ಬುಧವಾರ, ಮೇ 18, 2022
28 °C
ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ತೀರ್ಮಾನ

ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ತೋಳಹುಣಸೆಯಲ್ಲಿ ನ್ಯಾಷನಲ್‌ ಟೆಕ್ಸ್‌ಟೈಲ್‌ ಕಾರ್ಪೊರೇಷನ್‌ ಅಡಿಯಲ್ಲಿ 138 ಎಕರೆ ಭೂಮಿ ಇದೆ. ಅಲ್ಲಿ ಯಾವುದೇ ಕೆಲಸಗಳಾಗಿಲ್ಲ. ಇದೀಗ ಕೇಂದ್ರ ಸರ್ಕಾರ ದೇಶದಲ್ಲಿ ಒಟ್ಟು ಏಳು ಮೆಗಾ ಟೆಕ್ಸ್‌ಟೈಲ್ಸ್‌ ಪಾರ್ಕ್‌ ಮಾಡಲು ಉದ್ದೇಶಿಸಿದೆ. ಅದರಲ್ಲಿ ಒಂದನ್ನು ಈ ಜಾಗದಲ್ಲಿ ಮಾಡಲು ಯಾವುದೇ ಆಕ್ಷೇಪಗಳಿಲ್ಲ ಎಂದು ಶಿಫಾರಸು ಮಾಡಲು ನಿರ್ಧರಿಸಲಾಯಿತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಏಕಗವಾಕ್ಷಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.

ಏಕಗವಾಕ್ಷಿ ಸಭೆಯಲ್ಲಿ ತೀರ್ಮಾನ ಕೈಗೊಂಡು ಪ್ರಸ್ತಾವ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ. ಅದರಂತೆ ಇಲ್ಲಿಂದ ಒಪ್ಪಿಗೆ ಕಳುಹಿಸಬೇಕು ಎಂದು ಜವಳಿ ಉದ್ಯಮಿ ಮಂಜುನಾಥ ನಾಯ್ಕ ಕೋರಿದರು. ಅದಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ನ್ಯಾಷನಲ್‌ ಪೆನ್ಶನ್‌ ಸ್ಕೀಂ ಫಾರ್‌ ದಿ ಟ್ರೇಡರ್ಸ್‌ ಆ್ಯಂಡ್‌ ಸೆಲ್ಫ್‌ ಎಂಪ್ಲಾಯಿಡ್‌ ಪರ್ಸನ್ಸ್‌ ಯೋಜನೆಯಡಿ ಎಲ್ಲ ಅಂಗಡಿ ಮಾಲೀಕರು, ಚಿಲ್ಲರೆ ವ್ಯಾಪಾರಿಗಳು, ಅಕ್ಕಿಗಿರಣಿ ಮಾಲೀಕರು, ಎಣ್ಣೆ ಗಿರಣಿ ಮಾಲೀಕರು, ವರ್ಕ್‌ಶಾಪ್‌ ಮಾಲೀಕರು, ಕಮಿಷನ್‌ ಏಜೆಂಟ್ಸ್‌, ರಿಯಲ್‌ ಎಸ್ಟೇಟ್‌ ಬ್ರೋಕರ್‌ಗಳು, ಸಣ್ಣ ಹೋಟೆಲ್‌, ರೆಸ್ಟೊರಂಟ್‌ ಮಾಲೀಕರು, ಸ್ವಯಂ ಉದ್ಯೋಗಿಗಳು ಸಹಿತ ಹಲವರು ಪಿಂಚಣಿ ಪಡೆಯಬಹುದು. ಫಲಾನುಭವಿಗಳಿಂದ ‍ಪ್ರತಿ ತಿಂಗಳಿಗೆ ₹ 200ರಂತೆ ಸುಮಾರು 40 ವರ್ಷ ಕಟ್ಟಿಸಿಕೊಳ್ಳಲಾಗುತ್ತದೆ. ಈ ವರ್ಷಗಳು ಕಡಿಮೆಯಾದಂತೆ ಕಟ್ಟುವ ಮೊತ್ತ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇಪಿಎಫ್‌, ಇಎಸ್ಐ ಪಡೆಯುವವರು ಇದರ ಅಡಿಯಲ್ಲಿ ಬರುವುದಿಲ್ಲ. ಉಳಿದವರಿಗೆ 60 ವರ್ಷದ ಬಳಿಕ ₹ 3000 ಪಿಂಚಣಿ ಸಿಗಲಿದೆ ಎಂದರು.

ಉದ್ಯಮಿಗಳು ತೆರಿಗೆ ಕಟ್ಟಬೇಕು. ಅವರಿಗೆ ಸೌಲಭ್ಯ ಒದಗಿಸಬೇಕು ಎಂದು ತೀರ್ಮಾನಿಸಲಾಯಿತು. ಹೊಸ ತೆರಿಗೆ ಜತೆಗೆ ಹಳೇ ಬಾಕಿ ಕೂಡ ವಸೂಲಿಯಾಗಬೇಕು. ಅದರ ಬಡ್ಡಿ ಮನ್ನಾ ವಿಚಾರ ಇರುವುದರಿಂದ ಈ ಬಗ್ಗೆ ಮುಂಚೆ ಚರ್ಚಿಸಲು ನಿರ್ಧರಿಸಲಾಯಿತು. ಕರೂರಿನಲ್ಲಿ ಇರುವ ನೀರಿನ ಸಮಸ್ಯೆ ಸರಿಪಡಿಸಲು ಸೂಚಿಸಲಾಯಿತು. ಗೃಹಕೈಗಾರಿಕೆಗಳಿಗೆ ನಿರಾಕ್ಷೇಪಣಾ ಪತ್ರ ನೀಡಲು ತಿಳಿಸಲಾಯಿತು. ಎಸ್‌ಸಿ, ಎಸ್‌ಟಿಯವರಿಗೆ ಸಬ್ಸಿಡಿಗೆ ಅನುಕೂಲ ಆಗುವಂತೆ ಐದು ಎಕರೆ ಬದಲು ಎರಡು ಎಕರೆಗಳ ಸೈಟ್‌ ಮಾಡಬೇಕು ಎಂದು ಪತ್ರ ಬರೆಯಲು ನಿರ್ಧರಿಸಲಾಯಿತು.

ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘದ ಕಾರ್ಯದರ್ಶಿ ಹನುಮಂತರಾವ್, ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸಿದ್ಧನಗೌಡ ಮುದಿಗೌಡರ್‌, ಎಸ್‌.ಎನ್‌. ಬಾಲಜಿ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿನಿರ್ದೇಶಕ ಎಚ್.ಎಸ್. ಜಯಪ್ರಕಾಶ್ ನಾರಾಯಣ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್, ಕೆಐಎಡಿಬಿ ಅಧಿಕಾರಿ ಶ್ರೀಧರ್ ಅವರೂ ಇದ್ದರು.

18 ಸೈಟಿಗೆ 18 ಅರ್ಜಿ

ಹರಿಹರ ತಾಲ್ಲೂಕಿನ ಸಾರಥಿ–ಕುರುಬರಹಳ್ಳಿ ಕೈಗಾರಿಕಾ ವಸಾಹತಿನಲ್ಲಿ ಖಾಲಿ ಇರುವ ನಿವೇಶನಗಳಿಗೆ ಅರ್ಜಿ ಕರೆಯಲಾಗಿತ್ತು. ಒಟ್ಟು 18 ನಿವೇಶನಗಳಿಗೆ 18 ಅರ್ಜಿಗಳು ಮಾತ್ರ ಬಂದಿರುವುದು ಅಚ್ಚರಿಯನ್ನು ಉಂಟು ಮಾಡಿತು. ಒಂದಕ್ಕಿಂತ ಹೆಚ್ಚು ಅರ್ಜಿಗಳು ಬಂದಾಗ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗುತ್ತದೆ. ಒಂದೇ ಬಂದರೆ ಕಟ್ಟುನಿಟ್ಟು ಅಷ್ಟು ಇರುವುದಿಲ್ಲ ಎಂದು ಕೆಎಸ್‌ಎಸ್‌ಐಡಿಸಿ ಅಧಿಕಾರಿ ತಿಳಿಸಿದ್ದು ಅನುಮಾನಕ್ಕೆ ಕಾರಣವಾಯಿತು.

‘ಒಂದೇ ಅರ್ಜಿ ಇದ್ದರೆ ನಿಯಮಗಳಿಲ್ಲದೇ ನೀಡುತ್ತೀರಿ. ಆಮೇಲೆ ಅವರು ಉದ್ದಿಮೆ ಆರಂಭಿಸದಿದ್ದರೆ ಯಾರು ಹೊಣೆ? ಈ ಬಗ್ಗೆ ಸರಿಯಾದ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು