ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

PU Results: ದಾವಣಗೆರೆ ಜಿಲ್ಲೆಗೆ 21ನೇ ಸ್ಥಾನ, ಫಲಿತಾಂಶದಲ್ಲಿ ಶೇ 5ರಷ್ಟು ಏರಿಕೆ

Published 10 ಏಪ್ರಿಲ್ 2024, 15:40 IST
Last Updated 10 ಏಪ್ರಿಲ್ 2024, 15:40 IST
ಅಕ್ಷರ ಗಾತ್ರ

ದಾವಣಗೆರೆ: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆ 21ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಶೇ 80.96 ರಷ್ಟು ಫಲಿತಾಂಶ ದಾಖಲಿಸಿದ್ದು, ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು. ಈ ವರ್ಷ ಫಲಿತಾಂಶದಲ್ಲಿ ಶೇ 5.24ರಷ್ಟು ಹೆಚ್ಚಳವಾಗಿದ್ದು, ಬಿಟ್ಟರೆ ಅಂತಹ ಸಾಧನೆಯಾಗಿಲ್ಲ. ಕಳೆದ ವರ್ಷವೂ 21ನೇ ಸ್ಥಾನ ಪಡೆದಿತ್ತು. ಹಲವು ಕಾರ್ಯಕ್ರಮಗಳ ಹೊರತಾಗಿಯೂ ಫಲಿತಾಂಶದಲ್ಲಿ ಜಿಲ್ಲೆಯ ಸಾಧನೆ ಕಳಪೆಯಾಗಿದೆ.

ಫಲಿತಾಂಶಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಶೇ 74.27 ಗಂಡು, ಶೇ 82.01ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ.

ಸರ್‌ ಎಂ.ವಿ. ಕಾಲೇಜು ಟಾಪರ್‌:

ನಗರದ ಸರ್‌ ಎಂ.ವಿ. ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು 593 ಅಂಕ (ಶೇ 98.83) ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. 

ಕಾಲೇಜಿನ ಅನನ್ಯ ಎಚ್‌.ಎಸ್‌., ಆಕಾಶ್‌ ಸಿ. ಪಾಟೀಲ್‌, ಅಮೃತ ದೊಡ್ಡಬಸಪ್ಪನವರ, ಮೊಹಮ್ಮದ್‌ ಸುಹೇಲ್‌ 593 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಟಾಪರ್‌ ಸ್ಥಾನ ಹಂಚಿಕೊಂಡಿದ್ದಾರೆ.   

ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಾಬಾನು ಪಿ.ಕೆ. 591 ಅಂಕ ಪಡೆದು (ಶೇ 98.5) ಅಂಕ ಪಡೆದು ಜಿಲ್ಲೆಗೆ ಟಾಪರ್‌ ಆಗಿದ್ದಾಳೆ.

ವಾಣಿಜ್ಯ ವಿಭಾಗದಲ್ಲಿ ದಾವಣಗೆರೆ ತಾಲ್ಲೂಕಿನ ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು ಎಂ. 589 (ಶೇ 98.16) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

15,904 ವಿದ್ಯಾರ್ಥಿಗಳು ಉತ್ತೀರ್ಣ:

ಜಿಲ್ಲೆಯಲ್ಲಿ 19,644 ರೆಗ್ಯುಲರ್, 422 ಖಾಸಗಿ ಸೇರಿ ಒಟ್ಟು 20,066 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 15,904 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ಶೇ 57.83ರಷ್ಟು ಫಲಿತಾಂಶ ಬಂದಿದ್ದು, ಶೇ 45 ವಿದ್ಯಾರ್ಥಿಗಳು ಹಾಗೂ ಶೇ 66.46ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22ರಷ್ಟು ಫಲಿತಾಂಶ ಬಂದಿದ್ದು ಶೇ 65.5 ಗಂಡು ಮಕ್ಕಳು, ಶೇ 80.8 ರಷ್ಟು ಹೆಣ್ಣು ಮಕ್ಕಳು ತೇರ್ಗಡೆ ಹೊಂದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶೇ 91.13ರಷ್ಟು ಫಲಿತಾಂಶ ಬಂದಿದ್ದು, ಶೇ 91.39 ವಿದ್ಯಾರ್ಥಿಗಳು ಹಾಗೂ ಶೇ 88.69ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. 

ಗ್ರಾಮೀಣರ ಮೇಲುಗೈ:

ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ವಿದ್ಯಾರ್ಥಿಗಳು, ಶೇ 84.6 ವಿದ್ಯಾರ್ಥಿನಿಯರು ಉತ್ತೀರ್ಣರಾಗುವ ಮೂಲಕ ನಗರ ಪ್ರದೇಶಕ್ಕಿಂತ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದ ಶೇ 80.75 ರಷ್ಟು ಫಲಿತಾಂಶ ಬಂದಿದ್ದು, ಶೇ 74.41 ವಿದ್ಯಾರ್ಥಿಗಳು, ಶೇ 81.37ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ತಿಳಿಸಿದ್ದಾರೆ.

ಶೇ 100ರಷ್ಟು ಫಲಿತಾಂಶ ಪಡೆದ ಕಾಲೇಜುಗಳು:

ನಗರದ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೊನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಗೀತಂ ಪಿಯು ಕಾಲೇಜು ಶೇ 100ರಷ್ಟು ಫಲಿತಾಂಶ ಪಡೆಯುವ ಮೂಲಕ ಸಾಧನೆ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT