ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾದಿಂದ ಮೃತಪಟ್ಟವರ ವಿವರ ಸಂಗ್ರಹ

ಇಂಧನ ದರ ಏರಿಕೆ ವಿರೋಧಿಸಿ ನಡೆದ ಸೈಕಲ್‌ ಜಾಥಾ ಉದ್ಘಾಟಿಸಿದ ಕೆ.ಎಚ್‌. ಮುನಿಯಪ್ಪ
Last Updated 7 ಜುಲೈ 2021, 16:02 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್‌ನಿಂದ ಮೃತಪಟ್ಟವರ ಸುಳ್ಳು ಲೆಕ್ಕವನ್ನು ಈ ಸರ್ಕಾರ ನೀಡುತ್ತಾ ಬಂದಿದೆ. ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಕೊರೊನಾದಿಂದ ನಿಜವಾಗಿ ನಿಧನರಾದವರ ಲೆಕ್ಕವನ್ನು ಸಂಗ್ರಹಿಸಲಾಗುತ್ತಿದೆ. ಜುಲೈ ಅಂತ್ಯದೊಳಗೆ ಎಲ್ಲ ಜಿಲ್ಲಾ ಸಮಿತಿಗಳು ಕೆಪಿಸಿಸಿಗೆ ವರದಿ ಸಲ್ಲಿಸಲಿವೆ ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸಹಿತ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ನಡೆದ ಸೈಕಲ್‌ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚಾಮರಾಜನಗರದಲ್ಲಿ ಆಮ್ಲಜನಕ ಇಲ್ಲದೇ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದರು. ಅಲ್ಲಿ ನೋಡಿದರೆ 36 ಮಂದಿ ಸತ್ತಿದ್ದರು. ಈ ರೀತಿ ಸರ್ಕಾರ ಸುಳ್ಳು ಮಾಹಿತಿಯನ್ನು ಪ್ರತಿ ಜಿಲ್ಲೆಯಲ್ಲಿ ನೀಡುತ್ತಾ ಬಂದಿದೆ. ನೈಜ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಅದನ್ನು ಸರ್ಕಾರದ ಮುಂದೆ ಇಡಲಾಗುವುದು ಎಂದು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ನರೇಂದ್ರ ಮೋದಿ ಏಳು ವರ್ಷಗಳ ಹಿಂದೆ ಹೇಳಿದ್ದರು. ಈಗ 14 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ಮೋಡಿ ಆಡಳಿತದಲ್ಲಿ ಇರುವ ಉದ್ಯೋಗವನ್ನೇ ಕಳೆದುಕೊಂಡು ಯುವಜನರು ಬೀದಿಗೆ ಬಿದ್ದಿದ್ದಾರೆ ಎಂದು ಟೀಕಿಸಿದರು.

ಡೀಸೆಲ್‌, ಪೆಟ್ರೋಲ್‌ ಬೆಲೆ ಒಂದೇ ಸಮನೆ ಏರುತ್ತಿದೆ. ಕೃಷಿಗೆ ಬಳಸುವ ಪರಿಕರಗಳ ಬೆಲೆ ಏರಿದೆ. ಅಗತ್ಯ ವಸ್ತುಗಳ ಬೆಲೆ ಏರಿದೆ. ಅವುಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕಾಂಗ್ರೆಸ್‌ ಸರ್ಕಾರ ದೇಶಕ್ಕೆ ಅಗತ್ಯ ಎಂದು ಪ್ರತಿಪಾದಿಸಿದರು.

ಸಂಕಷ್ಟದಲ್ಲಿ ಇರುವವರಿಗೆ ಸ್ಪಂದಿಸುವುದು ಕಾಂಗ್ರೆಸ್‌ ಸಂಸ್ಕೃತಿ. ಅದರಂತೆ ಕೊರೊನಾದಿಂದ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನವನ್ನು ಕಾಂಗ್ರೆಸ್‌ ಹೇಳುತ್ತಿದೆ. ಇಂದು ದಾವಣಗೆರೆಯಲ್ಲಿ 10 ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಲಾಯಿತು. ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಪ್ರತಿ ಕುಟುಂಬಕ್ಕೆ ತಲಾ ₹ 10 ಸಾವಿರ ನೀಡಿ ಅವರ ನೋವಿಗೆ ಸ್ಪಂದಿಸಿದರು ಎಂದು ಹೇಳಿದರು.

ಎಸ್‌.ಎಸ್‌. ಮಲ್ಲಿಕಾರ್ಜುನ ಮಾತನಾಡಿ, ‘ಇಷ್ಟು ಹೊತ್ತಿಗೆ ಎಲ್ಲರಿಗೂ ಮೊದಲ ಲಸಿಕೆ ಮುಗಿದು ಎರಡನೇ ಲಸಿಕೆಯೂ ಸಿಗಬೇಕಿತ್ತು. ಆದರೆ ಇನ್ನೂ ಮೊದಲ ಲಸಿಕೆಯೇ ಜಿಲ್ಲೆಯ ಜನರಿಗೆ ಸಿಕ್ಕಿಲ್ಲ. ನಮ್ಮ ಜತೆ ಸರ್ಕಾರವೂ ಕೈ ಜೋಡಿಸಿದ್ದರೆ ಒಂದೊಂದೇ ವಾರ್ಡ್‌ಗಳ ಎಲ್ಲರಿಗೂ ಲಸಿಕೆ ಹಾಕಿಸಿಕೊಂಡು ಬರಬಹುದಿತ್ತು. ಆದರೆ ಕೆಲವರ ಸಣ್ಣತನದಿಂದ ಆಗಿಲ್ಲ. ಸಣ್ಣತನ ಬಿಟ್ಟು ಜನರ ಉಳಿವಿಗಾಗಿ, ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು. ಪ್ರಾಣ ಉಳಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಸೈಕಲ್‌ ಜಾಥಾವನ್ನು ಜಯದೇವ ಸರ್ಕಲ್‌ ವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪೊಲೀಸರು ಅವಕಾಶ ನೀಡಿಲ್ಲ. ಇಲ್ಲಿಯೇ ಪ್ರತಿಭಟನೆ ಮಾಡಬೇಕಾಯಿತು ಎಂದು ಸ್ಪಷ್ಟನೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌, ನಾಯಕರಾದ ಗುರಪ್ಪ ನಾಯ್ಡು, ಅಮೃತೇಶ್‌, ಕೆ.ಎಸ್‌. ಬಸವಂತಪ್ಪ, ಎ.ನಾಗರಾಜ್‌, ಅಯೋಬ್‌ ಪೈಲ್ವಾನ್‌, ಮಂಜುನಾಥ ಇಟ್ಟಿಗುಡಿ, ಜೆ.ಡಿ. ಪ್ರಕಾಶ್‌, ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT