ಗುರುವಾರ , ಡಿಸೆಂಬರ್ 3, 2020
19 °C
3.32 ಮೆಟ್ರಿಕ್‌ ಟನ್‌ ಸಾಗಣೆl ಸಾಗಿಸಲು ಇನ್ನೂ ಬಾಕಿ ಇದೆ 10 ಮೆಟ್ರಿಕ್‌ ಟನ್‌

ದಾವಣಗೆರೆ: ಸಿಮೆಂಟ್‌ ಫ್ಯಾಕ್ಟರಿಗೆ ಹೊರಟಿದೆ ಪ್ಲಾಸ್ಟಿಕ್‌ ತ್ಯಾಜ್ಯ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನೀರಿನಲ್ಲಿ ಕರಗದ, ಮಣ್ಣಲ್ಲಿ ಮಣ್ಣಾಗದ, ಉರಿಸಿದರೂ ಮಾಲಿನ್ಯ ಉಂಟು ಮಾಡುವ ಪ್ಲಾಸ್ಟಿಕ್‌ ತ್ಯಾಜ್ಯಗಳು ಬಾಗಲಕೋಟೆಯ ಸಿಮೆಂಟ್‌ ಫ್ಯಾಕ್ಟರಿಗೆ ಕಳುಹಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಜಿಲ್ಲೆಯಿಂದ 3.32 ಮೆಟ್ರಿಕ್‌ ಟನ್‌ ಪ್ಲಾಸ್ಟಿಕ್‌ ಸಾಗಿಸಲಾಗಿದೆ.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಪ್ರತಿದಿನ 10.5 ಟನ್ ಪ್ಲಾಸ್ಟಿಕ್‌ ಉತ್ಪತ್ತಿಯಾಗುತ್ತದೆ. ಹರಿಹರ ನಗರಸಭೆಯಲ್ಲಿ 1.5 ಟನ್‌, ಚನ್ನಗಿರಿ, ಹೊನ್ನಾಳಿ ಪುರಸಭೆಗಳಲ್ಲಿ ಮತ್ತು ಜಗಳೂರು, ಮಲೇಬೆನ್ನೂರು ಪಟ್ಟಣ ಪಂಚಾಯಿತಿಗಳಲ್ಲಿ ತಲಾ ಅರ್ಧ ಟನ್‌ನಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಸಿಗುತ್ತವೆ. ಜಿಲ್ಲೆಯ ಎಲ್ಲ ನಗರಾಡಳಿತಗಳಲ್ಲಿ ದಿನಕ್ಕೆ 13.95 ಟನ್‌ ಪ್ಲಾಸ್ಟಿಕ್ ಕಸ ಸಂಗ್ರಹವಾಗುತ್ತದೆ.

ಪಾಲಿಕೆಯ ಕಸ ಆವರಗೊಳ್ಳದಲ್ಲಿ, ಹರಿಹರದ ಕಸ ಮಹಜೇನಹಳ್ಳಿಯಲ್ಲಿ, ಚನ್ನಗಿರಿಯ ಕಸ ಚಿಕ್ಕಲು ಕೆರೆ ಜಮೀನಿನಲ್ಲಿ ಹೊನ್ನಾಳಿಯ ಕಸ ಮಾಸಡಿ ಗ್ರಾಮದಲ್ಲಿ, ಜಗಳೂರಿನ ಕಸ ಉಜ್ಜಿನಿ ರಸ್ತೆಯ ಸಮೀಪದ ಜಮೀನಿನಲ್ಲಿ ಸಂಸ್ಕರಣೆಗೊಳ್ಳುತ್ತಿದೆ. ಮಲೇಬೆನ್ನೂರಿನಲ್ಲಿ ಸರ್ಕಾರಿ ಜಮೀನು ಮಂಜೂರುಗೊಂಡಿದ್ದರೂ ಸಂಸ್ಕರಣ ಕಾರ್ಯ ಆರಂಭಗೊಳ್ಳಬೇಕಿದೆ. ಆದರೂ ಎರೊಬಿಕ್‌ ಕಾಂಪೋಸ್ಟ್‌ ಮೂಲಕ ಗೊಬ್ಬರ ತಯಾರಿ ನಡೆಯುತ್ತಿದೆ.

ಜಿಲ್ಲೆಯಲ್ಲಿ ಪ್ರತಿದಿನ 232 ಟನ್‌ ತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ. ಅದಲ್ಲಿ ಶೇ 6ರಷ್ಟು ಪ್ಲಾಸ್ಟಿಕ್‌ ಆಗಿರುತ್ತದೆ. ಅವುಗಳನ್ನು ಸಂಸ್ಕರಣೆ ಮಾಡುವುದು ಕಷ್ಟ. ಅದಕ್ಕಾಗಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ನೀಡಿದ ಮಾರ್ಗದರ್ಶನದಂತೆ ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕು ಮುದ್ದಾಪುರದ ಜೆ.ಕೆ. ಸಿಮೆಂಟ್‌ ಫ್ಯಾಕ್ಟರಿಗೆ ಕಳುಹಿಸಲಾಗುತ್ತಿದೆ. ಅಲ್ಲಿ ಅದನ್ನು ಸಿಮೆಂಟ್‌ ತಯಾರಿಗೆ ಬಳಸಲಾಗುತ್ತದೆ ಎಂದು ಜಿಲ್ಲಾ ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನ ನಿರ್ದೇಶಕಿ ನಜ್ಮಾ ಜಿ. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ದಿನಕ್ಕೆ 232 ಟನ್‌ ತ್ಯಾಜ್ಯ ಉತ್ಪತ್ತಿಯಾದರೆ ಅದರಲ್ಲಿ 45.75 ಟನ್‌ ಪೂರ್ಣ ಸಂಸ್ಕರಣೆಗೆ ಒಳಗಾಗುತ್ತದೆ. 7.66 ಟನ್‌ ಗೊಬ್ಬರವಾಗುತ್ತದೆ. ಉಳಿದವುಗಳಲ್ಲಿ ಪ್ಲಾಸ್ಟಿಕ್‌ ಈಗ ಸಿಮೆಂಟ್‌ ಫ್ಯಾಕ್ಟರಿಗಳಿಗೆ ಕಳುಹಿಸುವ ವ್ಯವಸ್ಥೆ ಆರಂಭಗೊಂಡಿದೆ. ನಿರಂತರವಾಗಿ ಸಾಗಿಸಲು ಸಾಧ್ಯವಾದರೆ ಆಗ ಪ್ಲಾಸ್ಟಿಕ್‌ ಸಂಸ್ಕರಣೆ ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ ಅವರು.

ಜಿಲ್ಲೆಯ ಎಲ್ಲ ನಗರಾಡಳಿತಗಳು ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುತ್ತಿವೆ. ಕಸ ನೀಡುವವರು ಒಣ ಕಸ ಮತ್ತು ಹಸಿಕಸ ಎಂದು ಬೇರ್ಪಡಿಸುವುದನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಅಲ್ಲದೇ 50 ಎಂಎಂಗಿಂತ ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು. ಯಾಕೆಂದರೆ ಆ ಪ್ಲಾಸ್ಟಿಕ್‌ ಮರುಬಳಕೆ ಕಷ್ಟವಾಗುತ್ತದೆ. ಉಳಿದವುಗಳನ್ನು ಕೂಡ ಮರುಬಳಕೆ ಮಾಡಲು ಸಾಧ್ಯ ಇರುವುದನ್ನು ಜನರೇ ಮೊದಲು ಮರುಬಳಕೆ ಮಾಡಿಕೊಳ್ಳಬೇಕು. ಆನಂತರವಷ್ಟೇ ತ್ಯಾಜ್ಯವನ್ನಾಗಿ ನೀಡಬೇಕು ಎಂಬುದು ಅವರ ಸಲಹೆಯಾಗಿದೆ.

417 ಬಾರಿ ದಾಳಿ

ನಿಷೇಧಿತ ಪ್ಲಾಸ್ಟಿಕ್‌ ಪತ್ತೆ ಹಚ್ಚಲು ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 417 ಬಾರಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 10.43 ಟನ್‌ ಪ್ಲಾಸ್ಟಿಕ್‌ ಪತ್ತೆ ಹಚ್ಚಿದ್ದಾರೆ.  ₹ 4.44 ಲಕ್ಷ ದಂಡ ಸಂಗ್ರಹಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು