ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯದಲ್ಲಿ ಕೊರೊನಾ ಹರಡುವ ಸಾಧ್ಯತೆ: ಆತಂಕ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್
Last Updated 15 ಜೂನ್ 2020, 16:58 IST
ಅಕ್ಷರ ಗಾತ್ರ

ದಾವಣಗೆರೆ: ಕಂಟೈನ್‌ಮೆಂಟ್‌ ವಲಯಗಳಲ್ಲಿ ಕೊರೊನಾ ವೈರಸ್‌ ಸೋಂಕು ಸಮುದಾಯದಲ್ಲಿ ಹರಡುವ ಸಾಧ್ಯತೆ ಇದೆ. ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಹೇಳಿದರು.

ಸೋಮವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಯೋಜಿಸಲಾಗಿದ್ದ ಕೋವಿಡ್-19 ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಅಧಿಕಾರಿಗಳು ಜಾಗರೂಕವಾಗಿ ಕಾರ್ಯನಿರ್ವಹಿಸುವ ಮೂಲಕ ಸೋಂಕು ತಮಗೆ ಬಾರದಂತೆ ಎಚ್ಚರ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಕೇಸ್‌ಗಳು ಕಡಿಮೆಯಾಗುವಂತೆ ನೋಡಿಕೊಳ್ಳಿ. ಕಂಟೈನ್‌ಮೆಂಟ್‌ ಜೋನ್, ಬಫರ್ ಜೋನ್‌ಗಳ ಎಲ್ಲರಿಗೂ ಸಹ ರೋಗ ಲಕ್ಷಣಗಳನ್ನು ಪತ್ತೆ ಮಾಡಿ ಟೆಸ್ಟ್‌ಗೆ ಒಳಪಡಿಸಿ ಎಂದು ಸೂಚಿಸಿದರು.

ಪ್ರತಿ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು. ವೈದ್ಯರು ಮತ್ತು ನರ್ಸ್ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ ಜಾಹೀರಾತುಗಳ ಮೂಲಕ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡದಂತೆ ಹೆಚ್ಚಿನ ಜಾಗೃತಿ ವಹಿಸಬೇಕು. ಕಷ್ಟಪಟ್ಟು ಕೆಲಸ ನಿರ್ವಹಿಸುವುದಕ್ಕಿಂತ ಸ್ಮಾರ್ಟ್‌ವರ್ಕ್ ಮಾಡಲು ಯೋಚಿಸಿ ಎಂದು ಸಲಹೆ ನೀಡಿದರು.

ಜಾಲಿನಗರ ಕಂಟೈನ್‌ಮೆಂಟ್‌ ವಲಯದಲ್ಲಿ ಒಟ್ಟು 111 ಪ್ರಕರಣ ಪತ್ತೆಯಾಗಿದ್ದು ರಲ್ಲಿ 98 ರೋಗಿಗಳು ಗುಣಮುಖರಾಗಿದ್ದಾರೆ. ಇನ್ನು 9 ಪ್ರಕರಣಗಳಷ್ಟೇ ಉಳಿದಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಜಿ.ಡಿ. ರಾಘವನ್ ಮಾಹಿತಿ ನೀಡಿದರು.

ಶೀತಜ್ವರ (ಐಎಲ್‌ಐ) ಲಕ್ಷಣಗಳಿರುವವರು, ಪ್ರಾಥಮಿಕ ಸಂರ್ಪಕ ಹೊಂದಿರುವವರು, ಕಂಟೈನ್‌ಮೆಂಟ್ ಹಾಗೂ ಬಫರ್ ಝೋನ್‌ಗಳಲ್ಲಿರುವವರು ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಪೋಲಿಸ್ ಸಿಬ್ಬಂದಿಯನ್ನು, 60 ವರ್ಷಕ್ಕಿಂತ ಮೇಲಿನವರುನ್ನು, ಗರ್ಭಿಣಿಯರನ್ನು, ಪರೀಕ್ಷೆ ಮಾಡಲಾಗುತ್ತಿದೆ ಎಂದು ಡಿಎಚ್ಒ ರಾಘವೇಂದ್ರ ಸ್ವಾಮಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ದೂಡಾ ಆಯುಕ್ತ ಬಿ.ಟಿ ಕುಮಾರಸ್ವಾಮಿ, ನಗರಾಭಿವೃದಿ ಕೋಶದ ಯೊಜನಾ ನಿರ್ದೇಶಕಿ ನಜ್ಮಾ ಅವರೂ ಇದ್ದರು.

‘ಮೊದಲ ಪ್ರಯತ್ನದ ಪರಿಗಣನೆ’

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವಂತಹ ಮಕ್ಕಳು ಕ್ವಾರಂಟೈನ್‌ನಲ್ಲಿದ್ದರೆ ಅಥವಾ ಕೋವಿಡ್ ಪಾಸಿಟಿವ್ ಎಂದು ದಾಖಲಾಗಿದ್ದರೆ ಹಾಗೂ ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದಿರುವ ಮಕ್ಕಳಿಗೆ ಮುಂದಿನ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಯೆಂದು ಪರಿಗಣಿಸಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಇದನ್ನು ಮೊದಲ ಪ್ರಯತ್ನವೆಂದು ಪರಿಗಣಿಸಲಾಗುತ್ತದೆ ಎಸ್. ಆರ್. ಉಮಾಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT