ಗುರುವಾರ , ಆಗಸ್ಟ್ 5, 2021
22 °C
ಯಂತ್ರಶ್ರೀ ಪದ್ಧತಿ ಅನುಸರಿಸಿದ ರೈತ ಬಂಗೇರ ರುದ್ರೇಶ್‌ ಸಾಧನೆ

ಯಂತ್ರಶ್ರೀ ಪದ್ಧತಿಯಲ್ಲಿ ಭತ್ತದ ನಾಟಿ ಮಾಡಿ ಅಭೂತಪೂರ್ವ ಯಶಸ್ಸು

ಎನ್‌.ವಿ. ರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಬಸವಾಪಟ್ಟಣ: ಇಲ್ಲಿನ ರೈತ ಬಂಗೇರ ರುದ್ರೇಶ್‌ ಈ ಬಾರಿಯ ಬೇಸಿಗೆ ಹಂಗಾಮಿನಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಜಾರಿಗೆ ತಂದಿರುವ ಯಂತ್ರಶ್ರೀ ಪದ್ಧತಿಯಲ್ಲಿ ಭತ್ತದ ನಾಟಿ ಮಾಡಿ ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ.

ರುದ್ರೇಶ್‌ ಅವರು ತಮ್ಮ 2.5 ಎಕರೆಯಲ್ಲಿ ಯಂತ್ರಶ್ರೀ ಪದ್ಧತಿಯಲ್ಲಿ ಭತ್ತದ ಸಸಿಗಳನ್ನು ಟ್ರೇಗಳಲ್ಲಿ ಬೆಳೆಸಿ, ಯಂತ್ರದ ಮೂಲಕ ನಾಟಿ ಮಾಡಿದ್ದು, ಎಕರೆಗೆ 40 ಕ್ವಿಂಟಲ್‌ ಇಳುವರಿ ಪಡೆದು ಇತರರಿಗೆ ಮಾದರಿಯಾಗಿದ್ದಾರೆ.

ಸಾಂಪ್ರದಾಯಿಕ ಪದ್ಧತಿಯಲ್ಲಿ ಎಕರೆಗೆ 30 ಕೆ.ಜಿ. ಭತ್ತದ ಬೀಜ ಬಳಕೆಯಾದರೆ, ಈ ಪದ್ಧತಿಯಲ್ಲಿ ಎಕರೆಗೆ 12 ಕೆ.ಜಿ. ಸಾಕು. ಪ್ಲಾಸ್ಟಿಕ್‌ ಟ್ರೇಗಳಲ್ಲಿ ಸಸಿಗಳನ್ನು ಬೆಳೆಸಿ ಯಂತ್ರದ ಮೂಲಕ ನಾಟಿ ಮಾಡಿದ್ದೇನೆ. ಸಾಮಾನ್ಯ ಪದ್ಧತಿಯಲ್ಲಿ ಎಕರೆಗೆ ₹ 22 ಸಾವಿರ ಖರ್ಚು ಬಂದರೆ ಇದರಲ್ಲಿ ಎಕರೆಗೆ ₹ 10 ಸಾವಿರ ಖರ್ಚಾಗಿದೆ. ಸಾಂಪ್ರದಾಯಿಕ ನಾಟಿ ಪದ್ಧತಿಗಿಂತ ಅರ್ಧದಷ್ಟು ಹಣದ ಉಳಿತಾಯವಾಗಿದೆ. ಈ ಪದ್ಧತಿಯಲ್ಲಿ ಸಸಿಗಳನ್ನು ಸಾಲು ಸಾಲಾಗಿ ನಾಟಿ ಮಾಡುವುದರಿಂದ ಸಸಿಗಳ ಮಧ್ಯದಲ್ಲಿ ಸ್ಥಳಾವಕಾಶ ದೊರೆತು ಸೂರ್ಯನ ಕಿರಣಗಳು ನೇರವಾಗಿ ಬೆಳೆಯ ಮೇಲೆ ಬೀಳುವುದರಿಂದ ಗಾಳಿ ಬೆಳಕು ಸಮೃದ್ಧವಾಗಿ ದೊರೆತು, ಬೆಳೆ ಉತ್ತಮವಾಗಿ ಬೆಳೆಯಲು ಅನುಕೂಲವಾಗಿದೆ ಎಂದು ರುದ್ರೇಶ್‌ ತಿಳಿಸಿದರು.

ಎಕರೆಗೆ ಕೇವಲ 1.5 ಕ್ವಿಂಟಲ್‌ ರಾಸಾಯನಿಕ ಗೊಬ್ಬರದ ಬಳಕೆ ಮಾಡಲಾಗಿದೆ. ಸಾವಯವ ಗೊಬ್ಬವನ್ನೂ ಬಳಸಲು ಅವಕಾಶವಿದೆ. ಅಲ್ಲದೇ ಈ ಪದ್ಧತಿಯಲ್ಲಿ ಬೆಳೆಗೆ ರೋಗ, ಕೀಟ ಮತ್ತು ಕಳೆಯ ಬಾಧೆ ತುಂಬಾ ಕಡಿಮೆ. ಸಾಂಪ್ರದಾಯಿಕ ಪದ್ಧತಿಗಿಂತ ಭತ್ತದ ಹುಲ್ಲು ಹೆಚ್ಚಾಗಿ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಕೈಯಿಂದ ನಾಟಿ ಮಾಡುವ ಕೂಲಿಕಾರರ ಅಭಾವ ಹೆಚ್ಚಾಗಲಿದ್ದು, ಯಂತ್ರ ಶ್ರೀ ಪದ್ಧತಿಯನ್ನು ಭತ್ತ ಬೆಳೆಯುವ ಎಲ್ಲಾ ರೈತರೂ ಅನುಸರಿಸಿದರೆ ಕಡಿಮೆ ವೆಚ್ಚದಲ್ಲಿ ಅಧಿಕ ಬೆಳೆ ತೆಗೆಯಬಹುದು ಎನ್ನುತ್ತಾರೆ ಅವರು.

ಚನ್ನಗಿರಿ ತಾಲ್ಲೂಕಿನಲ್ಲಿ ಬೇಸಿಗೆ ಹಂಗಾಮಿನಲ್ಲಿ 320 ಎಕರೆ ಪ್ರದೇಶದಲ್ಲಿ 40 ಜನ ರೈತರು ಯಂತ್ರಶ್ರೀ ಪದ್ಧತಿಯಲ್ಲಿ ಭತ್ತದ ನಾಟಿ ಮಾಡಿ ಉತ್ತಮ ಫಸಲು ಪಡೆದಿದ್ದಾರೆ. ಬಂಗೇರ ರುದ್ರೇಶ್‌ ಅವರ ಈ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದು ಯೋಜನೆಯ ಕೃಷಿ ಅಧಿಕಾರಿ ಕೆ. ಹನುಮಂತಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು