ಗುರುವಾರ , ಮಾರ್ಚ್ 30, 2023
22 °C

ಹೊಸನಗರ ರೈತನ ಕೈಹಿಡಿದ ಸುಗಂಧರಾಜ- ಎಲ್ಲ ಕಾಲದಲ್ಲೂ ಸಿಗುವ ಹೂಗಳಿಗೆ ಬೇಡಿಕೆ ಕಾಯಂ

ಎನ್‌.ವಿ. ರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಬಸವಾಪಟ್ಟಣ: ಸಮೀಪದ ಹೊಸನಗರದ ರೈತ ಸಿದ್ಧಪ್ಪ 5 ವರ್ಷಗಳಿಂದ ಸುಗಂಧರಾಜ ಹೂಗಳನ್ನು ಬೆಳೆದು ಯಶಸ್ಸು ಸಾಧಿಸಿದ್ದಾರೆ.

ಸುಗಂಧರಾಜ ವರ್ಷದ ಎಲ್ಲ ಕಾಲದಲ್ಲಿಯೂ ಬೆಳೆಯುವ ಹೂ. ಅದರಂತೆ ಪ್ರತಿ ದಿನವೂ ಈ ಹೂವಿಗೆ ಅಷ್ಟೇ ಬೇಡಿಕೆ ಇದೆ. ಈ ಹೂವನ್ನು ಮಹಿಳೆಯರು ಮುಡಿಯುವುದಿಲ್ಲ. ದೇವರಿಗೆ ಹಾಕಲು ಹಾಗೂ ಅಲಂಕಾರಕ್ಕಾಗಿ ಮಾಲೆಗಳನ್ನು ಕಟ್ಟುವುದಕ್ಕೆ ಮಾತ್ರ ಬಳಸಲಾಗುತ್ತದೆ. ಪ್ರತಿ ದಿನ ಒಂದಲ್ಲ ಒಂದು ಹಬ್ಬ, ಸಮಾರಂಭಗಳು ನಡೆಯುತ್ತಲೇ ಇರುವುದರಿಂದ ಸುಗಂಧರಾಜದ ಮಾಲೆಗಳಿಗೆ ಬೇಡಿಕೆ ಹೆಚ್ಚು. ಇಂತಹ ಹೂ ಬೆಳೆದು ಯಶಸ್ಸು ಹಾಗೂ ಹಣ ಸಂಪಾದಿಸಿ ತೃಪ್ತಿ ಹೊಂದಿದ್ದಾರೆ ರೈತ ಸಿದ್ಧಪ್ಪ.

‘ಬಾಳೆಯಂತೆ ಸುಗಂಧರಾಜವೂ ಸಹ ಬೀಜ ರಹಿತ ಬೆಳೆಯಾಗಿದೆ. ಇದರ ಗಡ್ಡೆಯನ್ನು ನೆಟ್ಟು ಗಿಡ ಬೆಳೆಸಬೇಕಾಗುತ್ತದೆ. ಕೆಂಪು ಮತ್ತು ಕಪ್ಪು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುವ ಸುಗಂಧರಾಜದ ಫಸಲಿಗೆ ನಿರಂತರ ನಿಗಾ ವಹಿಸುವುದು ಮುಖ್ಯ. ಒಂದು ಗಿಡ 18 ತಿಂಗಳ ಕಾಲ ನಿರಂತರವಾಗಿ ಹೂಗಳನ್ನು ನೀಡುತ್ತದೆ ನಂತರ ಅದನ್ನು ತೆಗೆದು ಬೇರೆ ಗಡ್ಡೆ ನೆಡಬೇಕು. ಶೇ 60ರಷ್ಟು ಕೊಟ್ಟಿಗೆ ಗೊಬ್ಬರ ಶೇ 40ರಷ್ಟು ರಾಸಾಯನಿಕ ಗೊಬ್ಬರ ಬಳಸಿ ಅರ್ಧ ಎಕರೆಯಲ್ಲಿ ಹೂಗಳನ್ನು ಬೆಳೆಯುತ್ತಿದ್ದೇನೆ. ದಿನಕ್ಕೆ ಸರಾಸರಿ 25 ರಿಂದ 30 ಕೆ.ಜಿ. ಹೂ ಬರುತ್ತಿದೆ. ಹಬ್ಬ ಹಾಗೂ ಮದುವೆ ಸೀಜನ್‌ಗಳಲ್ಲಿ ಬೇಡಿಕೆಯೂ ಹೆಚ್ಚು, ಬೆಲೆಯೂ ಹೆಚ್ಚು. ಸೀಜನ್‌ ಮುಗಿದ ಮೇಲೆ
ಬೆಲೆ ಸಹಜವಾಗಿ ಇಳಿಯುತ್ತದೆ. ಆದ್ದರಿಂದ ಪ್ರತಿ ದಿನ ನಾನು ಹೂ ಮಾರುವ ಅಂಗಡಿಗಳಿಗೆ ನಿಗದಿತ ದರಕ್ಕೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡುತ್ತಿದ್ದೇನೆ. ಪ್ರತಿದಿನ ಮುಂಜಾನೆ ಹೂ ಬಿಡಿಸಿ, ತಕ್ಷಣವೇ ಅಂಗಡಿಗಳಿಗೆ ಸಾಗಿಸಬೇಕು. ತಡವಾದರೆ
ಹೂ ಮಾರಾಟವಾಗುವುದಿಲ್ಲ. ಈ ಹೂ ಬೆಳೆಯಲ್ಲಿ ಶ್ರಮವೂ ಇದೆ. ಲಾಭವೂ ಇದೆ. ರೈತರಲ್ಲಿ ಬೆಳೆಯುವ ಆಸಕ್ತಿ ಬಹು ಮುಖ್ಯ’ ಎನ್ನುತ್ತಾರೆ ಸಿದ್ಧಪ್ಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು