ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಳ್ಯದಲೆ ಕೃಷಿಗೆ ‘ಬಂಗಾರದ ಮನುಷ್ಯ’ನೇ ಪ್ರೇರಣೆ

3 ಎಕರೆ ಜಮೀನನ್ನು ಕೃಷಿ ಯೋಗ್ಯವಾಗಿಸಿದ್ದೂ ಸಾಧನೆ
Published 24 ಮೇ 2023, 19:30 IST
Last Updated 24 ಮೇ 2023, 19:30 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ‘ಬಂಗಾರದ ಮನುಷ್ಯ’ ಸಿನಿಮಾದಿಂದ ಪ್ರೇರಣೆ ಪಡೆದ ವ್ಯಕ್ತಿಯೊಬ್ಬರು ಕೃಷಿಗೆ ಧುಮುಕಿ ಯಶಸ್ವಿಯಾದ ಕಥೆ ಇಲ್ಲಿದೆ. 40 ವರ್ಷಗಳ ಹಿಂದೆ ಕೃಷಿ ಜಮೀನೇ ಇಲ್ಲದ ಮಾಳಗಿ ಬಸಣ್ಣ ಅವರು ಇಂದು ವೀಳ್ಯದೆಲೆ ಕೃಷಿಯಲ್ಲಿ ಇತರರಿಗೂ ಮಾದರಿಯಾಗಿ ಬೆಳೆದು ನಿಂತಿದ್ದಾರೆ.

ಕಡರನಾಯ್ಕನಹಳ್ಳಿ ಸಮೀಪದ ಗುಡ್ಡದ ತುಮ್ಮಿನಕಟ್ಟಿ ಗ್ರಾಮದ ಮಾಳಗಿ ಬಸಣ್ಣ ಅವರು ಮೊದಲು ಅವರಿವರ ಮನೆಯಲ್ಲಿ ಆಳಾಗಿ ಕೆಲಸ ಮಾಡುತ್ತಿದ್ದರು. ‘ಬಂಗಾರದ ಮನುಷ್ಯ’ ಸಿನಿಮಾ ನೋಡಿದ ಅವರಿಗೆ ತಾವೂ ಕೃಷಿ ಮಾಡಬೇಕು ಎಂಬ ಛಲ ಮೂಡಿತು.

ಭೂರಹಿತರಿಗೆ ಜಮೀನು ಹಂಚಿಕೆಯಲ್ಲಿ ಗುಡ್ಡದ ತುಮ್ಮಿನಕಟ್ಟೆ ಮತ್ತು ಕೊಕ್ಕನೂರು ಮದ್ಯದಲ್ಲಿ ಮಟ್ಟಿಕ್ಯಾಂಪ್ (ಗುಡ್ಡದ ಪ್ರದೇಶ) 3 ಎಕರೆ ಜಮೀನು ಮಂಜೂರು ಮಾಡಿಸಿಕೊಂಡರು. ಆದರೆ ಅದು ಬರಿ ಕಲ್ಲು ಬಂಡೆಗಳಿಂದ ತುಂಬಿತ್ತು. ಇದರಲ್ಲಿ ಬೆಳೆ ತೆಗೆಯಲು ಸಾಧ್ಯವೆ ಎಂದು ಹಲವರು ನಕ್ಕಿದ್ದುಂಟು. ಆದರೆ ಛಲ ಬಿಡದೇ ಹಗಲಿರುಳೆನ್ನದೇ ಕಲ್ಲು ಬಂಡೆಗಳನ್ನು ತೆಗೆದು ಅಲ್ಲಿ ಮಣ್ಣು ತುಂಬಿದರು. ಕೊಳವೆ ಬಾವಿ ತಗೆಸಿದರು. ಸಂಪೂರ್ಣ ಒಂದು ಎಕರೆ ಸಮತಟ್ಟು ಮಾಡಿದರು. ಈ ಪ್ರದೇಶದಲ್ಲಿ ವೀಳ್ಯದೆಲೆ ಕೃಷಿ ಉತ್ತಮ ಎಂದು ಮನವರಿಕೆ ಮಾಡಿಕೊಂಡರು.

ಶುಭ ಸಮಾರಂಭಗಳು ನಡೆಯಬೇಕಾದರೆ ವೀಳ್ಯದೆಲೆ ಇರಲೇಬೇಕು. ಉತ್ತರ ಕರ್ನಾಟಕ, ದಾವಣಗೆರೆ, ಕರಾಚಿಯವರೆಗೂ ತಾಂಬೂಲಪ್ರಿಯರಿಗೆ ಇಲ್ಲಿ ಬೆಳೆಯುವ ಎಲೆಗಳೆಂದರೆ ಬಹಳ ಪ್ರೀತಿ. ಮಳೆಗಾಲ, ಬೇಸಿಗೆ ಎಂಬ ಭೇದವಿಲ್ಲದೇ ಎಲ್ಲ ಕಾಲದಲ್ಲಿಯೂ ಈ ಎಲೆ ಬೆಳೆಗಾರರ ಮೊಗದಲ್ಲಿ ಲಾಭದ ಹರ್ಷ ಮೂಡಿಸುತ್ತದೆ.

‘ಧಾರಾಳವಾಗಿ ಬಿಸಿಲು ಬೀಳುವ ಜಾಗ, ಬುಡ ನೆನೆಸುವಷ್ಟು ನೀರು ಇದ್ದರೆ ಬೆಳೆಗಾರನಿಗೆ ವೀಳ್ಯದೆಲೆ ಯಾವಾಗಲೂ ಲಾಭ ತರುವ ಕೃಷಿ. ಪುಟ್ಟದಾದ ಜಾಗದಲ್ಲೂ ಸಾವಿರಾರು ರೂಪಾಯಿ ಆದಾಯ ತರುವ ಈ ಹಸಿರೆಲೆ ಕೃಷಿ ನಿಜಕ್ಕೂ ರೈತನ ಬದುಕಿಗೆ ಹಸಿರು ತುಂಬುತ್ತದೆ’ ಎನ್ನುತ್ತಾರೆ ಮಾಳಗಿ ಬಸಣ್ಣ.

ಮೊದಲು ಎಲೆ ಬಳ್ಳಿಗಳನ್ನು ಹಬ್ಬಿಸಲು ಮುಂಡದ ಸಸಿಗಳನ್ನು ನಾಟಿ ಮಾಡಿದರು. ಒಂದಡಿ ಎತ್ತರವಾಗಿ ಮಣ್ಣನ್ನು ಏರು ಹಾಕಿ ಸಾಲುಗಳನ್ನು ನಿರ್ಮಿಸಿದರು. ನಂತರ ಕರೆ ಎಲೆ ಮತ್ತು ಅಂಬಾಡಿ ಎಂಬ ತಳಿಯನ್ನು ನಾಟಿ ಮಾಡಿದರು. ಆಷಾಢಮಾಸ ಇದರ ನಾಟಿಗೆ ಸೂಕ್ತ ಸಮಯ ಎಂದು ಅವರು ಅಭಿಪ್ರಾಯಪಟ್ಟರು.

ಒಂದು ಎಕರೆಯಲ್ಲಿ 800 ಗುಣಿಗಳಿವೆ. ಒಂದು ಕಟ್ಟಿಗೆ ಸರಾಸರಿ ₹ 50. ಅದರಂತೆ 120 ಕಟ್ಟುಗಳಿಗೆ ಒಂದು ಪೆಂಡಿ. ಅದರ ದರ ₹ 6,000 ಆಗುತ್ತದೆ. ಒಂದು ತಿಂಗಳಿಗೆ ಕನಿಷ್ಠ 8 ಪೆಂಡಿ ವೀಳ್ಯದೆಲೆ ಸಿಗುತ್ತದೆ. ಅಲ್ಲಿಗೆ ಒಟ್ಟು ಮಾಸಿಕ ಆದಾಯ ₹ 48,000. ವಾರ್ಷಿಕ ಆದಾಯ ₹ 5,76,000. ಕೇವಲ ಒಂದು ಎಕರೆಯಲ್ಲಿ ಇಷ್ಟು ಆದಾಯ ಬರುತ್ತದೆ. ಹೀಗಾಗಿ ಇದು ‘ಹಸಿರು ಬಂಗಾರ’ ಎಂದು ಬಸಣ್ಣ ವಿವರಿಸಿದರು.

ಉಳಿದ ಎರಡು ಎಕರೆ ಸ್ವಲ್ಪ ಇಳಿಜಾರಿನಿಂದ ಕೂಡಿದೆ. ಅದರಲ್ಲಿ ಮೆಕ್ಕೆಜೋಳ, ತೊಗರಿ ಮುಂತಾದ ಬೆಳೆಗಳನ್ನು ತೆಗೆಯುತ್ತಾರೆ. ಅದನ್ನು ಸಹ ವೀಳ್ಯದೆಲೆ ಕೃಷಿಗೆ ಸಿದ್ಧಪಡಿಸುವ ಆಲೋಚನೆ ಅವರಿಗೆ ಇದೆ.

‘ವೀಳ್ಯದೆಲೆ ನಡುವೆ ಅಡಿಕೆ ಸಸಿಗಳನ್ನು ನಾಟಿ ಮಾಡಲಾಗಿದೆ. ಮುಂಡದ ಮರಗಳನ್ನು ತೆಗೆದು ನಂತರ ಅಡಿಕೆ ಮರಗಳಿಗೆ ಎಲೆ ಬಳ್ಳಿ ಹಬ್ಬಿಸುವ ಯೋಜನೆ ಇದೆ. ಇದರಿಂದಾಗಿ ಬಹುವಿಧದ ಬೆಳೆಯಾಗಿ ಪರಿವರ್ತನೆಯಾಗುತ್ತದೆ. ಆದಾಯ ದ್ವಿಗುಣವಾಗುತ್ತದೆ’ ಎನ್ನುತ್ತಾರೆ ಬಸಣ್ಣ.

ಹುಲುಸಾಗಿ ಬೆಳೆದ ವೀಳ್ಯದೆಲೆ
ಹುಲುಸಾಗಿ ಬೆಳೆದ ವೀಳ್ಯದೆಲೆ
ಗುಡ್ಡದ ಇಳಿಜಾರಿನಲ್ಲಿ ವೀಳ್ಯದೆಲೆ ಕೃಷಿ
ಗುಡ್ಡದ ಇಳಿಜಾರಿನಲ್ಲಿ ವೀಳ್ಯದೆಲೆ ಕೃಷಿ
ಹಲವು ವರ್ಷ ಲಾಭ ತರುವ ಬೆಳೆ
‘ಸೊರಗು ರೋಗ ಭಾದಿಸದೆ ಹೋದರೆ ಎಲೆಬಳ್ಳಿ ಹಲವಾರು ವರ್ಷ ಬದುಕಿ ಬೆಳೆಗಾರನಿಗೆ ಲಾಭ ತರುತ್ತದೆ. ಗುಣಮಟ್ಟದ ದೃಷ್ಟಿಯಿಂದ ಬಳ್ಳಿಗೆ ಸಾವಯವ ಗೊಬ್ಬರ ಬಳಸಲಾಗುತ್ತದೆ. ಬುಡಕ್ಕೆ ಹಸುವಿನ ಗಂಜಲ ಹಾಕುವುದರಿಂದ ಕೀಟ ಬಾಧೆ ಹತೋಟಿಗೆ ಬರುತ್ತದೆ. ವೀಳ್ಯದೆಲೆ ಗುಣಮಟ್ಟ ಹೆಚ್ಚುತ್ತದೆ’ ಎನ್ನುವುದು ಮಾಳಗಿ ಬಸಣ್ಣ ಅವರ ಅನುಭವದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT