ಹಳ್ಳಿಗಳ ಸಮಸ್ಯೆ: ಜನಪ್ರತಿನಿಧಿಗಳಿಗೆ ಪಾಠ ಕಲಿಸಿ- ಸಾತಿ ಸುಂದರೇಶ್ ಹೇಳಿಕೆ

ಹರಪನಹಳ್ಳಿ: ಕಾಲ್ನಡಿಗೆ ಜಾಥಾ ಸಂದರ್ಭದಲ್ಲಿ ಹರಪನಹಳ್ಳಿ ತಾಲ್ಲೂಕಿನಲ್ಲಿ ಅನೇಕ ಹಳ್ಳಿಗಳ ಜ್ವಲಂತ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಾಲ್ಲೂಕಿನ ಸ್ಥಿತಿಗತಿಗಳ ಬಗ್ಗೆ ಗಮನಕ್ಕೆ ತರಲಾಗುವುದು ಎಂದು ಭಾರತ ಕಮ್ಯುನಿಷ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ಇಲ್ಲಿ ಶನಿವಾರ ನಡೆದ ‘ನಮ್ಮ ತಾಲ್ಲೂಕು, ನಮ್ಮ ಜನ, ನಮ್ಮ ಅಭಿವೃದ್ಧಿ’ ಜಾಥಾದಲ್ಲಿ ಮಾತನಾಡಿದರು.
‘ರಾಜ್ಯದ ಪ್ರತಿ ತಾಲ್ಲೂಕಿನಲ್ಲಿಯೂ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಅವುಗಳನ್ನು ಪಟ್ಟಿ ಮಾಡಿ ಸಿಪಿಐ ವತಿಯಿಂದ ಕಾಲ್ನಡಿಗೆ ಮೂಲಕ ಹೋರಾಟ ನಡೆಸಲಾಗುವುದು. ಜನಪರ ಹೋರಾಟಗಳಿಗೆ ಬೆಂಬಲಿಸದ ಜನಪ್ರತಿನಿಧಿಗಳಿಗೆ ನಾವೆಲ್ಲರೂ ಪಾಠ ಕಲಿಸಬೇಕಿದೆ’ ಎಂದು ಕರೆ ನೀಡಿದರು.
ರಾಷ್ಟ್ರೀಯ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಎ.ಜ್ಯೋತಿ ಮಾತನಾಡಿ, ‘ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಮಹಿಳಾ ಸಬಲೀಕರಣದ ಉದ್ದೇಶದಿಂದ ಮಹಿಳೆಯರ ಸ್ವ ಉದ್ಯೋಗಕ್ಕೆ ಹೆಚ್ಚು ಒತ್ತುಕೊಡಬೇಕು’ ಎಂದು ಆಗ್ರಹಿಸಿದರು.
ಎಐವೈಎಫ್ ರಾಜ್ಯ ಕಾರ್ಯದರ್ಶಿ ಎ.ಎಸ್. ಮೋನಪ್ಪ ಮಾತನಾಡಿ, ‘ಹರಪನಹಳ್ಳಿ ಆರ್ಥಿಕವಾಗಿ ಹಿಂದುಳಿದ ತಾಲ್ಲೂಕಾಗಿದ್ದು, ಶೈಕ್ಷಣಿಕ ಕೇಂದ್ರವಾಗಿದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.
ಸಭೆಯಲ್ಲಿ 60 ಕೆರೆ ನೀರು ತುಂಬಿಸುವ ಕಾಮಗಾರಿ, ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಶೀಘ್ರ ಆರಂಭಿಸುವುದು ಸೇರಿ 23 ಅಂಶಗಳ ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯ ಸಮಿತಿ ಸದಸ್ಯ ಕೆ.ಎಸ್. ಹಡಗಲಿಮಠ್, ಹೊಸಳ್ಳಿ ಮಲ್ಲೇಶ್, ಸಿಪಿಐ ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಸಹ ಕಾರ್ಯದರ್ಶಿಗಳಾದ ಎಚ್.ಎಂ. ಸಂತೋಷ್, ರಮೇಶನಾಯ್ಕ, ಚಂದ್ರನಾಯ್ಕ, ಪಾಲವ್ವನಹಳ್ಳಿ ಪ್ರಸನ್ನ, ಮಾದಿಹಳ್ಳಿ ಮಂಜಪ್ಪ, ಕೊಟ್ರಯ್ಯ, ತಿಂದಪ್ಪ, ವಿಮಲಮ್ಮ, ಮೆಹಬೂಬ್ ಬಾಷಾ, ಸುಮಾ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.