ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಶಕಗಳಿಂದ ಸಂಬಂಧಿಗಳ ಹೋರಾಟ

ಶಾಮನೂರು– ಗೌಡರ ಕುಟುಂಬಗಳ ಹಣಾಹಣಿಯಲ್ಲಿ ಗೌಡರ ಪಾರಮ್ಯ
Last Updated 27 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ದಾವಣಗೆರೆ: 1977ರಲ್ಲಿ ರಚನೆಗೊಂಡಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಲ್ಲಿ ಸಂಬಂಧಿಗಳಾದ ಶಾಮನೂರು ಕುಟುಂಬ ಮತ್ತು ಗೌಡರ ಕುಟುಂಬ ಪರಸ್ಪರ ಸ್ಪರ್ಧೆಗೆ ಇಳಿಯುತ್ತಿವೆ. 1998ರ ಒಂದು ಚುನಾವಣೆಯನ್ನು ಹೊರತುಪಡಿಸಿ ಉಳಿದೆಲ್ಲ ಚುನಾವಣೆಯಲ್ಲಿ ಗೌಡರ ಕುಟುಂಬವೇ ಜಯ ಸಾಧಿಸಿದೆ.

1996ರಲ್ಲಿ ಮೊದಲ ಬಾರಿಗೆ ಗೌಡರ ಮಲ್ಲಿಕಾರ್ಜುನಪ್ಪ ಬಿಜೆಪಿಯಿಂದ ಚುನಾವಣಾ ಅಖಾಡಕ್ಕೆ ಇಳಿದು ಜಯಗಳಿಸಿದ್ದರು. 1998ರಲ್ಲಿ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದರು. ಅವರ ಎದುರಾಳಿಯಾಗಿ ಸಂಬಂಧಿ ಗೌಡರ ಮಲ್ಲಿಕಾರ್ಜುನಪ್ಪರೇ ಬಿಜೆಪಿಯಿಂದ ಇಳಿದಿದ್ದರು. 11,332 ಮತಗಳ ಅಂತರದಿಂದ ಮಲ್ಲಿಕಾರ್ಜುನಪ್ಪರನ್ನು ಶಿವಶಂಕರಪ್ಪ ಮಣಿಸಿದ್ದರು. ಶಾಮನೂರು ಕುಟುಂಬಕ್ಕೆ ಲೋಕಸಭಾ ಚುನಾವಣೆಯಲ್ಲಿ ಇದೊಂದೇ ಸಿಹಿನೆನಪು. ಉಳಿದೆಲ್ಲ ಚುನಾವಣೆಗಳಲ್ಲಿ ಗೌಡರ ಕುಟುಂಬವೇ ಗೆಲುವಿನ ನಗೆ ಬೀರಿದೆ.

1999ರಲ್ಲಿ ಮತ್ತೆ ಶಾಮನೂರು ಶಿವಶಂಕರಪ್ಪ ಮತ್ತು ಗೌಡರ ಮಲ್ಲಿಕಾರ್ಜುನಪ್ಪ ಎದುರು–ಬದುರು ಆದರು. 16,269 ಮತಗಳ ಅಂತರದಿಂದ ಗೆದ್ದ ಮಲ್ಲಿಕಾರ್ಜುನಪ್ಪ ವರ್ಷದ ಹಿಂದಿನ ಸೋಲಿನ ಮುಯ್ಯಿ ತೀರಿಸಿಕೊಂಡರು. ಅದು ಮಲ್ಲಿಕಾರ್ಜುನಪ್ಪ ಅವರ ಕೊನೇ ಚುನಾವಣೆಯಾದರೆ, ಶಾಮನೂರು ಶಿವಶಂಕರಪ್ಪ ಅಲ್ಲಿಂದ ಕೇಂದ್ರ ರಾಜಕೀಯ ಬಿಟ್ಟು ರಾಜ್ಯ ರಾಜಕೀಯದಲ್ಲಿ ತೊಡಗಿಸಿಕೊಂಡರು.

ಮಕ್ಕಳ ಹೋರಾಟ: 2004ರ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಮಲ್ಲಿಕಾರ್ಜುನಪ್ಪ ಅವರ ಮಗ ಜಿ.ಎಂ. ಸಿದ್ದೇಶ್ವರ ಮತ್ತು ಕಾಂಗ್ರೆಸ್‌ನಿಂದ ಶಿವಶಂಕರಪ್ಪ ಅವರ ಮಗ ಎಸ್‌.ಎಸ್‌. ಮಲ್ಲಿಕಾರ್ಜುನ ಕಣಕ್ಕಿಳಿದರು. ಇವರೇ 2009 ಮತ್ತು 14ರಲ್ಲಿಯೂ ಮುಖಾಮುಖಿಯಾದರು. 2004ರಲ್ಲಿ 32,676, 2009ರಲ್ಲಿ 2024 ಹಾಗೂ 2014ರಲ್ಲಿ 17,607 ಮತಗಳ ಅಂತರದಿಂದ ಮೂರು ಚುನಾವಣೆಗಳನ್ನು ಸಿದ್ದೇಶ್ವರ ಗೆದ್ದು ಬೀಗಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಶಿವಶಂಕರಪ್ಪ ಅವರ ಹೆಸರನ್ನು ಕಾಂಗ್ರೆಸ್‌ ಘೋಷಣೆ ಮಾಡಿದ್ದರೂ ಅದೇ ಅಂತಿಮವಲ್ಲ ಎಂಬ ಮಾತು ಹರಿದಾಡತೊಡಗಿದೆ. ಮತ್ತೆ ಮಲ್ಲಿಕಾರ್ಜುನ ಕಣಕ್ಕಿಳಿಯುವರೇ ಅಥವಾ ಇದೇ ಮೊದಲ ಬಾರಿಗೆ ಶಾಮನೂರು ಮನೆಯ ಹೊರಗಿನವರು ಅಖಾಡಕ್ಕೆ ಇಳಿಯುವರೇ ಎಂಬುದು ಮಾರ್ಚ್‌ 28ರಂದು ಕೆಪಿಸಿಸಿ ಕಚೇರಿಯಲ್ಲಿ ತೀರ್ಮಾನವಾಗಲಿದೆ.

ಶಾಮನೂರು ಹೆಸರು ಘೋಷಣೆಯಾದರೂ ಪಕ್ಕಾ ಆಗಿಲ್ಲ!
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಅವರ ಹೆಸರನ್ನು ಕಾಂಗ್ರೆಸ್‌ ಘೋಷಣೆ ಮಾಡಿದೆ. ಆದರೆ, ಅವರೇ ಇಳಿಯುವುದು ಇನ್ನೂ ಪಕ್ಕಾ ಆಗಿಲ್ಲ.

ಪಕ್ಷದಿಂದ ಅಭ್ಯಂತರ ಇಲ್ಲದಿದ್ದರೂ ಸ್ವತಃ ಶಾಮನೂರು ಮನೆಯಲ್ಲಿ ಈ ಬಗ್ಗೆ ತೀರ್ಮಾನವಾಗಿಲ್ಲ ಎನ್ನುತ್ತಾರೆ ಕಾಂಗ್ರೆಸ್‌ನ ಕೆಲವು ನಾಯಕರು.

ಅದಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾರ್ಚ್‌ 28ರಂದು ಮಧ್ಯಾಹ್ನ 2ಕ್ಕೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಭೆ ಕರೆದಿದ್ದಾರೆ. ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಕೆಪಿಸಿಸಿ ಕಾರ್ಯದರ್ಶಿಗಳು, ಪಕ್ಷದ ಮುಖಂಡರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

‘ಬೆಂಗಳೂರಿನ ಸಭೆಯ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ್‌, ಎಚ್‌.ಬಿ. ಮಂಜಪ್ಪ ಅಥವಾ ಬೇರೆ ಯಾರು ಅಭ್ಯರ್ಥಿ ಎಂಬ ಕುತೂಹಲ ಹಾಗೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT