

ಐದಾರು ವರ್ಷದ ಹಿಂದೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ದೊಡ್ಡ ಪ್ರಮಾಣದಲ್ಲಿ ದಾಖಲೆಯಲ್ಲಿ ಮಾತ್ರ ಶೌಚಾಲಯಗಳು ನಿರ್ಮಾಣವಾಗಿವೆ. ಆದರೆ ವಾಸ್ತವದಲ್ಲಿ ಇಂದಿಗೂ ಕೈಯಲ್ಲಿ ಚೊಂಬು ಹಿಡಿದು ಊರ ಮಗ್ಗುಲಲ್ಲಿ ಬಹಿರ್ದೆಸೆ ಮಾಡುವುದು ನಿಂತಿಲ್ಲ.

ಜಿಲ್ಲೆಯನ್ನು ಬಯಲುಶೌಚ ಮುಕ್ತ ಎಂದು ಘೋಷಣೆ ಮಾಡಿರುವುದರಿಂದ ಹೊಸದಾಗಿ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯೂ ಇಲ್ಲವಾಗಿದೆ. ಹೊಸ ಮನೆ ಕಟ್ಟುವವರ ಪೈಕಿ ಪ್ರತಿ ಗ್ರಾಮಕ್ಕೆ ಗರಿಷ್ಠ  8 ಫಲಾನುಭವಿಗಳಿಗೆ ಮಾತ್ರ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಶೌಚಕ್ಕೆ ಬಯಲೇ ಗತಿ

ಎನ್‌.ಕೆ. ಆಂಜನೇಯ

ಹೊನ್ನಾಳಿ: ಹೊನ್ನಾಳಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೆಲವೊಂದು ನೂತನ ಬಡಾವಣೆಗಳಲ್ಲಿ ಶೌಚಕ್ಕಾಗಿ ಬಯಲಿಗೆ ಹೋಗುವುದು ತಪ್ಪಿಲ್ಲ. ನಗರದ ತುಂಗಭದ್ರಾ ಬಡಾವಣೆಗಳಲ್ಲಿ ಎರಡು ವಾರ್ಡ್‍ಗಳಿದ್ದು, ಅಲ್ಲಿನ ಬಹುತೇಕ ಜನರು ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದಾರೆ.

ಇತ್ತೀಚೆಗೆ ಪುರಸಭೆಗೆ ಸೇರ್ಪಡೆಗೊಂಡ ದೇವನಾಯಕನಹಳ್ಳಿ ವ್ಯಾಪ್ತಿಯಲ್ಲಿ ಬರುವ ಅಲೆಮಾರಿಗಳು, ಹಕ್ಕಿಪಿಕ್ಕಿ ಜನರು ಈ ಭಾಗದಲ್ಲಿ ಹತ್ತಾರು ವರ್ಷಗಳಿಂದಲೂ ಗುಡಿಸಲುಗಳಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಿರುವಾಗ ಅವರು ಶೌಚಾಲಯವನ್ನು ಕಟ್ಟಿಸಿಕೊಳ್ಳಲು ಹೇಗೆ ಸಾಧ್ಯ? ಇವರಿಗೆ ನೆಲೆ ಸಿಕ್ಕರೆ ಅವರಿಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಡಲಾಗುವುದು ಎನ್ನುತ್ತಾರೆ ಪುರಸಭಾ ಕಿರಿಯ ಎಂಜಿನಿಯರ್‌ ದೇವರಾಜ್.

ಮೂಢನಂಬಿಕೆಯಿಂದಾಗಿ ಬಯಲಿನತ್ತ...

ಡಿ.ಎಂ. ಹಾಲಾರಾಧ್ಯ

ನ್ಯಾಮತಿ: ನೂತನ ತಾಲ್ಲೂಕು ವ್ಯಾಪ್ತಿಯಲ್ಲಿ
17 ಗ್ರಾಮ ಪಂಚಾಯಿತಿಗಳು ಸೇರಿದ್ದು, ಇಂದಿಗೂ ಕೆಲವು ಗ್ರಾಮಗಳಲ್ಲಿ ಮೂಢ ನಂಬಿಕೆಯಿಂದ ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

‘ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳು ಪುರಸ್ಕಾರ ಪಡೆದಿವೆ. ಆದರೆ, ಗ್ರಾಮಗಳಲ್ಲಿ ಮನೆಗಳ ಸಂಖ್ಯೆ ಹೆಚ್ಚಾಗುವುದು, ಗುಡಿಸಲು ನಿವಾಸಿಗಳು, ಕೆಲವು ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗದ ಕೊರತೆಯಿಂದಾಗಿ ಕುಟುಂಬಗಳು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ’ ಎಂದು ನಾಗರಿಕ ಮಾಹಿತಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಡಿ.ಎಂ. ವಿಜೇಂದ್ರ ಮಹೇಂದ್ರಕರ, ರೈತ ಸಂಘದ ಅಧ್ಯಕ್ಷ ಹೊಸಮನೆ ಮಲ್ಲಿಕಾರ್ಜುನ ಹೇಳುತ್ತಾರೆ. ‘ಪ್ರತಿಯೊಂದು ಕುಟುಂಬದ ಮನೆಯಲ್ಲಿ ಶೌಚಾಲಯ ಹೊಂದುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಶೌಚಾಲಯ ನಿರ್ಮಾಣ ಅನುದಾನ ಫಲಾನುಭವಿಗಳಾದ ನವುಲೆ ಸುರೇಶ, ಕತ್ತಿಗೆ ವೀರೇಶ, ವೀರೇಂದ್ರಸ್ವಾಮಿ ಹೇಳುತ್ತಾರೆ.

ಚನ್ನಗಿರಿಯಲ್ಲಿ ಅಧಿಕಾರಿಗಳ ವೈಫಲ್ಯ

ಎಚ್.ವಿ. ನಟರಾಜ್

ಚನ್ನಗಿರಿ: ತಾಲ್ಲೂಕನ್ನು ಸಂಪೂರ್ಣವಾಗಿ ಬಯಲುಶೌಚ ಮುಕ್ತವನ್ನಾಗಿ ಮಾಡಲು ತಾಲ್ಲೂಕು ಮಟ್ಟದ ಅಧಿಕಾರಿಗಳು ವಿಫಲವಾಗಿರುವುದರಿಂದ ಕೆಲವರು ಶೌಚಕ್ಕೆ ಹೊರಗೆ ಹೋಗುತ್ತಿದ್ದಾರೆ.

‘ತಾಲ್ಲೂಕಿನ 61 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಇ–ಸ್ವಚ್ಛ ಭಾರತ್ ಯೋಜನೆ ಅಡಿ 67,600 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿ ಕೊಡಲಾಗಿದೆ. ಹೀಗೆಯೇ ಪ್ರತಿ ವರ್ಷ 1 ಸಾವಿರದಿಂದ 2 ಸಾವಿರ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿ ಕೊಡುತ್ತಿದ್ದರೂ ಬಯಲಿಗೆ ಹೋಗುವುದು ತಪ್ಪಿಲ್ಲ. ಜಾಗದ ಕೊರತೆಯಿಂದಾಗಿ ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್ ಮಾಹಿತಿ ನೀಡಿದರು.

‘ಸರ್ಕಾರಿ ಕಚೇರಿಗಳಲ್ಲಿ ಇರುವ ಶೌಚಾಲಯಗಳು ಒಳಗೆ ಹೋಗಲು ಸಾಧ್ಯವಾಗದಷ್ಟು ರೀತಿಯಲ್ಲಿ ಹದಗೆಟ್ಟು ಹೋಗಿವೆ. ಹೀಗಾಗಿ ಅನಿವಾರ್ಯವಾಗಿ ಹೊರಗಿನಿಂದ ಬಂದ ಸಾರ್ವಜನಿಕರು ಬಯಲು ಪ್ರದೇಶದಲ್ಲಿ ಶೌಚಾಲಯಗಳಿಗೆ ಹೋಗುವಂತಾಗಿದೆ’ ಎನ್ನುತ್ತಾರೆ ಬೆಳಲಗೆರೆ ಗ್ರಾಮದ ಸಿದ್ದಪ್ಪ.

ಬಯಲುಶೌಚ ಇನ್ನೂ ಇದೆ

ಇನಾಯತ್ ಉಲ್ಲಾ ಟಿ.

ಹರಿಹರ: ನಗರದ ಕೊಳೆಗೇರಿಗಳಲ್ಲಿ ಜನರಿಗೆ ಈಗಲೂ ‌ಬಯಲೇ ಶೌಚಾಲಯವಾಗಿದೆ.
ಇಲ್ಲಿನ ರೈಲ್ವೆ ನಿಲ್ದಾಣ ಸಮೀಪದ ಗೂಡ್ಸ್ ಶೆಡ್ ಸ್ಲಮ್‍ನ ಬಹುತೇಕ ನಿವಾಸಿಗಳಿಗೆ ರೈಲ್ವೆ ನಿಲ್ದಾಣ, ಮೀನು ಮಾರುಕಟ್ಟೆ ಹಿಂಭಾಗದ ಬಯಲೇ ಶೌಚಕ್ಕೆ ಆಶ್ರಯವಾಗಿದೆ. ಗೂಡ್ಸ್ ಶೆಡ್ ನಿವಾಸಿಗಳಿಗೆಂದು ನಗರಸಭೆಯಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಿದ್ದಾರೆ.

ಆದರೆ ನಿರ್ವಹಣೆ ಕೊರತೆ, ಕಳಪೆ ಕಾಮಗಾರಿ, ತೆರೆಯುವ ಅವಧಿಯ ಅಸಮರ್ಪಕತೆಯಿಂದಾಗಿ ಜನ ಇಲ್ಲಿಗೆ ಬರುತ್ತಿಲ್ಲ. ಕಳೆದ 4 ತಿಂಗಳಿಂದ ಇದಕ್ಕೆ ಬೀಗ ಹಾಕಲಾಗಿದೆ. ಹೀಗಾಗಿ ಇಲ್ಲಿನ ಜನರಿಗೆ ಬಯಲೇ ಶೌಚಾಲಯವಾಗಿದೆ. ಇನ್ನು ಭಾರತ್ ಆಯಿಲ್ ಕಾಂಪೌಂಡ್‍ನ ಪೌರಕಾರ್ಮಿಕರ ಕಾಲೊನಿಯ ಶೇ 80ಕ್ಕಿಂತ ಹೆಚ್ಚು ನಿವಾಸಿಗಳೂ ಬಯಲನ್ನೇ ಆಶ್ರಯಿಸಿದ್ದಾರೆ. ಡಿಆರ್‌ಎಂ ಕಾಲೇಜು ಸಮೀಪದ ಮಹಾತ್ಮ ಗಾಂಧಿ, ಗಾಂಧಿನಗರ ಬೆಸ್ಕಾಂ ಪಕ್ಕದ ಸ್ಲಮ್ ಸೇರಿ ಬೆಂಕಿನಗರ, ಕಾಳಿದಾಸನಗರ ಭಾಗದಲ್ಲಿ ಬಯಲು ಶೌಚಾಲಯ ಸಾಮಾನ್ಯವೆಂಬಂತೆ ಆಗಿದೆ.

ದೇವರ ಬೆಳಕೆರೆಗೆ ಬೇಕು ಶೌಚಾಲಯ

ಮಲೇಬೆನ್ನೂರು: ಪಟ್ಟಣದ ಆಶ್ರಯ ಕಾಲೊನಿ, ದೇವರಬೆಳಕೆರೆ, ಕುಂಬಳೂರು, ಹರಳಹಳ್ಳಿ, ಕೊಕ್ಕನೂರು, ವಾಸನ ಭಾಗದಲ್ಲಿ ಕೆಲವೇ ಕೆಲವು ಮಂದಿ ಬಯಲನ್ನು ಮಲ ವಿಸರ್ಜನೆಗೆ ಬಳಸುತ್ತಿದ್ದಾರೆ.

‘ದೇವರಬೆಳಕೆರೆಗೆ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದು, ಅಲ್ಲಿ ಶುಚಿತ್ವ ಇಲ್ಲವಾಗಿದೆ. ಅಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು’ ಎಂಬುದು ನಿವಾಸಿಗಳ ಆಗ್ರಹ.

‘ಮಲೇಬೆನ್ನೂರು ಪಟ್ಟಣದಲ್ಲಿ ಬಯಲುಮುಕ್ತ ಶೌಚಾಲಯ ವಾರ್ಡ್ ಎಂದು ಘೋಷಣೆ ಮಾಡಲು ಶೌಚಾಲಯ ನಿರ್ಮಿಸಿಕೊಳ್ಳದ ಮನೆ ಮುಂದೆ ಧರಣಿ ನಡೆಸಿ ಮನವೊಲಿಸಿದ ಘಟನೆ 2 ವರ್ಷದ ಹಿಂದೆ ನಡೆದಿತ್ತು’ ಎಂದು ಪರಿಸರ ಎಂಜಿನಿಯರ್ ಉಮೇಶ್ ಘಟನೆ ನೆನಪಿಸಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಬಯಲುಶೌಚದ ಬಗ್ಗೆ ಜಾಗೃತಿ ಮೂಡಿಸಲು ಸಂಘಟನೆ, ಜನಪ್ರತಿನಿಧಿಗಳ ಸಹಯೋಗದಲ್ಲಿ ಸಾಕಷ್ಟು ಪ್ರಯತ್ನ ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ’ ಎಂದು ಹರಳಹಳ್ಳಿ ಪಿಡಿಒ ಶಾಂತಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.