ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮ | ಮಕ್ಕಳು ವಾಹನ ಚಲಾಯಿಸಿಕದರೆ ಪಾಲಕರಿಗೆ ದಂಡ

‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೂಚನೆ
Published 6 ಮಾರ್ಚ್ 2024, 0:20 IST
Last Updated 6 ಮಾರ್ಚ್ 2024, 0:20 IST
ಅಕ್ಷರ ಗಾತ್ರ

ದಾವಣಗೆರೆ: ಕರ್ಕಶವಾಗಿ ಹಾರ್ನ್ ಮಾಡಿ ಅಡ್ಡಾದಿಡ್ಡಿ ವಾಹನ ಓಡಿಸುವುದು. ಕಲ್ಯಾಣ ಮಂಟಪ, ಪಾರ್ಕ್‌ಗಳೆದುರು ಮದುವೆ, ಜನ್ಮದಿನ ಆಚರಣೆ ಹೆಸರಲ್ಲಿ ಮಧ್ಯರಾತ್ರಿ ವೇಳೆ ಪಟಾಕಿ ಸಿಡಿಸುವುದು ಸೇರಿದಂತೆ ರಾತ್ರಿ ವೇಳೆ ಅನೇಕ ನಿಯಮಗಳನ್ನು ಉಲ್ಲಂಘಿಒಸುವ ಪ್ರಕರಣಗಳು ಕಂಡುಬರುತ್ತಿದೆ. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಎಚ್ಚರಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಫೋನ್ ಇನ್’ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರತಿಯೊಬ್ಬ ನಾಗರಿಕ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ ಅವರು, ಎಲ್ಲಾ ಕಡೆಯೂ ಪೊಲೀಸರು ಇರುವುದಿಲ್ಲ. ಆದ್ದರಿಂದ ಜನರೇ ಸ್ವಯಂ ಪ್ರೇರಣೆಯಿಂದ ಕಾನೂನು ಪಾಪಿಸಲು ಮುಂದಾಗಬೇಕು. ಪೊಲೀಸರ ಕಣ್ತಪ್ಪಿಸಿ ಕಾನೂನು ಉಲ್ಲಂಘನೆ ಮಾಡಿದರೆ ದಂಡ ಕಟ್ಟಿಟ್ಟಬುತ್ತಿ’ ಎಂದು ತಿಳಿಸಿದರು.

‘ಸಂಚಾರ ನಿಯಮಗಳ ಕುರಿತು ಜನಜಾಗೃತಿ ಮೂಡಿಸುತ್ತಿದ್ದೇವೆ. ನಿಯಮ ಉಲ್ಲಂಘಿಸಿದವರ ಮನೆಗಳಿಗೆ ನೋಟಿಸ್ ಕಳುಹಿಸುತ್ತಿದ್ದು, ಈಗಾಗಲೇ ಭಾರಿ ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗುತ್ತಿದೆ. ಆದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ದಂಡ ಪಾವತಿಸಿ ಸುಮ್ಮನಾಗುವುದಲ್ಲ. ಶಿಸ್ತು, ಜೀವದ ಬಗ್ಗೆಯೂ ಜನರು ಯೋಚಿಸಬೇಕು’ ಎಂದು ಸಲಹೆ ನೀಡಿದರು.

‘ಹಬ್ಬ– ಹರಿದಿನ, ಉತ್ಸವ ಸಂದರ್ಭಗಳನ್ನು ಹೊರತುಪಡಿಸಿ, ವೈಯಕ್ತಿಕ ಜನ್ಮದಿನ, ಮದುವೆ ಸಂದರ್ಭ ಇತರರಿಗೆ ಸಮಸ್ಯೆ ಆಗುವಂತೆ ಪಟಾಕಿ ಸಿಡಿಸುವುದು, ಕರ್ಕಶ, ಅತಿ ಶಬ್ಧವಿರುವ ಹಾರ್ನ್ ಹಾಕುತ್ತ, ವೇಗವಾಗಿ, ಸಪ್ಪಳ ಮಾಡಿಕೊಂಡು ಬೈಕ್ ಚಲಾಯಿಸುವುದು ಹಾಗೂ ಡಿ.ಜೆ.ಯಲ್ಲಿ ಅಗತ್ಯಕ್ಕಿಂತ ಹೆಚ್ಚು ಶಬ್ಧ ಮಾಡುವುದರಿಂದ ವೃದ್ಧರು ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಮಟಾಗುತ್ತಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಚ್ಚರಿಸಿದರು.

‘ಅತಿ ಶಬ್ಧ ಮಾಡುತ್ತಿದ್ದ ಕೆಲವು ವಾಹನಗಳನ್ನು ನಮ್ಮ ಸಿಬ್ಬಮದಿ ವಶಪಡಿಸಿಕೊಂಡು ಅವುಗಳ ಸೈಲೆನ್ಸರ್‌ ಪೈಪ್‌ ನಾಶಪಡಿಸಿದ್ದಾರೆ. ಜೊತೆಗೆ ದಂಡವನ್ನೂ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಕಾರ್ಯಾಚರಣೆ ನಿರಂತರವಾಗಿರುತ್ತದೆ’ ಎಂದರು.  

ಪಾರ್ಕಿಂಗ್ ಸಮಸ್ಯೆ, ಸಿಗ್ನಲ್‌ಗಳನ್ನು ಜಂಪ್ ಮಾಡುವುದು, ಶಾಲೆಯ ವಿದ್ಯಾರ್ಥಿಗಳನ್ನು ಆಟೊಗಳಲ್ಲಿ ಅಪಾಯಕ್ಕೆ ಎಡೆಮಾಡಿಕೊಡುವಂತೆ ಬೇಕಾಬಿಟ್ಟಿ ಕೂರಿಸುವುದು, ಸಾಮಾಜಿಕ ಜಾಲತಾಣ ಮತ್ತು ವಿವಿಧ ಆ್ಯಪ್‌ಗಳಲ್ಲಿ ಒಡ್ಡಲಾಗುವ ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಳ್ಳುತ್ತಿರುವ ಬಗ್ಗೆ ಓದುಗರು ದೂರು ಸಲ್ಲಿಸಿದರು. ಸೈಬರ್ ಅಪರಾಧಕ್ಕೆ ಒಳಗಾಗಿ ಹಣ ಕಳೆದುಕೊಂಡಿದ್ದ ಕೆಲವರಿಗೆ ವಾಪಸ್ ಹಣ ಕೊಡಿಸುವಲ್ಲಿ ನೆರವಾದ ಪೊಲೀಸರಿಗೆ ಕೆಲವರು ಅಭಿನಂದನೆ ಸಲ್ಲಿಸಿದರು.

ಪೋಷಕರೇ ಹೊಣೆ:

18 ವರ್ಷದೊಳಗಿನ ಮಕ್ಕಳ ಕೈಗೆ ಪಾಲಕರು ವಾಹನಗಳನ್ನು ನೀಡುವುದು ಅಪರಾಧ. ಅಪ್ರಾಪ್ತರು ವಾಹನ ಓಡಿಸುವಾಗ ಅವಘಡ ಸಂಭವಿಸುವ ಸಾಧ್ಯತೆಗಳು ಹೆಚ್ಚು, ಜೀವಕ್ಕೇ ಅಪಾಆಯ ಎದುರಾದ ಉದಾಹರಣೆಗಳೂ ಇವೆ. ಈ ಬಗ್ಗೆ ಪಾಲಕರು ಎಚ್ಚರಿಕೆಯಿಂದ ಇರುವುದು ಸೂಕ್ತ. ಅವಘಡಗಳು ಸಂಭವಿಸಿದರೆ ಪಾಲಕರೇ ದಂಡ ತೆರಬೇಕಾಗುತ್ತದೆ ಎಂದೂ ಉಮಾ ಪ್ರಶಾಂತ್‌ ಕಿವಿಮಾತು ಹೇಳಿದರು.

ನ್ಯಾಮತಿ ಬಳಿ ಎರಡು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಆತನ ಕೈಗೆ ವಾಹನ ಕೊಟ್ಟ ಪಾಲಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಈ ಕುರಿತೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

‘ಅಪರಾಧ ತಡೆ ಮಾಸಾಚರಣೆ ಮೂಲಕ ಪಾಲಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಾಲೇಜು ಪ್ರಾಂಶುಪಾಲರ ಜೊತೆ ಸಭೆ ನಡೆಸಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡುವಂತೆ ಸೂಚಿಸಲಾಗಿದೆ. ಮಕ್ಕಳು ಪ್ರಾಪ್ತರು ಬೈಕ್ ಚಲಾಯಿಸಿದರೆ ಬೈಕ್ ನೀಡಿದ ಪಾಲಕರೇ ಹೊಣೆ. ಅವರ ವಿರುದ್ಧ ಮುಲಾಜಿಲ್ಲದೇ ಪ್ರಕರಣ ದಾಖಲಿಸಲಾಗುತ್ತಿದೆ’ ಎಂದು ವಿವರಿಸಿದರು.

ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಪತ್ರಕರ್ತರೊಬ್ಬರ ಮೇಲೆ ಈಚೆಗೆ ಹಲ್ಲೆ ನಡೆದಿದ್ದು, ಹಲ್ಲೆ ಮಾಡಿದವರನ್ನು ಈಗಾಗಲೇ ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಪೊಲೀಸ್‌ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಇರುವ ಸಿಬ್ಬಂದಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಆಟೊ ಚಾಲಕರ ಜೊತೆ ಸಭೆ:

ಇತ್ತೀಚಿನ ದಿನಗಳಲ್ಲಿ ಚಾಲಕರು ಆಟೊಗಳ ವಿನ್ಯಾಸ ಬದಲಿಸುತ್ತಿದ್ದಾರೆ. ಕರ್ಕಶ ಹಾರ್ನ್‌ಗಳು, ಕಿವಿಗಡಚ್ಚಿಕ್ಕುವ ಸಂಗೀತ, ಹೆಡಲೈಟ್‌ಗಳನ್ನು ಬದಲಾಯಿಸುವುದು, ವೇಗವಾಗಿ ಚಾಲನೆ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ. ಈ ಕುರಿತು ಚಾಲಕರ ಜೊತೆ ಜಾಗೃತಿ ಸಭೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಗೋಲ್ಡನ್ ಹವರ್‌ ಮುಖ್ಯ

ವಿದ್ಯಾವಂತರೇ ಹೆಚ್ಚಿನ ಪ್ರಮಾಣದಲ್ಲಿ ಸೈಬರ್ ಅಪರಾಧಕ್ಕೆ ಬಲಿಪಶು ಆಗುತ್ತಿದ್ದು, ಸೈಬರ್ ವಂಚನೆಗೆ ಒಳಗಾದ ಎರಡು ಮೂರು ಗಂಟೆಯೊಳಗೆ (ಗೋಲ್ಡನ್ ಹವರ್) ದೂರು ನೀಡುವುದು ಅವಶ್ಯಕ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಸಲಹೆ ನೀಡಿದರು.

‘ವಿದ್ಯಾವಂತರೇ ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹಣದ ಆಸೆ ಹುಟ್ಟಿಸಿ ಟಾಸ್ಕ್ ಪೂರೈಸಲು ಹೇಳುತ್ತಾರೆ. ಆರಂಭದಲ್ಲಿ ಹಣ ಬಂದರೂ ಕೊನೆಯಲ್ಲಿ ಇವರ ಬಳಿಯಲ್ಲಿರುವ ಹಣವನ್ನೆಲ್ಲ ದೋಚಲಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಿದರೂ ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಕೆಲವರು ತಮ್ಮ ವೈಯಕ್ತಿಕ ಮಾಹಿತಿಯನ್ನು ಅಪರಿಚಿತರ ಜೊತೆ ಹಂಚಿಕೊಂಡಿರುತ್ತಾರೆ. ಯಾವ ಮಾಹಿತಿಯನ್ನು ನೀಡಿಲ್ಲ ಎಂದು ಪೊಲೀಸರ ಜೊತೆ ಸುಳ್ಳು ಹೇಳುತ್ತಾರೆ. ಆದರೆ, ಮೊಬೈಲ್ ವಿವರ ಪರಿಶೀಲಿಸಿದಾಗ ಇದು ಬಹಿರಂಗವಾಗುತ್ತದೆ. ಖಾತೆ ಹ್ಯಾಕ್ ಮಾಡುತ್ತಿರುವ ಪ್ರಕರಣಗಳು ಅಪರೂಪ. ಅಪರಿಚಿತರಿಗೆ ಡೆಬಿಟ್, ಕ್ರೆಡಿಟ್ ಕಾರ್ಡ್ ಸಂಖ್ಯೆ, ಸಿವಿವಿ, ಯುಪಿಐಡಿ, ಎಂ ಪಿನ್ ಮಾಹಿತಿಯನ್ನು ಹಂಚಿಕೊಳ್ಳಬಾರದು. ಅಪರಿಚಿತರಿಂದ ಎಸ್‌ಎಂಎಸ್, ಇಮೇಲ್‌ಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು' ಎಂದು ಸಲಹೆ ನೀಡಿದರು.

ನಗರ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಮನಿ, ಸಂಚಾರ ವಿಭಾಗದ ಎಸ್‌ಐ ಮಂಜುನಾಥ್ ಹಲುವಾಗಿಲು, ಸೈಬರ್‌ ಎಕನಾಮಿಕ್‌ ಆ್ಯಂಡ್‌ ನಾರ್ಕೊಟಿಕ್ಸ್‌ ಕ್ರೈಮ್‌ (ಸಿಇಎನ್‌) ಠಾಣೆಯ ಎಸ್.ಐ ಪ್ರಸಾದ್ ಪಿ., ಜಿಲ್ಲಾ ವಿಶೇಷ ವಿಭಾಗದ ಎಸ್‌.ಐ ಇಮ್ರಾನ್ ಬೇಗ್, ಕಾನ್‌ಸ್ಟೆಬಲ್ ಪ್ರಶಾಂತ್ ಈ ಸಂದರ್ಭ ಹಾಜರಿದ್ದರು.

ದಾವಣಗೆರೆಯ ಪ್ರಜಾವಾಣಿ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿದರು. ನಗರ ಡಿವೈಎಸ್‌ಪಿ ಮಲ್ಲೇಶ್ ದೊಡ್ಮನಿ ಇದ್ದರು.
ದಾವಣಗೆರೆಯ ಪ್ರಜಾವಾಣಿ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿದರು. ನಗರ ಡಿವೈಎಸ್‌ಪಿ ಮಲ್ಲೇಶ್ ದೊಡ್ಮನಿ ಇದ್ದರು.

ಸೈಬರ್ ಅಪರಾಧವಾದರೆ 1930 ಕರೆ ಮಾಡಿ ಸೈಬರ್ ಅಪರಾಧ ನಡೆದಲ್ಲಿ ವಂಚನೆಗೆ ಒಳಗಾದಲ್ಲಿ ತಕ್ಷಣ ಉಚಿತ ದೂರವಾಣಿ ಸಂಖ್ಯೆ 1930 ಕರೆ ಮಾಡಬಹುದು. ದೂರುಗಳನ್ನು www.cybercrime.gov.in ಮೂಲಕ ಸೈಬರ್ ಕ್ರೈಂ ರಿಪೊರ್ಟಿಂಗ್‌ ಪೋರ್ಟಲ್‌ನಲ್ಲಿ ದೂರು ಸಲ್ಲಿಸಬಹುದು ಸಂಚಾರ ನಿಯಮ ಉಲ್ಲಂಘಿಸಿದರೆ ಚಿತ್ರಸಮೇತ ಕಳುಹಿಸಿ ಸಂಚಾರ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ 9480803208 ಸಂಖ್ಯೆಗೆ ಚಿತ್ರಸಮೇತ ವಾಟ್ಸ್ಆ್ಯಪ್‌ನಲ್ಲಿ ಕಳುಹಿಸಿದರೆ ತಕ್ಷಣ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT