ಭಾನುವಾರ, ಜೂಲೈ 5, 2020
28 °C
ಕೋವಿಡ್–19 ಪ್ರಗತಿ ಪರಿಶೀಲನಾ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌

ಭಯ ಬಿಟ್ಟಾಕಿ, ಧೈರ್ಯ ತುಂಬಿಕೊಳ್ಳಿ: ಸಚಿವ ಡಾ. ಕೆ.ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜನರಲ್ಲಿ ಭಯ ತುಂಬುವುದು ಸುಲಭ. ಆದರೆ ಧೈರ್ಯ ತುಂಬುವುದು ಸುಲಭವಲ್ಲ. ಧೈರ್ಯ ತುಂಬುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಸೋಂಕು ಸಾಮಾಜಿಕ ಕಳಂಕವಲ್ಲ. ರೋಗ ಬಂದರೂ 100ಕ್ಕೆ 80 ಮಂದಿ ಚಿಕಿತ್ಸೆ ಇಲ್ಲದೆಯೇ ಗುಣಮುಖರಾಗುತ್ತಾರೆ. ಯಾವ ವೈರಾಣಿಗೂ ಜನರನ್ನು ಸೋಲಿಸಲು ಈವರೆಗೆ ಆಗಿಲ್ಲ. ಕೊರೊನಾ ವೈರಸಿಗೂ ಆಗಲ್ಲ ಎಂದು ತಿಳಿಸಿದರು.

‘ದೇಶದಲ್ಲಿ ಸುಮಾರು 60 ಸಾವಿರ ಪಾಸಿಟಿವ್ ಪ್ರಕರಣಗಳಿದ್ದು, ಕರ್ನಾಟಕ 13 ನೇ ಸ್ಥಾನದಲ್ಲಿ ಇದೆ. ಟ್ರ್ಯಾಕಿಂಗ್, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‌ಮೆಂಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ನಿಗ್ರಹಿಸಲಾಗುತ್ತಿದೆ. ಕೊರೊನಾ ಅದರಷ್ಟಕ್ಕೆ ಬರುವುದಿಲ್ಲ. ನಾವು ತರುವುದು. ಹಾಗಾಗಿ ನಾವು ಸೋಂಕು ಒಯ್ಯುವವರಾಗಬಾರದು’ ಎಂದು ಹೇಳಿದರು.

ಮರಣ ಪ್ರಮಾಣ ಶೇ 3.1 ರಷ್ಟಿದೆ. ಅದರಲ್ಲೂ ಹೃದಯ ತೊಂದರೆ, ಕ್ಯಾನ್ಸರ್, ಡಯಾಬಿಟಿಕ್ ಇತರೆ ತೊಂದರೆಯಿಂದ ಬಳಲುವವರು ಮರಣಕ್ಕೆ ತುತ್ತಾಗುವ ಸಂಭವ ಹೆಚ್ಚಿದೆ ಎಂದರು.

ಕೊರೊನಾ ಸೋಂಕು ಇರುವವರು ಹತ್ತಿರ ಬಂದಾಗ ಗೊತ್ತಾಗಲು ಆರೋಗ್ಯಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲೆಯ ಚಿಗಟೇರಿ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿದ್ದು 300 ಹಾಸಿಗೆಗಳ ವ್ಯವಸ್ಥೆ ಇದೆ. ಇತರೆ ಆರೋಗ್ಯದ ಸಮಸ್ಯೆಗಳಿಗೆ ಬಾಪೂಜಿ, ಎಸ್‌ಎಸ್ ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಖಾಸಗಿ ಆಸ್ಪತ್ರೆಗಳು ಈ ವೇಳೆ ತೆರೆದು ಚಿಕಿತ್ಸೆ ನೀಡದಿದ್ದಲ್ಲಿ ಅವರ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.

ಆರೋಗ್ಯ ಮಿತ್ರ ಮತ್ತು ಆರೋಗ್ಯ ಸೇತು ಆ್ಯಪ್‌ ಕೆಲಸ ಮಾಡುತ್ತಿದೆ. ಇದರ ಜತೆಗೆ ಆಪ್ತಮಿತ್ರ ಕೆಲಸ ಮಾಡುತ್ತಿದೆ. 14410 ಸಹಾಯವಾಣಿಗೆ ಕರೆ ಮಾಡಿದಲ್ಲಿ ಆಪ್ತ ಸಮಾಲೋಚನೆ ವ್ಯವಸ್ಥೆ ಮಾಡಲಾಗಿದೆ. ಆಪ್ತಮಿತ್ರ ಮತ್ತು ಟೆಲಿ ಐಸಿಯು ವ್ಯವಸ್ಥೆಯನ್ನೂ ರಾಜ್ಯ ಮಟ್ಟದಲ್ಲಿ ಪರಿಣಿತ ತಜ್ಞರಿಂದ ಮಾಡಲಾಗಿದೆ ಎಂದರು.

ವೈದ್ಯರು ಮತ್ತು ಹೌಸ್‌ಸರ್ಜನ್‌ಗಳ ಸೇವೆ ದೊಡ್ಡದಾಗಿದ್ದು, ದಾವಣಗೆರೆಯ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿರುವ ಹೌಸ್‌ಸರ್ಜನ್ ಮತ್ತು ಪಿಜಿ ವಿದ್ಯಾರ್ಥಿಗಳಿಗೆ 18 ತಿಂಗಳಿಂದ ಶಿಷ್ಯ ಭತ್ಯೆ ಬಂದಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಭತ್ಯೆ ಪಾವತಿಯಾದ ಬಗ್ಗೆ ಆಕ್ಷೇಪಣೆ ಬಂದಿದ್ದರಿಂದ ಭತ್ಯೆ ನಿಲ್ಲಿಸಲಾಗಿದೆ. ಈ ಬಗ್ಗೆ ಚರ್ಚಿಸಲಾಗುವುದು  ಭರವಸೆ ನೀಡಿದರು.

ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ‘ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ನಿಗಾವಣೆ ಆಗಬೇಕು. ಹೊನ್ನಾಳಿ, ನ್ಯಾಮತಿಯಿಂದ ತರಕಾರಿ ಮತ್ತು ಆಸ್ಪತ್ರೆಯ ಸೇವೆಗಳಿಗೆ ಎಸ್‌ಪಿ ಮತ್ತು ಡಿಸಿ ಪಾಸ್‌ ಒದಗಿಸಿಕೊಡಬೇಕು’ ಎಂದರು.

ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ‘ಆಶಾ ಕಾರ್ಯಕರ್ತೆಯರು, ಗೇಟ್‌ನಲ್ಲಿ ಕೆಲಸ ಮಾಡುವವರಿಗೆ ಉತ್ತಮ ಮಾಸ್ಕ್‌ ನೀಡಬೇಕು. ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ₹ 5 ನೀಡಿ ನೀರು ಪಡೆಯುವುದು ಕೂಡ ಕಷ್ಟ. ಉಚಿತವಾಗಿ ನೀರು ಕೊಡಬೇಕು’ ಎಂದು ಆಗ್ರಹಿಸಿದರು.

ಶಾಸಕರಾದ ಶಾಮನೂರು ಶಿವಶಂಕರಪ್ಪ, ‘ಖಾಸಗಿ ಮೆಡಿಕಲ್ ಕಾಲೇಜಿನ ಪಿಜಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಬೇಕೆಂದು ಮುಖ್ಯಮಂತ್ರಿಯೇ ಆದೇಶಿಸಿದ್ದರೂ ಉಲ್ಲಂಘನೆಯಾಗುತ್ತಿದೆ. ಪಿಜಿ ವಿದ್ಯಾರ್ಥಿಗಳಿಗೆ ಆದಷ್ಟು ಶೀಘ್ರದಲ್ಲಿ ಶಿಷ್ಯ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

ಶಾಸಕರಾದ ಎಸ್.ಎ.ರವೀಂದ್ರನಾಥ್, ‘ನಗರದ ಬಡಾವಣೆಗಳಲ್ಲಿರುವ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡುತ್ತಿರುವುದರಿಂದ ಜನರು ಗಾಬರಿಗೀಡಾಗಿದ್ದಾರೆ. ಊರಿನಿಂದ ಹೊರ ವಲಯದಲ್ಲಿರುವ ಖಾಸಗಿ ಹಾಸ್ಟೆಲ್‌ಗಳಲ್ಲಿ ಇರಿಸಿ’ ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಶಾಸಕ ಅಬ್ದುಲ್ ಜಬ್ಬಾರ್, ಕಂಟೈನ್‌ಮೆಂಟ್ ಝೋನ್‌ನ ಎಲ್ಲರಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದರೆ ಉತ್ತಮ. ಇತರೆ ಸಮಸ್ಯೆಗೆಂದು ಆಸ್ಪತ್ರೆಗೆ ಹೋಗುವವರನ್ನು ಕ್ವಾರಂಟೈನ್ ಮಾಡುವುದು ಬೇಡ’ ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ , ಜಿಲ್ಲಾ ಸರ್ಜನ್ ಡಾ.ನಾಗರಾಜ್, ಡಿಎಚ್‌ಒ ಡಾ. ರಾಘವೇಂದ್ರ ಸ್ವಾಮಿ ಮಾಹಿತಿ ನೀಡಿದರು.

ಶಾಸಕರಾದ ಎಸ್.ವಿ.ರಾಮಚಂದ್ರ, ರಾಮಪ್ಪ, ಶಾಸಕ ಪ್ರೊ.ಲಿಂಗಣ್ಣ, ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಪಾಲಿಕೆ ಆಯುಕ್ತ ಬಿ.ಜಿ. ಅಜಯಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಿಇಒ ಪದ್ಮ ಬಸವಂತಪ್ಪ, ಎಸ್‌ಪಿ ಹನುಮಂತರಾಯ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು