ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಪರೀಕ್ಷಾ ಭಯ ಹೋಗಲಾಡಿಸಲು ಫೋನ್‌ ಇನ್‌

ವಿದ್ಯಾರ್ಥಿಗಳ ಆತಂಕ ನಿವಾರಣೆಗೆ ಪ್ರಯತ್ನ, ವಿಷಯ ತಜ್ಞರಿಂದ ಮಾಹಿತಿ
Last Updated 18 ಜನವರಿ 2020, 10:30 IST
ಅಕ್ಷರ ಗಾತ್ರ

ದಾವಣಗೆರೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ತಯಾರಿ, ವಿದ್ಯಾರ್ಥಿಗಳ ಗೊಂದಲ, ಪರೀಕ್ಷಾ ಭಯ ಹೋಗಲಾಡಿಸಲು ಫೋನ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ವಿಷಯಗಳ ಬಗ್ಗೆ ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ಗೊಂದಲಗಳನ್ನು ವಿಷಯ ತಜ್ಞರಿಗೆ ಫೋನ್‌ ಮಾಡಿ ಪರಿಹರಿಸಿಕೊಳ್ಳಬಹುದು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಜಿಲ್ಲಾ ಶಾಖೆ, ಉಪ ನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿಫೋನ್‌ ಇನ್‌ ಶುಕ್ರವಾರದಿಂದ ಆರಂಭವಾಗಿದೆ. ವಿದ್ಯಾರ್ಥಿಗಳು ಶುಕ್ರವಾರದಿಂದ ಆಯಾ ವಿಷಯಗಳ ಪರೀಕ್ಷಾ ದಿನಾಂಕದವರೆಗೆ ಕರೆ ಮಾಡಿ ತಮ್ಮ ಸಮಸ್ಯೆ, ಪರೀಕ್ಷಾ ಗೊಂದಲ ಬಗೆಹರಿಸಿಕೊಳ್ಳಬಹುದು.

ನಗರದ ಪಿ.ಜೆ. ಬಡಾವಣೆಯ ಬಾಪೂಜಿ ಪ್ರೌಢಶಾಲೆಯಲ್ಲಿ ಶುಕ್ರವಾರ ಫೋನ್‌ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ, ‘ಕಳೆದ ವರ್ಷ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ 15ರಿಂದ 9ನೇ ಸ್ಥಾನಕ್ಕೆ ಏರಿಕೆ ಕಂಡಿತ್ತು. ಈ ವರ್ಷ ಮೊದಲ ಐದು ಸ್ಥಾನಗಳಲ್ಲಿ ಬರಲು ಶಿಕ್ಷಕರು ಶ್ರಮಿಸಬೇಕು.ಫಲಿತಾಂಶಕ್ಕೆ ಇನ್ನು ಕೇವಲ 69 ದಿನಗಳು ಉಳಿದಿವೆ. 29,500 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಅವರೆಲ್ಲರೂ ನಮ್ಮ ಮಕ್ಕಳು ಎಂದು ಭಾವಿಸಿ ಶಿಕ್ಷಕರು ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಗಳಿಂದ ಹಿಡಿದು ಶಾಲಾ ಹಂತದವರೆಗೂ ಫಲಿತಾಂಶ ವೃದ್ಧಿಗೆ ಕೆಲಸ ಮಾಡಬೇಕಿದೆ.ಬೆಳಗಾವಿಯಲ್ಲಿ ಪ್ರಾಯೋಗಿಕವಾಗಿ ಕಳೆದ ವರ್ಷ ಶಿಕ್ಷಕರಿಂದ ಫೋನ್ ಇನ್ ಕಾರ್ಯಕ್ರಮ ನಡೆಸಲಾಗಿತ್ತು. ಈ ಬಾರಿ ಜಿಲ್ಲೆಯಲ್ಲೂ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಫೋನ್ ಮೂಲಕ ನೀಡುವ ಮಾಹಿತಿ ಪ್ರತಿಯೊಂದು ವಿದ್ಯಾರ್ಥಿಗೂ ತಲುಪಬೇಕು ಎಂದರು.

ಮಗುವಿಗೆ ಧೈರ್ಯ ಹಾಗೂ ಸ್ಫೂರ್ತಿ ತುಂಬಬೇಕು. ಮಾರ್ಗದರ್ಶನ ಮಾಡುವುದು ಪವಿತ್ರ ಹಾಗೂ ಸೂಕ್ಷ್ಮ ಕೆಲಸ. ಇದಕ್ಕೆ ತಾಳ್ಮೆ ಇರಬೇಕು.ಮಕ್ಕಳ ಮೇಲೆ ತುಂಬಾ ಒತ್ತಡ ಇರುತ್ತದೆ. ಇದರಿಂದ ಭಯಕ್ಕೆ ಗುರಿಯಾಗಿರುತ್ತಾರೆ. ಇದರಿಂದಾಗಿ ಮರೆವು ಹೆಚ್ಚಾಗುತ್ತದೆ. ಈ ಎಲ್ಲ ಆಂತಕಗಳನ್ನು ನಿವಾರಿಸಲು ಶಿಕ್ಷಕರು ಧೈರ್ಯ ತುಂಬಬೇಕು. ಯಾವುದೇ ವಿದ್ಯಾರ್ಥಿ ದಡ್ಡನಲ್ಲ. ಅವನನ್ನು ತಿದ್ದಿ ತೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಲಹೆ ನೀಡಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ನೆರವು ನೀಡುವ ಶಿಕ್ಷಕರು ತಮಗೆ ಬಂದ ಕರೆಗಳ ಕುರಿತ ವಿವರಗಳ ದಾಖಲೆಗಳನ್ನು ರೂಪಿಸಬೇಕು. ಇದರಿಂದ ಮಕ್ಕಳ ಕಲಿಕೆಯ ಕುರಿತು ತಿಳಿಯಲು ನೆರವಾಗುತ್ತದೆ.ಸಾಕಷ್ಟು ಮನೆಗಳಲ್ಲಿ ಪೋಷಕರು ಮಕ್ಕಳಿಗೆ ಮಾರ್ಗದರ್ಶನ ಮಾಡಲು ಸಮರ್ಥರಿರುವುದಿಲ್ಲ. ಹೀಗಾಗಿ ಮಕ್ಕಳ ಪೂರ್ಣ ಉಸ್ತುವಾರಿ ಶಿಕ್ಷರದ್ದೇ ಆಗಿರಬೇಕು. ಮುಂದಿನ ದಿನಗಳಲ್ಲಿ ಒತ್ತಡ ನಿವಾರಣೆಗಾಗಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವಾಧ್ಯಕ್ಷಕೃಷ್ಣಮೂರ್ತಿ ಶ್ರೇಷ್ಠಿ, ‘ಕಳೆದ ವರ್ಷ ಬೆಳಗಾವಿಯಲ್ಲಿ ಪ್ರಾಯೋಗಿಕವಾಗಿ ಕೈಗೊಂಡ ಫೋನ್ ಇನ್ ಕಾರ್ಯಕ್ರಮ ಉತ್ತಮ ಫಲಿತಾಂಶ ನೀಡಿತ್ತು. ದಾವಣಗೆರೆ ಜಿಲ್ಲೆಯಲ್ಲಿ 23 ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಫಲಿತಾಂಶ ಸುಧಾರಣೆಯ ಜೊತೆಗೆ, ಶಿಕ್ಷಕರ ಬಗ್ಗೆ ಸಮಾಜದಲ್ಲಿ ಗೌರವವೂ ಹೆಚ್ಚಾಗುವ ಕಾರ್ಯ ಇದಾಗಿದೆ’ ಎಂದು ಹೇಳಿದರು.

ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಚಿದಾನಂದ ಪಾಟೀಲ್‌, ‘ದಾವಣಗೆರೆ ಜಿಲ್ಲೆ ಈ ಬಾರಿ ಮೊದಲ ಐದು ಸ್ಥಾನಗಳ ಒಳಗೆ ಬರಬೇಕು. ಶಿಕ್ಷಣ ಕ್ಷೇತ್ರ ಅನ್ನ ನೀಡುವ ಕ್ಷೇತ್ರ. ಇಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಪೂರ್ಣ ಶ್ರದ್ಧೆಯಿಂದ ಮಕ್ಕಳಿಗೆ ನೆರವಾಗಬೇಕು’ ಎಂದು ಸಲಹೆ ನೀಡಿದರು.

ಶಿಕ್ಷಣ ಸಂಯೋಜಕ ನಿರಂಜನ ಮೂರ್ತಿ, ದಕ್ಷಿಣ ವಲಯ ಬಿಇಒ ಸಿದ್ದಪ್ಪ, ಬಿಇಒ ರಾಜೀವ, ವೃತ್ತಿ ಶಿಕ್ಷಕ ಸಂಘದ ರಾಮರಡ್ಡಿ, ಪ್ರಾಂಶುಪಾಲ ರವಿ, ಮುಬಾರಕ್‌ ಅಲಿ ಸೇರಿ ವಿವಿಧ ವಿಷಯ ತಜ್ಞ ಶಿಕ್ಷಕರು, ಶಿಕ್ಷಕರು ಇದ್ದರು.

ಮುಖ್ಯ ಶಿಕ್ಷಕಿ ಸೌಭಾಗ್ಯ ಸ್ವಾಗತಿಸಿದರು. ಅಜಿತ್‌ ಜಿ.ವಿ. ವಂದಿಸಿದರು. ರಾಜೇಶ್‌ ಜಿ.ಎನ್‌. ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT