ದಾವಣಗೆರೆ: ‘ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಭದ್ರಾ ನಾಲೆಗಳಿಗೆ 100 ದಿವಸ ನೀರು ಹರಿಸಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದ್ದಾರೆ.
‘ನೀರು ಹರಿಸುವ ಸಂಬಂಧ ಏನು ತೀರ್ಮಾನ ಕೈಗೊಳ್ಳಲಾಗಿತ್ತೋ. ಆ ಆದೇಶವನ್ನು ಯಥಾವತ್ತು ಪಾಲಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಆದರೆ ಈಗ 40 ದಿನಗಳ ಕಾಲ ನೀರು ಹರಿಸಿ ನೀರು ನಿಲುಗಡೆ ಮಾಡಿರುವುದು ಖಂಡನೀಯ. ನಾಲೆಗಳಲ್ಲಿ ನೀರು ಹರಿಸಲು ತೀರ್ಮಾನ ಕೈಗೊಳ್ಳುವ ಮುನ್ನವೇ ಯೋಚನೆ ಮಾಡಬೇಕಾಗಿತ್ತು’ ಎಂದು ಅವರು ತಿಳಿಸಿದ್ದಾರೆ.
‘ರೈತರು ಈಗ ಭತ್ತದ ನಾಟಿ ಮಾಡಿ ಗೊಬ್ಬರ ಇತ್ಯಾದಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. 50 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಭತ್ತದ ನಾಟಿ ಮಾಡಿದ್ದು, ಒಂದೂವರೆ ತಿಂಗಳು ನೀರು ಹರಿಸಿದರೆ ಭತ್ತದ ಬೆಳೆ ರೈತರ ಕೈಗೆ ಸಿಗಲಿದೆ. ನೀರು ಹರಿಸದೇ ಇದ್ದರೆ ರೈತರ ಸ್ಥಿತಿ ಅಯೋಮಯವಾಗಲಿದೆ. ನಾಲೆಯಲ್ಲಿ ನೀರು ನಿಲ್ಲಿಸುವುದೊಂದೆ ಪರಿಹಾರವಲ್ಲ, ಅದರ ಬದಲಾಗಿ ಸರ್ಕಾರ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮೋಡ ಬಿತ್ತನೆ ಮಾಡಲಿ. ರೈತರ ಹಿತ ಕಾಯುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ.
‘ಕೃಷಿಯ ಬಗ್ಗೆ ಅನುಭವವೇ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗಬಹುದು ಎಂಬುದಕ್ಕೆ ಕಾವೇರಿ ಮತ್ತು ಭದ್ರಾ ಜಲಾಶಯ ನೀರು ನಿರ್ವಹಣೆಯಲ್ಲಿ ತೋರುತ್ತಿರುವ ಎಡಬಿಡಂಗಿ ನಿಲುವುಗಳೇ ಉದಾಹರಣೆಯಾಗಿವೆ. ಯಾವುದೇ ಸಬೂಬು ಹೇಳದೇ ಮೊದಲು ನೀರಾವರಿ ಸಲಹಾ ಸಮಿತಿ ಸಭೆಯ ಆದೇಶದಂತೆ ನಾಲೆಯಲ್ಲಿ ನೀರು ಹರಿಸಿ ರೈತರ ಬಗ್ಗೆ ಕಾಳಜಿ ಮೆರೆಯಿರಿ. ಇಲ್ಲದೇ ಇದ್ದರೆ ರೈತರ ಹಿತಕಾಯಲು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ’ ಎಂದು ಸಿದ್ದೇಶ್ವರ ಅವರು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.