ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ವರ್ಷಧಾರೆ: ಹಲವೆಡೆ ಜಮೀನು ಜಲಾವೃತ

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕೆಲವೆಡೆ ಉತ್ತಮ ಮಳೆ
Published 6 ಜೂನ್ 2024, 16:05 IST
Last Updated 6 ಜೂನ್ 2024, 16:05 IST
ಅಕ್ಷರ ಗಾತ್ರ

ಶಿವಮೊಗ್ಗ/ಹುಬ್ಬಳ್ಳಿ: ರಾಜ್ಯದಲ್ಲಿ ಗುರುವಾರ ಶಿವಮೊಗ್ಗ, ಹುಬ್ಬಳ್ಳಿ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ವಿವಿಧೆಡೆ ಉತ್ತಮ ಮಳೆಯಾಗಿದೆ. ಹಲವೆಡೆ ಜಮೀನು ಜಲಾವೃತವಾಗಿವೆ. ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು ಬಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಶಿವಮೊಗ್ಗ ನಗರದಲ್ಲಿ ಒಂದೂವರೆ ಗಂಟೆ ಧಾರಾಕಾರ ಮಳೆಯಾಗಿದ್ದು, ಬಾಪೂಜಿ ನಗರ, ಹೊಸಮನೆ ಬಡಾವಣೆ ಸೇರಿ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ಜನರು ಪರಿತಪಿಸಿದರು.

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಜೆ ಸುಮಾರು ಗಂಟೆ ಮಳೆಯಾಗಿದೆ.  ಜಿಲ್ಲೆಯ ಹೊನ್ನಾಳಿ, ಜಗಳೂರು, ಹರಿಹರ, ಚನ್ನಗಿರಿ ಹಾಗೂ ಬಸವಾಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ. ಹಳ್ಳ–ಕೊಳ್ಳಗಳು ತುಂಬಿಹರಿದಿವೆ.

ಹೊನ್ನಾಳಿ ಪಟ್ಟಣದಲ್ಲಿ ಎರಡು ದಿನದ ಬಿಡುವಿನ ನಂತರ ಗುರುವಾರ ಮಳೆಯಾಗಿದ್ದು, ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಸಜ್ಜಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸದುರ್ಗ ಸುತ್ತಮುತ್ತ, ಚಿಕ್ಕಜಾಜೂರು, ನಾಯಕನಹಟ್ಟಿ, ಮೊಳಕಾಲ್ಮುರು ವ್ಯಾಪ್ತಿಯಲ್ಲಿ ಮಳೆಯಾಗಿದೆ.

ಹುಬ್ಬಳ್ಳಿ ವರದಿ: ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಬಳ್ಳಾರಿ ಜಿಲ್ಲೆಯ ಕೆಲವೆಡೆ ಧಾರಾಕಾರ ಮಳೆಯಾಯಿತು.

ಬೆಳಗಾವಿ ಜಿಲ್ಲೆಯ ಬೈಲಗೊಂಗಲ, ಗೋಕಾಕ ಹಾಗೂ ಗದಗ ಜಿಲ್ಲೆಯ ಗದಗ ಬೆಟಗೇರಿ, ಲಕ್ಷ್ಮೇಶ್ವರದಲ್ಲಿ ಸಾಧಾರಣ ಮಳೆಯಾಯಿತು.

ವಿಜಯನಗರ ಜಿಲ್ಲೆಯಲ್ಲಿ ಜಲಾನಯನ ಪ್ರದೇಶಗಳಲ್ಲಿ ಮಳೆ ಆಗುತ್ತಿರುವ ಕಾರಣ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಸ್ವಲ್ಪ ಏರಿಕೆಯಾಗಿದೆ. ಗುರುವಾರ ಒಳಹರಿವಿನ ಪ್ರಮಾಣ 1,670 ಕ್ಯೂಸೆಕ್‌ ಇತ್ತು. 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 3.63 ಟಿಎಂಸಿ ಅಡಿ ನೀರಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾರಿ ಗಾಳಿ ಮತ್ತು ಗುಡುಗು ಸಿಡಿಲಿನ ಆರ್ಭಟದೊಂದಿಗೆ  ಅರ್ಧ ತಾಸು ಧಾರಾಕಾರವಾಗಿ ಮಳೆ ಸುರಿಯಿತು.

ಬೆಟ್ಟದ ಪರಿಸರದಲ್ಲಿ ಸುರಿದ ರಭಸದ ಮಳೆಯಿಂದ ಬೆಟ್ಟದ ಬಳಿಯ ಜೋಡಿ ಜಲಧಾರೆಗಳು ಧುಮ್ಮಿಕ್ಕಿದವು. ಜೋಡಿ ಜಲಧಾರೆಯನ್ನು ನಿಸರ್ಗ ಪ್ರಿಯರು ವೀಕ್ಷಿಸಿ ಸಂತಸಪಟ್ಟರು.

ಚಿಕ್ಕಮಗಳೂರು ವರದಿ: ಚಿಕ್ಕಮಗಳೂರು ನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತವಾದವು. ಉಳಿದಂತೆ ತರೀಕೆರೆ, ಕಡೂರು, ಎನ್.ಆರ್.ಪುರ, ಮುಡಿಗೆರೆ, ಕೊಪ್ಪ ಸುತ್ತಮುತ್ತ ಕೂಡ ಸಾಧಾರಣ ಮಳೆಯಾಗಿದೆ.

ಕಲ್ಯಾಣ ಕರ್ನಾಟಕದ ಕೊಪ್ಪಳ, ಕಲಬುರಗಿ ನಗರ, ಬೀದರ ಜಿಲ್ಲೆಯ ವಿವಿಧೆಡೆಯೂ  ಉತ್ತಮ ಮಳೆಯಾಗಿದೆ.

ಪ‍್ರತ್ಯೇಕ ಪ್ರಕರಣ: ಸಿಡಿಲು
ಬಡಿದು ಮೂವರು ಸಾವು

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಹೋಬಳಿ ಜೆ.ರಾಂಪೂರದಲ್ಲಿ ರತ್ನಮ್ಮ ದೊಡ್ಡಪ್ಪ ಓತಗೇರಿ (43) ಜಮೀನಿಗೆ ತೆರಳಿದ್ದಾಗ ಸಿಡಿಲು ಬಡಿದು ಮೃತಪಟ್ಟರು.

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಬಿರುಗಾಳಿಗೆ ಹಲವೆಡೆ ಮರಗಳು ಉರುಳಿಬಿದ್ದಿವೆ.

ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ತೀರ್ಥಹಳ್ಳಿ ತಾಲ್ಲೂಕಿನ ಗುಜುಗೊಳ್ಳಿಯಲ್ಲಿ ಸಿಡಿಲು ಬಡಿದು ಕೃಷಿ ಕಾರ್ಮಿಕ ನಾಗೇಂದ್ರ ಎಮ್‌.ಎಸ್‌. (45) ಮೃತಪಟ್ಟರು.

ಗದಗ ಜಿಲ್ಲೆ ನರಗುಂದದ ಗುಡ್ಡದಕೇರಿ ಓಣಿಯ ಕುರಿಗಾಹಿ ರಮೇಶ ಹನುಮಂತ ಕಿಲಿಕೈ (17)  ಬೈರನಹಟ್ಟಿ ಗ್ರಾಮದ ಬಳಿ ಕುರಿ ಕಾಯುವಾಗ, ಸಿಡಿಲು ಬಡಿದು ಮೃತಪಟ್ಟರು.

ಶಿವಮೊಗ್ಗದಲ್ಲಿ ಗುರುವಾರ ಮಳೆಯ ನಡುವೆ ಸ್ಕೂಟರ್ ಸವಾರರೊಬ್ಬರು ತೆರಳಿದ ನೋಟ
ಶಿವಮೊಗ್ಗದಲ್ಲಿ ಗುರುವಾರ ಮಳೆಯ ನಡುವೆ ಸ್ಕೂಟರ್ ಸವಾರರೊಬ್ಬರು ತೆರಳಿದ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT