ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಮಳೆಗಾಲದಲ್ಲಿ ಕೈಕೊಡುತ್ತಿರುವ ವಿದ್ಯುತ್‌!

ಕಡು ಬೇಸಿಗೆಯಲ್ಲಿ ನಿರಂತರವಾಗಿದ್ದು ಅಭಿವೃದ್ಧಿ ಕಾಮಗಾರಿಗಾಗಿ ಸ್ಥಗಿತ...
Published 31 ಮೇ 2024, 6:36 IST
Last Updated 31 ಮೇ 2024, 6:36 IST
ಅಕ್ಷರ ಗಾತ್ರ

ದಾವಣಗೆರೆ: ಉದ್ಯೋಗಿಯೊಬ್ಬರು ಕೆಲಸಕ್ಕೆ ಹೋಗುವ ತಯಾರಿಯಲ್ಲಿ ಹೀಟರ್‌ ಹಾಕಿ ಸ್ನಾನಕ್ಕೆ ಹೊರಡುವ ಹೊತ್ತು. ಕರೆಂಟ್‌ ಮಾಯ..

ಗೃಹಿಣಿಯೊಬ್ಬರು ಬೆಳಿಗ್ಗೆ ತಿಂಡಿ ಮಾಡಲು ಅಕ್ಕಿ ಮಿಕ್ಸರ್‌ ಗ್ರೈಂಡರ್‌ಗೆ ಹಾಕಬೇಕೆನ್ನುವಷ್ಟರಲ್ಲಿ ಕೈಕೊಡುವ ವಿದ್ಯುತ್‌. ಬಿಸಿಲ ಬೇಗೆಗೆ ಕಚೇರಿಯ ಎ.ಸಿ. ಆನ್‌ ಮಾಡಿದರೆ ಕರೆಂಟ್‌ ಇಲ್ಲ. ಕಾರ್ಖಾನೆಯೊಂದರಲ್ಲಿ ಬೆಳಿಗ್ಗೆ ಬಂದ ಕಾರ್ಮಿಕರು ಕೆಲಸ ಆರಂಭಿಸುತ್ತಿದ್ದಂತೆಯೇ ವಿದ್ಯುತ್‌ ಸ್ಥಗಿತ..

ಇವು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಕೆಲವು ದಿನಗಳಿಂದ ಕಂಡುಬರುತ್ತಿರುವ ಸಾಮಾನ್ಯ ದೃಶ್ಯಗಳು. ಅನಿರ್ದಿಷ್ಟ ವಿದ್ಯುತ್‌ ಪೂರೈಕೆ ಸ್ಥಗಿತದಿಂದಾಗಿ ನಿವಾಸಿಗಳು ಸಮಸ್ಯೆ ಎದುರಿಸುವಂತಾ ಗಿದೆ. ವಿದ್ಯುತ್‌ ಉತ್ಪಾದನೆ ಸ್ಥಿರವಾಗಿದ್ದರೂ ಕರೆಂಟ್ ಮಾತ್ರ ಇಲ್ಲ. ಪದೇಪದೇ ವಿದ್ಯುತ್‌ ಕೈಕೊಡುತ್ತಿದ್ದು ಜನರು ಹೈರಾಣಾಗಿದ್ದಾರೆ.

ಸಣ್ಣ ಕೈಗಾರಿಕೆ ಸೇರಿದಂತೆ ಮಧ್ಯಮ ಕೈಗಾರಿಕೆಗಳಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಕಾರ್ಮಿಕರು ಸುಮ್ಮನೆ ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ. ನಗರದಲ್ಲಿ ನಡೆಯುತ್ತಿರುವ ಜಲಸಿರಿ ಕಾಮಗಾರಿ, ಒಳಚರಂಡಿ, ರಸ್ತೆ ಕಾಮಗಾರಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಂದಾಗಿ ವಿದ್ಯುತ್‌ ಪೂರೈಕೆ ಆಗಾಗ ಸ್ಥಗಿತಗೊಳ್ಳುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಆದರೆ, ಇದರಿಂದ ಜನರು ಹೈರಾಣಾಗಿದ್ದಾರೆ.

ಕಡು ಬೇಸಿಗೆಯ ಅತಿಯಾದ ಬೇಡಿಕೆಯ ಸಂದರ್ಭ, ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳು ಹಾಗೂ ಲೋಕಸಭಾ ಚುನಾವಣೆ ಇದ್ದ ಕಾರಣ ವಿದ್ಯುತ್‌ ಕೈಕೊಡುವುದು ತಕ್ಕಮಟ್ಟಿಗೆ ತಹಬದಿಗೆ ಬಂದಿತ್ತು. ಆದರೆ, ಈಗ ಎಲ್ಲವೂ ಮುಗಿದಿರುವ ಕಾರಣ ಮತ್ತೆ ವಿದ್ಯುತ್‌ ಸ್ಥಗಿತ ಸಾಮಾನ್ಯವಾಗಿದೆ.

‘ಪದೇಪದೇ ವಿದ್ಯುತ್‌ ಸ್ಥಗಿತ ಆಗುತ್ತಿರುವುದರಿಂದ ತೊಂದರೆ ಎದುರಿಸುವಂತಾಗಿದೆ. ಹಗಲು ಹೊತ್ತಿನಲ್ಲಿ ಒತ್ತಟ್ಟಿಗಿರಲಿ ಕೆಲವೊಮ್ಮೆ ರಾತ್ರಿ ಹೊತ್ತು ವಿದ್ಯುತ್‌ ಇರುವುದಿಲ್ಲ. ಇದರಿಂದ ಫ್ಯಾನ್‌ ಇಲ್ಲದೇ ಸೊಳ್ಳೆಗಳ ಹಾವಳಿ ಹೆಚ್ಚಿದೆ. ಚಿಕ್ಕ ಮಕ್ಕಳು, ವೃದ್ಧರು ಧಗೆಯಿಂದ ನಿದ್ರೆ ಮಾಡಲು ಆಗದೇ ಸಮಸ್ಯೆ ಅನುಭವಿಸುವಂತಾಗಿದೆ’ ಎಂದು ಸರಸ್ವತಿ ನಗರದ ಗೌರಮ್ಮ ಹೇಳಿದರು.

‘ವಿದ್ಯುತ್‌ ಇಲ್ಲದ ಕಾರಣ ಅಂಗಡಿಯ ಫ್ರಿಡ್ಜ್‌ನಲ್ಲಿ ಹಾಲು, ತಂಪು ಪಾನೀಯಗಳನ್ನು ಶೇಖರಿಸಿಡುವುದು ಸಮಸ್ಯೆಯಾಗಿದೆ. ಫ್ಯಾನ್‌ ಇಲ್ಲದೇ ಇರಲು ಆಗುತ್ತಿಲ್ಲ’ ಎಂದು ಬೆಸ್ಕಾಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ವ್ಯಾಪಾರಿ ಅಶೋಕ್‌.

‘ರಾತ್ರಿ ಹೊತ್ತು ವಿದ್ಯುತ್‌ ಇಲ್ಲದ ಕಾರಣ ಕಳ್ಳರ ಹಾವಳಿಯೂ ಹೆಚ್ಚಿದೆ. ಹಗಲಿನಲ್ಲಿ ವಿದ್ಯುತ್‌ ಇಲ್ಲದ ಕಾರಣ ಸಮರ್ಪಕ ಕುಡಿಯುವ ನೀರಿನ ಪೂರೈಕೆಯೂ ಆಗುತ್ತಿಲ್ಲ’ ಎಂದು ಬಾಷಾ ನಗರದ ಅಕ್ರಂ ಬಾಷಾ ಹೇಳಿದರು.

‘ವಿದ್ಯುತ್‌ ಇಲ್ಲದ ಕಾರಣ ಕಾರ್ಖಾನೆ ನಡೆಸುವುದು ಕಷ್ಟವಾಗಿದೆ. ಯಾವಾಗ ಕರೆಂಟ್‌ ಹೋಗುತ್ತದೋ ಗೊತ್ತೇ ಆಗುವುದಿಲ್ಲ. ವಿದ್ಯುತ್‌ ಇಲ್ಲದಾಗ ನೌಕರರು ಸುಮ್ಮನೆ ಕುಳಿತುಕೊಳ್ಳುವ ಸ್ಥಿತಿ ಇದೆ‘ ಎಂದು ಬೇಸರಿಸಿದರು ಇಂಡಸ್ಟ್ರಿಯಲ್‌ ಏರಿಯಾದ ವಾಹನಗಳ ಬಿಡಿ ಭಾಗಗಳ ಕಾರ್ಖಾನೆಯ ಯೂಸುಫ್.

ಅಭಿವೃದ್ಧಿ ಕಾಮಗಾರಿ ಕಾರಣ

‘ಸದ್ಯ ನಗರದಲ್ಲಿ ಜಲಸಿರಿ, ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರಸ್ತೆ ಅಗೆಯಲಾಗುತ್ತಿದೆ. ಈ ವೇಳೆ ವಿದ್ಯುತ್‌ ಸಂಪರ್ಕಕ್ಕೆ ಹಾನಿಯಾಗಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಸ್ಥಗಿತಗೊಳಿಸಲಾಗುತ್ತಿದೆ. ಹಲವು ವರ್ಷಗಳಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಬೆಸ್ಕಾಂನಿಂದ ಕಾಮಗಾರಿಗೆ ಅನುಮತಿ ನೀಡದಿದ್ದರೆ ಜಲಸಿರಿ ಯೋಜನೆ ಹಾಗೂ ಪಾಲಿಕೆಯವರು ಕಾಮಗಾರಿಗೆ ಸಹಕರಿಸುತ್ತಿಲ್ಲ ಎಂದು ಆರೋಪ ಮಾಡುತ್ತಾರೆ. ಹೀಗಾಗಿ ಅವರಿಗೆ ಅನುಮತಿ ನೀಡುವುದು ಅನಿವಾರ್ಯ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಬೆಸ್ಕಾಂ  ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಕೆ. ಪಾಟೀಲ್‌.

‘ಸದ್ಯ ವಿದ್ಯುತ್‌ ಉತ್ಪಾದನೆಯಲ್ಲಿ ಕೊರತೆ ಇಲ್ಲ. ನಮ್ಮ ಬಳಿ ಅಗತ್ಯ ಪ್ರಮಾಣದಲ್ಲಿ ವಿದ್ಯುತ್‌ ಇದೆ. ಕಾಮಗಾರಿ ಹೊರತುಪಡಿಸಿ ಬೇರೆ ಕಾರಣಗಳಿಗೆ ವಿದ್ಯುತ್‌ ಪೂರೈಕೆ ವ್ಯತ್ಯಯವಾಗುತ್ತಿಲ್ಲ’ ಎಂದು ಅವರು ವಿವರಿಸಿದರು.

ವಿದ್ಯುತ್‌ ಇಲ್ಲದೇ ಕೈಗಾರಿಕೆ ನಡೆಸುವುದು ಕಷ್ಟ

‘ನಗರದಲ್ಲಿ ವಿದ್ಯುತ್‌ ಇಲ್ಲದ ಕಾರಣ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಈಗೀಗ ಪದೇ ಪದೇ ತೆಗೆಯುವುದರಿಂದ ಸಮಸ್ಯೆಯಾಗಿದೆ. ಯಾವುದಾದರೂ ನಿಗದಿತ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಳಿಸಿದರೆ ಅದಕ್ಕೆ ಹೊಂದಿಕೊಳ್ಳುತ್ತೇವೆ. ಇಲ್ಲದಿದ್ದರೆ ಕೈಗಾರಿಕೆ ನಡೆಸುವುದು ಕಷ್ಟ. ವಿದ್ಯುತ್‌ ಇಲ್ಲದಿದ್ದಾಗ ಕಾರ್ಮಿಕರು ಸುಮ್ಮನೆ ಕುಳಿತುಕೊಳ್ಳ ಬೇಕು. ವಿದ್ಯುತ್ ಇಲ್ಲದಿದ್ದಾಗ ಜನರೇಟರ್‌ ಬಳಸಲು ಅಪಾರ ವೆಚ್ಚವಾಗುತ್ತದೆ. ಇದರಿಂದ ನಷ್ಟವೇ ಹೆಚ್ಚು’ ಎಂದು ಬೇಸರಿಸಿದರು ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕಾರ್ಯದರ್ಶಿ ಅಜ್ಜಂಪುರ ಶೆಟ್ರ ಶಂಭುಲಿಂಗಪ್ಪ.

‘ಅಭಿವೃದ್ಧಿ ಕಾಮಗಾರಿ ಎಲ್ಲಿ ನಡೆಯುತ್ತದೆಯೋ ಅಲ್ಲಿ ಮಾತ್ರ ವಿದ್ಯುತ್‌ ತೆಗೆಯಬೇಕು. ಅದನ್ನು ಬಿಟ್ಟು ಎಲ್ಲ ಕಡೆ ಸ್ಥಗಿತಗೊಳಿಸಿದರೆ ಉದ್ಯಮ ನಡೆಸುವುದು ಕಷ್ಟ ವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು. ಶೀಘ್ರ ಕಾಮಗಾರಿ ಪೂರ್ಣ ಗೊಳಿಸಿದರೆ ಜನರಿಗೂ ಅನುಕೂಲವಾಗಲಿದೆ‘ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT