ಬುಧವಾರ, ಮಾರ್ಚ್ 3, 2021
29 °C

ದಾವಣಗೆರೆಯ ಆಲೂರಿನ 9 ರೈತರ ಯಶೋಗಾಥೆ| 50 ಎಕರೆ ಅಡಿಕೆ ತೋಟಕ್ಕೆ ಕೃಷಿಹೊಂಡವೇ ಆಸರೆ

ಡಿ.ಕೆ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಬರಗಾಲ ಇತ್ತು. ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿನ ಮೊರೆಹೋಗಬೇಕಾಯಿತು. ದುಬಾರಿ ಹಣ ನೀಡಿದರೂ ನೀರು ಸಿಗುತ್ತಿರಲಿಲ್ಲ. ಆದರೆ ಈಗ ಆಲೂರು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರೈತರೇ ನಿರ್ಮಿಸಿದ ಸಮುದಾಯ ಕೃಷಿ ಹೊಂಡದಲ್ಲಿ ಭರಪೂರ ನೀರು ಬಂದಿದೆ.

ದಾವಣಗೆರೆ ತಾಲ್ಲೂಕಿನ ಆಲೂರು ಗ್ರಾಮದ 9 ರೈತರ ಯಶೋಗಾಥೆ ಇದು. ಬೇಸಿಗೆ ಬಂದರೂ ನೀರಿನ ಕೊರತೆಯಾಗುವುದಿಲ್ಲ. ಟ್ಯಾಂಕರ್ ನೀರು ಬೇಕಾಗಿಲ್ಲ. 50 ಎಕರೆ ಅಡಿಕೆ ತೋಟಕ್ಕೆ ಹರಿಸಬಹುದಾದಷ್ಟು ನೀರು ಶೇಖರಣೆಯಾಗಿದೆ.

ಎರಡು ತಿಂಗಳ ಹಿಂದೆ ಬೇಸಿಗೆಯಲ್ಲಿ ಅಡಿಕೆ ತೋಟವೆಲ್ಲಾ ಒಣಗಿಹೋಯಿತು. ಆಗ ನೆರವಿಗೆ ಬಂದಿದ್ದೇ ಸಮುದಾಯ ಕೃಷಿ ಹೊಂಡ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ₹ 4 ಲಕ್ಷ ಸಬ್ಸಿಡಿ ಪಡೆದು ಇಲಾಖೆಯಿಂದ ಮಾಹಿತಿ ಪಡೆದುಕೊಂಡರು.

ಗ್ರಾಮದ ರೈತರಾದ ಆಲೂರು ಚನ್ನಬಸಪ್ಪ, ಕೊರ್ಕಿ ಸಿದ್ದಬಸಪ್ಪ, ಕೆ.ಎಸ್. ಬಸವರಾಜಪ್ಪ, ಸಿದ್ದಪ್ಪ, ಮಹದೇವಪ್ಪ, ಶಿವನಂದಪ್ಪ, ಚನ್ನಬಸಪ್ಪ, ವಿಜಯ್‌ಕುಮಾರ್‌, ಮಂಜುನಾಥ್ ಒಗ್ಗೂಡಿ ಅವರ ಜಮೀನಿನ ಮಧ್ಯೆ ಕೃಷಿ ಹೊಂಡ ನಿರ್ಮಿಸಲು ಸಜ್ಜಾದರು. ಎರಡು ತಿಂಗಳ ನಿರಂತರ ಶ್ರಮದ ಫಲವಾಗಿ 45X45X3 ಮೀಟರ್ ಅಳತೆಯ ಹೊಂಡ ನಿರ್ಮಾಣವಾಗಿದೆ. ಮಳೆಯಿಂದಾಗಿ ಕೃಷಿ ಹೊಂಡಕ್ಕೆ ಸಮೃದ್ಧವಾಗಿ ನೀರು ಬಂದಿದೆ.

‘₹25 ಲಕ್ಷ ವೆಚ್ಚದಲ್ಲಿ ಕೃಷಿ ಹೊಂಡಕ್ಕೆ ಪಾಟ್, ಪಿಂಚಿಂಗ್, ಗೇಟ್‌ಗಳನ್ನು ಅಳವಡಿಸಿದ್ದು, ಸಂಗ್ರಹವಾದ ನೀರು ವ್ಯರ್ಥವಾಗದಂತೆ ತಾಡಪಾಲು ಅಳವಡಿಸಿದ್ದೇವೆ. ತಂತಿಬೇಲಿ ಅಳವಡಿಸಲಾಗಿದೆ. 200 ಅಡಿ ಉದ್ದ 190 ಅಗಲ 25 ಅಡಿ ಆಳವಿರುವ ಈ ಕೃಷಿ ಹೊಂಡದ ಸುತ್ತಮುತ್ತ ರೈತರು ಬಾಳೆ, ಅಡಿಕೆಯನ್ನು ಬೆಳೆದಿದ್ದಾರೆ.


ಆಲೂರು ಚನ್ನಬಸಪ್ಪ

‘ಬರಗಾಲದಿಂದಾಗಿ ಬದುಕು ನಡೆಸುವುದು ದುಸ್ತರವಾದಾಗ 9 ಮಂದಿ ರೈತರು ಒಗ್ಗೂಡಿ ಸಮುದಾಯ ಕೃಷಿ ಹೊಂಡ ನಿರ್ಮಿಸಿದೆವು. ಈಗ ನಮಗೆ ನೀರಿನ ಬರವಿಲ್ಲ. ಹಲವು ರೈತರು ಕೃಷಿ ಹೊಂಡ ನೋಡಿ ಪ್ರೇರಿತರಾಗಿದ್ದಾರೆ. ಮಳೆಗಾಲದಲ್ಲಿ ತುಂಬಿಸಿದರೆ ಬೇಸಿಗೆಯಲ್ಲಿ ನೀರು ಬಳಸಿಕೊಳ್ಳಲು ಅನುಕೂಲವಾಗುತ್ತದೆ. ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮುದಾಯ ಕೃಷಿ ಹೊಂಡ ನಿರ್ಮಿಸಿದ್ದೇವೆ. ನಮಗೆ ಈಗ ಯಾವುದೇ ಭಯವಿಲ್ಲ’ ಎನ್ನುತ್ತಾರೆ. ರೈತ ಆಲೂರು ಚನ್ನಬಸಪ್ಪ.

‘ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಮುದಾಯ ಕೃಷಿ ಹೊಂಡಕ್ಕೆ ಸಬ್ಸಿಡಿ ನೀಡಿದ್ದೇವೆ. ಬೇಸಿಗೆ ಬಂದರೂ

ತೋಟವನ್ನು ಉಳಿಸಿಕೊಳ್ಳಬಹುದು’ ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ವಿಜಯ್‌ಕುಮಾರ್‌ ಹಾಗೂ ವಿಷಯ ತಜ್ಞೆ ಅಪೂರ್ವ.

* ಹಿಂದೊಮ್ಮೆ ನೀರು ಇಲ್ಲದೆ ಅಡಿಕೆ ತೋಟ ಒಣಗಿಹೋಯಿತು. ಆಗ ಬೆಳೆಯನ್ನು ನಾಶ ಮಾಡಿದೆ. ಕೃಷಿ ಹೊಂಡದಿಂದ ನಮಗೆ ಆತ್ಮಸ್ಥೈರ್ಯ ಬಂದಿದೆ

-ಆಲೂರು ಚನ್ನಬಸಪ್ಪ, ರೈತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು