ಬುಧವಾರ, ಫೆಬ್ರವರಿ 19, 2020
30 °C
ಸ್ವಾಮೀಜಿಗಳಿಗೆ ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾಶರಣರು

ಬಸವತತ್ವದ ಆಧಾರದಲ್ಲಿ ಜನಾಂಗವನ್ನು ಮುನ್ನೆಡೆಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬಸವತತ್ವ, ಶರಣತತ್ವದ ಆಧಾರದ ಮೇಲೆ ಮಠದ ಗುರುಗಳು ಎಲ್ಲಾ ಜನಾಂಗದವರನ್ನು ಕರೆದುಕೊಂಡು ಹೋದರೆ 21ನೇ ಶತಮಾನದಲ್ಲಿ ಸಮಗ್ರ ಕ್ರಾಂತಿಯಾಗಲಿದ್ದು, ಕಲ್ಯಾಣ ರಾಜ್ಯ ನಮಗೆ ಸಿಗುತ್ತದೆ ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾಶರಣರು ಹೇಳಿದರು.

ವಾಲ್ಮೀಕಿ ಜಾತ್ರೆ 2020, ಶ್ರೀಮಠದ 22ನೇ ವಾರ್ಷಿಕೋತ್ಸವ ಹಾಗೂ ಪುಣ್ಯಾನಂದಪುರಿ ಸ್ವಾಮೀಜಿಯವರ 13ನೇ ಪುಣ್ಯಾರಾಧನೆ ಕಾರ್ಯಕ್ರಮದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮುರುಘಾಮಠದ ಈ ತತ್ವ ಅನುಸರಿಸಿದ್ದು, ಎಲ್ಲ ಜನಾಂಗದವರನ್ನು ಕರೆದುಕೊಂಡು ಹೋಗುತ್ತಿದೆ. ಈ ತಾತ್ವಿಕತೆ, ಬದ್ಧತೆ ಇಟ್ಟುಕೊಂಡು ಬೆಳೆಯಬೇಕು. ಎಲ್ಲ ಶರಣರನ್ನು ಸಮಾನವಾಗಿ ಗೌರವಿಸಿ ಘನತೆಯನ್ನು ತಂದುಕೊಟ್ಟಿದ್ದು, ಬಸವ ಕ್ರಾಂತಿ, ಶರಣ ಕ್ರಾಂತಿ ಹಾಗೂ ವಚನ ಕ್ರಾಂತಿ. ಕರ್ನಾಟಕದ ನೆಲದಲ್ಲಿ ಹುಟ್ಟಿಕೊಂಡ ವಚನ ಧರ್ಮ 21ನೇ ಶತಮಾನದಲ್ಲಿ ಮುಂದೆಯೂ ಇರುತ್ತದೆ’ ಎಂದರು.

‘ನಾವು ಬೆಳೆಯುವುದು ಮುಖ್ಯವಲ್ಲ. ನಮ್ಮ ಜನಾಂಗವೂ ಬೆಳೆಯಬೇಕು ಎನ್ನುವ ಸಾರ್ವತ್ರಿಕ ದೃಷ್ಟಿ ಹಾಗೂ ಕಳಕಳಿ ಇಟ್ಟುಕೊಂಡು ವಾಲ್ಮೀಕಿ ಮಠ ಐತಿಹಾಸಿಕ ಜಾತ್ರೆ ನಡೆಸಿದೆ. ನಮ್ಮ ಪೀಠದ ಅನನ್ಯ ಭಕ್ತರಾಗಿರುವ ನಾಯಕ ಜನಾಂಗಕ್ಕೂ ಮಠ ಬೇಕಾಗುತ್ತದೆ ಎಂಬ ದೃಷ್ಟಿಯಿಂದ ವಾಲ್ಮೀಕಿ ಪೀಠ ಸ್ಥಾಪನೆ ಮಾಡಿದೆವು’ ಎಂದು ಹೇಳಿದರು.

‘ಪ್ರಸನ್ನಾನಂದಪುರಿ ಸ್ವಾಮೀಜಿಗಳನ್ನು ಶ್ರೀಮಠಕ್ಕೆ ಕರೆದುಕೊಂಡು ಬಂದು ತಾತ್ವಿಕ, ಧಾರ್ಮಿಕ ಶಿಕ್ಷಣ ನೀಡಿ ಪುಣ್ಯಾನಂದಪುರಿ ಶ್ರೀಗಳ ನಿಧನದ ನಂತರ ವಾಲ್ಮೀಕಿ ಪೀಠಕ್ಕೆ ಸ್ವಾಮೀಜಿ ಯಾರನ್ನು ಮಾಡಬೇಕು ಎಂಬ ಜಿಜ್ಞಾಸೆ ಹುಟ್ಟಿತು. ಆಗ ಅನೇಕ ಸವಾಲು ಸ್ಪರ್ಧೆಗಳ ನಡುವೆ ಪ್ರಸನ್ನಾನಂದಪುರಿ ಶ್ರೀಗಳಿಗೆ ಪಟ್ಟ ಕಟ್ಟಿದೆವು. ಅವರು ತಾವು ಬೆಳೆಯಲಿಲ್ಲ ಇಡೀ ಜನಾಂಗವನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

‘ರಾಜನಹಳ್ಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಸಂಚಲನವನ್ನು ಮಾಡಿ ಸರ್ಕಾರವನ್ನೇ ಒಂದು ಜನಾಂಗದ ಕಡೆಗೆ ತಿರುಗಿಸಿದರು. ಸ್ವಾಮೀಜಿ ಸರ್ಕಾರದ ಜೊತೆ ಹೋರಾಡಿ ₹15 ಕೋಟಿ ಅನುದಾನ ತಂದು ಮಠವನ್ನು ಬೆಳೆಸಿದ್ದಾರೆ. ನಾಲ್ಕು ವರ್ಷಗಳಲ್ಲಿ ವಸತಿ ಸಮುಚ್ಚಯ, ವಿವಿಧ ಶಿಕ್ಷಣ ಸಂಸ್ಥೆಗಳು ಬೆಳೆಸಿದರು’ ಎಂದರು.

‘ಬಸವಣ್ಣನವರಿಗೆ ವಿಶಾಲ ಹೃದಯವಿತ್ತು. ಎಲ್ಲ ಜನಾಂಗದವರಿಗೂ ಸ್ಥಾನ ನೀಡಿದ್ದರು. ಮುರುಘಾ ಶರಣರಿಗೆ ಸಾಮಾಜಿಕ ಬದ್ಧತೆ ಇದ್ದು, ಬಸವತತ್ವದ ಮೂಲಕ ಸರ್ವ ಜನಾಂಗವನ್ನು ಬೆಳೆಸುವ ಕೆಲಸವನ್ನು ಮುರುಘಾ ಮಠ ಮಾಡುತ್ತಿದೆ. ಸಾಮಾಜಿಕ ಕಳಕಳಿ ಬದ್ಧತೆಯ ಜೊತೆಯಲ್ಲಿ ಸಾಗುವ ಪ್ರಯತ್ನ ಮಾಡಬೇಕು’ ಎಂದರು.

ಹರಿಹರ ವಚನಾನಂದ ಸ್ವಾಮೀಜಿ ಮಾತನಾಡಿ, ‘ಜೀವನದಲ್ಲಿ ನಾವೊಬ್ಬರೇ ನಂಬರ್ ಒನ್‌ ಆಗುವುದಲ್ಲ. ಇಡೀ ಸಮುದಾಯವೇ ನಂಬರ್ 1 ಆಗಬೇಕು ಎಂದು ಕನಸು ಕಂಡವರು ಪ್ರಸನ್ನಾನಂದಪುರಿ ಸ್ವಾಮೀಜಿ. 157 ತಾಲ್ಲೂಕುಗಳಿಗೆ ಭೇಟಿ ನೀಡಿ ಸಮಾಜವನ್ನು ಸಂಘಟಿಸಿದ್ದಾರೆ’ ಎಂದರು.

‘ಈ ಸಮಾಜದಲ್ಲಿ ಯಾರೂ ತಮಗೋಸ್ಕರ ಬದುಕುತ್ತಾರೋ ಅವರು ಮರೆಯಾಗುತ್ತಾರೆ. ಸಮಾಜಕ್ಕೆ ಬದುಕುತ್ತಾರೋ ಶಾಶ್ವತವಾಗಿರುತ್ತಾರೆ. ಪ್ರಸನ್ನಾನಂದ ಸ್ವಾಮೀಜಿ ಉದಾಹರಣೆ. ಶೋಷಿತ ಸಮಾಜಗಳು ಜಾಗೃತವಾಗಲಿ ಎಂದು ಉದ್ದೇಶದಿಂದ ಹಗಲು ರಾತ್ರಿ ಸಮಾಜ ಕಟ್ಟುತ್ತಿದ್ದಾರೆ.  ನೋವನ್ನು ನುಂಗಿ ಸಮಾಜಕ್ಕೆ ಅಮೃತ ನೀಡಿದ್ದಾರೆ’ ಎಂದು ಶ್ಲಾಘಿಸಿದರು.

‘ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಸುರಪುರದಲ್ಲಿ 17 ಎಕೆರೆ ಜಮೀನಿನಲ್ಲಿ ವಾಲ್ಮೀಕಿ ಪೀಠ ನಿರ್ಮಿಸುತ್ತಿದ್ದಾರೆ. ಕರ್ನಾಟಕದ ಪ್ರತಿಹಳ್ಳಿಗಳಲ್ಲಿ ವಾಲ್ಮೀಕಿ ಪೀಠಗಳಾಗಬೇಕು ಎಂದು ಹೇಳಿದ ಅವರು, ರಾಜನಹಳ್ಳಿ ಬರೀ ಹಳ್ಳಿಯಲ್ಲ. ಬದಲಾಗಿ ಇದಕ್ಕೆ ‘ರಾಜಗುರು’ ಪಟ್ಟ ಬಂದಿದೆ. ನಾಯಕ ಸಮುದಾಯ ಬಹಳಷ್ಟು ಹಿಂದುಳಿದಿದ್ದು, ಶೇ 7.5 ಮೀಸಲಾತಿಗಾಗಿ ಪಾದ ಸವೆದರೂ ಸಮಾಜ ಸವೆಯಬಾರದು ಎಂಬ ಉದ್ದೇಶದಿಂದ ಪಾದಯಾತ್ರೆ ಮಾಡಿದರು’ ಎಂದು ಹೇಳಿದರು.

ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ‘ವಾಲ್ಮೀಕಿ ಬರೆದ ರಾಮಾಯಣದಲ್ಲಿ ತತ್ವ ಅಡಗಿದ್ದು, ಅವುಗಳನ್ನು ರೂಢಿಸಿಕೊಳ್ಳಬೇಕು. ಯಾವ ಸಮುದಾಯ ಗುರು ಹೇಳಿದ ಹಾಗೆ ನಡೆದುಕೊಂಡರೆ ಆ ಸಮುದಾಯ ಜಾಗೃತಗೊಳ್ಳುತ್ತದೆ. ಅವರು ಹೇಳಿದ ಹಾಗೆ ನಡೆದುಕೊಂಡರೆ ಅವಕಾಶಗಳು ಸಿಗುತ್ತವೆ. ಗುರುಗಳ ಆದರ್ಶದ ಮೇಲೆ ಭಕ್ತರು ಮುಂದುವರೆಯಬೇಕು’ ಎಂದು ಹೇಳಿದರು.

ವಾಲ್ಮೀಕಿ ಗುರು‍ಪೀಠದ ಪ್ರಸನ್ನಾನಂದ ಸ್ವಾಮೀಜಿ ‘ಬದಲಾವಣೆ ಈ ಜಗತ್ತಿನ ನಿರಂತರ ಪ್ರಕ್ರಿಯೆ, ಬದಲಾವಣೆ ಮತ್ತು ಪರಿವರ್ತನೆ ವ್ಯಕ್ತಿಗತವಾಗಿ ಆದಾಗ ಮಾನವ ಮಹದೇವನಾಗುತ್ತಾನೆ. ನರ ನಾರಾಯಣನಾಗುತ್ತಾನೆ. ತನ್ನ ಬದುಕಿನಲ್ಲಿ ಪರಿವರ್ತನೆಯಾಗುವ ಮೂಲಕ ಮಹತ್ತರ ಸಾಧನೆ ಮಾಡಿದ ಮಹರ್ಷಿ ವಾಲ್ಮೀಕಿ. ಈ ಸಮುದಾಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಾಗೂ ಎಲ್ಲ ಸಮುದಾಯದ ಜೊತೆ ಆರೋಗ್ಯಕರ ಸ್ಪರ್ಧೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಹಿನ್ನೆಲೆಯಲ್ಲಿ ಜಾತ್ರೆಯನ್ನು ಆಯೋಜಿಸಲಾಗಿದೆ’ ಎಂದರು.

ಕುಮ್ಮಿನಕಟ್ಟೆ ಪದ್ಮಶಾಲಿ ಗುರುಪೀಠದ ಪ್ರಭುಲಿಂಗ ಸ್ವಾಮೀಜಿ, ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಇಳಕಲ್ ಚಿತ್ತರಗಿ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಶಿವಯೋಗಿಗಳು, ಚಿತ್ರದುರ್ಗದ ಮಾಚಿದೇವ ಗುರುಪೀಠದ ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಡಾ.ಮರುಳಸಿದ್ಧ ಸ್ವಾಮೀಜಿ, ಸಿದ್ಧಬಸವ ಕಬೀರ ಸ್ವಾಮೀಜಿ, ಹುಕ್ಕೇರಿ ಶಿವಬಸವ ಸ್ವಾಮೀಜಿ, ಪಂಚಮಶಿವಲಿಂಗಸ್ವಾಮೀಜಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು